ADVERTISEMENT

ಲೋಕಾಯುಕ್ತ ಪೊಲೀಸ್‌ ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್ ಗಡುವು

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಎಲ್ಲಾ ದರ್ಜೆಯ ಪೊಲೀಸ್‌ ಹುದ್ದೆಗಳನ್ನು ಮುಂದಿನ 45 ದಿನಗಳಲ್ಲಿ ಭರ್ತಿ ಮಾಡಲು ಹೈಕೋರ್ಟ್‌ ಸೂಚಿಸಿದೆ.

ಮಂಡ್ಯದ ಡಾ.ವಿ.ಎಲ್‌.ನಂದೀಶ್‌ ವಿರುದ್ಧ ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುವಲ್ಲಿ ವಿಳಂಬ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂಬ ಕ್ರಿಮಿನಲ್‌ ಅರ್ಜಿಯನ್ನು   ನ್ಯಾಯಮೂರ್ತಿ ಎ.ಎನ್‌.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠವು ಬುಧವಾರ ವಿಚಾರಣೆ ನಡೆಸಿತು.

ಕಳೆದ ವಿಚಾರಣೆ ವೇಳೆ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಪೊಲೀಸ್‌ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ನ್ಯಾಯಪೀಠವು ಸೂಚಿಸಿತ್ತು. ಇದರ ಅನುಸಾರ ಗೃಹ ಇಲಾಖೆ ಈ ಸಂಬಂಧ ಕೈಗೊಂಡಿರುವ ಕ್ರಮಗಳನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ನ್ಯಾಯಪೀಠಕ್ಕೆ ವಿವರಿಸಿದರು.

ಈ ವಿವರಣೆಗೆ ಪ್ರತಿಕ್ರಿಯಿಸಿದ ವೇಣುಗೋಪಾಲಗೌಡರು, ‘ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಲು ಏನು ಕಷ್ಟ’ ಎಂದು ಪ್ರಶ್ನಿಸಿದರು.
‘ಹಣಕಾಸು ಇಲಾಖೆಯಿಂದ ಇವಕ್ಕೆ ಹಸಿರು ನಿಶಾನೆ ದೊರೆತಿಲ್ಲ’ ಎಂದು ಪೊನ್ನಣ್ಣ ವಿವರಿಸುತ್ತಿದ್ದಂತೆಯೇ ವೇಣುಗೋಪಾಲಗೌಡರು, ‘ಬಜೆಟ್‌ನಲ್ಲೇ ಇದಕ್ಕೆಲ್ಲಾ ಹಣ ಹೊಂದಿಸಲಾಗಿರುತ್ತದಲ್ಲಾ. ಇವೇನೂ ಹೊಸದಾಗಿ ಸೃಷ್ಟಿಸುವ ಹುದ್ದೆಗಳಲ್ಲವಲ್ಲಾ’ ಎಂದರು.

‘ಈಗಾಗಲೇ ಖಾಲಿ ಇರುವ ಹುದ್ದೆಳನ್ನು ಭರ್ತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.  ಲೋಕಾಯುಕ್ತ ಸಂಸ್ಥೆಗೆ ಎಂದೇ ಪ್ರತ್ಯೇಕ ನೇಮಕವೇನಿಲ್ಲ. ಆದಾಗ್ಯೂ ಕೋರ್ಟ್‌ ಆದೇಶವನ್ನು ಪರಿಪಾಲಿಸಲಾಗುತ್ತಿದೆ’ ಎಂದು ಪೊನ್ನಣ್ಣ  ಉತ್ತರಿಸಿದರು.

ಲೋಕಾಯುಕ್ತ ಪರ ವಕೀಲರಾದ ವೆಂಕಟೇಶ್‌ ಪಿ.ದಳವಾಯಿ, ‘ಹೊಸದಾಗಿ ಅಧಿಕಾರಿಗಳನ್ನು ನೇಮಕ ಮಾಡುವ ಮುನ್ನ  ಅವರಿಗೆ ಸೂಕ್ತ ತರಬೇತಿಯ ಅಗತ್ಯವಿರುತ್ತದೆ’ ಎಂಬ ಅಂಶವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

‘ಯಾರು 2  ಮತ್ತು 5 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೋ ಅಂತಹ ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಮೂರ್ತಿಗಳು ಆದೇಶಿಸಿದರು. ಸೆಪ್ಟೆಂಬರ್‌ 28ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಬೇರು ಬಿಟ್ಟವರು..!
‘ಪೊನ್ನಣ್ಣ, ಮುಂದಿನ ವಿಚಾರಣೆ ವೇಳೆಗೆ ಲೋಕಾಯುಕ್ತ ಸಂಸ್ಥೆಯಲ್ಲಿ ಯಾರು ಎಷ್ಟು ವರ್ಷಗಳಿಂದ ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಎಲ್ಲ ವಿವರಗಳನ್ನು ನನಗೆ ನೀಡಬೇಕು’.

ಆದೇಶ ಬರೆಸಿದ ನಂತರ ನ್ಯಾಯಮೂರ್ತಿಗಳು ನೀಡಿದ ಈ ಮೌಖಿಕ ಸಲಹೆಗೆ ಪೊನ್ನಣ್ಣ ‘ಆಯ್ತು’ ಎಂದು ತಲೆ ಅಲ್ಲಾಡಿಸಿದರು.
‘ಒಂದು ವೇಳೆ ನೀವು ನನಗೆ ಈ ವಿವರ ಕೊಡದಿದ್ದರೆ ನಮ್ಮ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಂದಲೇ ಎಲ್ಲಾ ಮಾಹಿತಿ ತರಿಸಿಕೊಳ್ಳುತ್ತೇನೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.

‘ಒಂದೇ ಕಡೆ ಬೇರು ಬಿಟ್ಟುಕೊಂಡವರನ್ನು ಬದಲಾಯಿಸಬೇಕು. ಹೊಸ ಮುಖಗಳು ಬಂದರೆ ಬದಲಾವಣೆ ಆದೀತು’ ಎಂದು ವೇಣುಗೋಪಾಲಗೌಡ
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT