ADVERTISEMENT

ಲೋಕಾಯುಕ್ತ ದಾಳಿ ಕುಸಿತ!

ವಿಜಯ್ ಜೋಷಿ
Published 25 ನವೆಂಬರ್ 2015, 20:17 IST
Last Updated 25 ನವೆಂಬರ್ 2015, 20:17 IST

ಬೆಂಗಳೂರು: ಪುತ್ರ ಅಶ್ವಿನ್‌ ರಾವ್ ಬಂಧನದ ನಂತರ ಲೋಕಾಯುಕ್ತ ವೈ. ಭಾಸ್ಕರ ರಾವ್ ಅವರು ಮೇಲಿಂದ ಮೇಲೆ ರಜೆ ಹಾಕುತ್ತಿದ್ದಾರೆ. ಅಕ್ರಮ ಆಸ್ತಿ ಸಂಪಾದಿಸಿದ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ನಡೆಸುವ ದಾಳಿ ಈ ಅವಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಅಡಿ ಅಶ್ವಿನ್ ರಾವ್ ಬಂಧನ ಆಗಿದ್ದು ಜುಲೈ 28ರಂದು. ಅಂದಿನಿಂದ ಸೆಪ್ಟೆಂಬರ್‌ 30ರ ನಡುವಿನ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ – 1988ರ ಅಡಿ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಕೇವಲ ಎರಡು ಬಾರಿ ದಾಳಿ ನಡೆಸಿದ್ದಾರೆ.

ಈ ಮಾಹಿತಿಯನ್ನು ‘ಪ್ರಜಾವಾಣಿ’ ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿ ಪಡೆದುಕೊಂಡಿದೆ. ಅಶ್ವಿನ್‌ ಬಂಧನದ ನಂತರ ನಿರಂತರವಾಗಿ ರಜೆ ಹಾಕುತ್ತಿರುವ ಭಾಸ್ಕರ ರಾವ್, ಈಗಲೂ ರಜೆಯ ಮೇಲಿದ್ದಾರೆ. ಆದರೆ, ಈಗ ಅವರ ಪದಚ್ಯುತಿ ಕೋರಿ ಶಾಸಕರು ಸಲ್ಲಿಸಿರುವ ಮನವಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ಆಗಿರುವ ಕಾರಣ ಅವರು ರಜೆ ಮುಗಿಸಿ ಬಂದರೂ ಕರ್ತವ್ಯ ನಿರ್ವಹಣೆಗೆ ಅವಕಾಶ ಇಲ್ಲ.

ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಸರ್ಕಾರಿ ಅಧಿಕಾರಿಗಳ ನಿವಾಸ, ಆ ಅಧಿಕಾರಿಗಳ ಮಾಲೀಕತ್ವದ ಕಟ್ಟಡಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಆಗಿಂದಾಗ್ಗೆ ದಾಳಿ ನಡೆಸುತ್ತಾರೆ.

ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಬಗ್ಗೆ ಬಲ್ಲ ಮೂಲಗಳಿಂದ ಖಚಿತ ಮಾಹಿತಿ ಸಂಗ್ರಹಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಂಡು ನಂತರ ದಾಳಿ ನಡೆಸುವುದು ಲೋಕಾಯುಕ್ತ ಪೊಲೀಸರು ಅನುಸರಿಸುತ್ತಿರುವ ಕ್ರಮ.

ಭಾಸ್ಕರ ರಾವ್ ಅವರು ರಾಜ್ಯದ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದು 2013ರ ಫೆಬ್ರುವರಿಯಲ್ಲಿ. 2013ರ ಫೆಬ್ರುವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ 70 ಪ್ರಕರಣಗಳಲ್ಲಿ ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಸಂಪಾದಿಸಿದವರ ಮೇಲೆ 2014ರಲ್ಲಿ ನಡೆದ ದಾಳಿಗಳ ಸಂಖ್ಯೆ 77. ಈ ವರ್ಷದ ಸೆಪ್ಟೆಂಬರ್‌ 30ರವರೆಗೆ ನಡೆದಿರುವ ಒಟ್ಟು ದಾಳಿಗಳ ಸಂಖ್ಯೆ 48. ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಅವರು ನೀಡಿದ ಹೇಳಿಕೆ ಆಧರಿಸಿ, ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವಿವರ ಇರುವ ವರದಿಯನ್ನು ಲೋಕಾಯುಕ್ತ ಬೆಂಗಳೂರು ನಗರ ಎಸ್‌ಪಿ ಸೋನಿಯಾ ನಾರಂಗ್ ಅವರು ಲೋಕಾಯುಕ್ತ ರಿಜಿಸ್ಟ್ರಾರ್‌ ಅವರಿಗೆ ರವಾನಿಸಿದ್ದು ಮೇ 11ರಂದು.

ಮೇ 11ರಿಂದ ಸೆಪ್ಟೆಂಬರ್‌ 30ರ ನಡುವಿನ ಅವಧಿಯಲ್ಲಿ ನಡೆದಿರುವುದು 12 ದಾಳಿಗಳು ಮಾತ್ರ ಎಂಬ ಮಾಹಿತಿ ಕೂಡ ಆರ್‌ಟಿಐ ಅಡಿ ಪಡೆದಿರುವ ಉತ್ತರದಲ್ಲಿದೆ.

‘ಲೋಕಾಯುಕ್ತರು ಕಚೇರಿಯಲ್ಲಿ ಉಪಸ್ಥಿತರಿರುವುದಕ್ಕೂ, ಅಕ್ರಮ ಆಸ್ತಿ ಸಂಪಾದಿಸಿದ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸುವುದಕ್ಕೂ ನೇರ ಸಂಬಂಧ ಇಲ್ಲ. ಆದರೆ, ಗಂಭೀರ ಆರೋಪಗಳು ಕೇಳಿ ಬಂದ ನಂತರ ಲೋಕಾಯುಕ್ತರು ರಜೆ ಮೇಲೆ ತೆರಳಿದ ಸಮಯದಲ್ಲಿ, ದಾಳಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿರುವುದು ಈ ಮಾಹಿತಿಯಿಂದ ಗೊತ್ತಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.