ADVERTISEMENT

ಲೋಕಾಯುಕ್ತ ಭ್ರಷ್ಟತೆ ತನಿಖೆಗೆ ಅಡಿ ತಾಕೀತು

ಎಸ್‌ಐಟಿ ರಚಿಸಿದ ಸರ್ಕಾರ, ರಾಜೀನಾಮೆಗೆ ಭಾಸ್ಕರರಾವ್‌ ನಕಾರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 19:41 IST
Last Updated 30 ಜೂನ್ 2015, 19:41 IST

ಬೆಳಗಾವಿ/ಬೆಂಗಳೂರು: ಲೋಕಾಯುಕ್ತರ ಕಚೇರಿ ಮತ್ತು ಮನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಕುರಿತ ತನಿಖೆಯ ವಿಷಯ ಈಗ ಲೋಕಾಯುಕ್ತ ಭಾಸ್ಕರರಾವ್‌ ಮತ್ತು ಉಪ ಲೋಕಾಯುಕ್ತ ಸುಭಾಷ್‌ ಅಡಿ ಅವರ ಮಧ್ಯೆ ಪರೋಕ್ಷ ಜಟಾಪಟಿಗೆ ಎಡೆ ಮಾಡಿದೆ.

ಆರೋಪಗಳ ಬಗ್ಗೆ ತನಿಖೆ ನಡೆಸಲು ಉಪ ಲೋಕಾಯುಕ್ತ ಸುಭಾಷ್‌ ಅಡಿ  ಹೊರಡಿಸಿದ್ದ ಆದೇಶಕ್ಕೆ ಲೋಕಾಯುಕ್ತರು ಸೋಮವಾರ ತಡೆ ನೀಡಿದ್ದರು.

ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳಲು ಉಪ ಲೋಕಾಯುಕ್ತರು ನಿರಾಕರಿಸಿದ್ದಾರೆ. ತಾವು ಈ ಹಿಂದೆ ನೀಡಿದ ಆದೇಶದಂತೆ ತನಿಖೆ ಮುಂದುವರಿಸಲು ಅವರು ಲೋಕಾಯುಕ್ತ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಇದರ ನಡುವೆಯೇ ರಾಜ್ಯ ಸರ್ಕಾರ ಲೋಕಾಯುಕ್ತರ ಕೋರಿಕೆಯಂತೆ ವಿಶೇಷ ತನಿಖಾ ತಂಡವನ್ನೂ (ಎಸ್‌ಐಟಿ) ರಚಿಸಿದೆ. ಹೀಗಾಗಿ ಭ್ರಷ್ಟಾಚಾರ ಆರೋಪಗಳ ಬಗ್ಗೆ ಎರಡು ಪ್ರತ್ಯೇಕ ತನಿಖೆಗಳು ನಡೆಯಲಿವೆ.

ಎಸ್‌ಐಟಿ ಮುಖ್ಯಸ್ಥರಾಗಿ ಕಾರಾಗೃಹಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರನ್ನು ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಲೋಕಾಯುಕ್ತರ ಮನೆಯಲ್ಲಿನ ವ್ಯವಹಾರದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿರುವ ಆರೋಪ ಹಾಗೂ ಬೆಂಗಳೂರು ನಗರ ಜಿಪಂ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಅವರಿಂದ ಹಣ ವಸೂಲಿಗೆ ಬೇಡಿಕೆ ಇಟ್ಟ ಪ್ರಕರಣಗಳ ಬಗ್ಗೆ ಎಸ್ಐಟಿ ತನಿಖೆ ನಡೆಸಲಿದೆ.

ಈ ಮೊದಲು ತನಿಖೆಯನ್ನು ಬೆಂಗಳೂರಿನ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರಿಗೆ ಲೋಕಾಯುಕ್ತರು ವಹಿಸಿದ್ದರು. ಆದರೆ ಚಂದ್ರಶೇಖರ್‌ ಅವರು ಈ ಕೋರಿಕೆಯನ್ನು ಮರುಪರಿಶೀಲಿಸುವಂತೆ ಲೋಕಾಯುಕ್ತರಿಗೆ ಪತ್ರ ಬರೆದಿದ್ದರು.

ಪ್ರತಿಭಟನೆ: ಭಾಸ್ಕರರಾವ್‌ ರಾಜೀನಾಮೆಗೆ ಒತ್ತಾಯಿಸಿ ವಕೀಲರು ಮತ್ತು ವಿವಿಧ ಸಂಘಟನೆಗಳು ಬುಧವಾರ ರಾಜ್ಯಾದ್ಯಂತ ಧರಣಿ ನಡೆಸಲಿವೆ.

ಭ್ರಷ್ಟವಾಗಿದೆ: ‘ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಭಾಸ್ಕರರಾವ್  ಅವರು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದ್ದಾರೆ’ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾವ್‌ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಪುತ್ರನ ಮೂಲಕ ಲಂಚಕ್ಕೆ ಬೇಡಿಕೆಯಿಡುವ ಮೂಲಕ ರಾಜ್ಯ ಲೋಕಾಯುಕ್ತ ಘನತೆಗೆ ಕುಂದು ತಂದಿದ್ದಾರೆ’ ಎಂದರು.

‘ವಕೀಲರ ಸಂಘದ ಸಾಮಾನ್ಯ ಸಭೆಯಲ್ಲಿ ಭಾಸ್ಕರರಾವ್ ಅವರ ನೇಮಕಾತಿ ವಿರುದ್ಧ ನಿರ್ಣಯ ಮಂಡಿಸಲಾಗಿತ್ತು. ಆದರೆ, ಸರ್ಕಾರ ಸಂಘದ ವಿರೋಧವನ್ನು ಪರಿಗಣಿಸಿರಲಿಲ್ಲ’ ಎಂದು ಕಿಡಿಕಾರಿದರು.

‘ನಿಷ್ಪಕ್ಷಪಾತ, ನಿಷ್ಕಳಂಕ ವ್ಯಕ್ತಿಯನ್ನು ಲೋಕಾಯುಕ್ತ ಸ್ಥಾನಕ್ಕೆ ನೇಮಕ ಮಾಡಬೇಕಾದದ್ದು ಸರ್ಕಾರದ ಕರ್ತವ್ಯ’ ಎಂದರು. ನಂತರ ಮಾತನಾಡಿದ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ, ‘ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ‌ ನೈತಿಕ ಹೊಣೆ ಹೊತ್ತು ಭಾಸ್ಕರ್‌ರಾವ್‌ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

* ಉಪ ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್ ಮಾತ್ರ ರದ್ದು  ಪಡಿಸಲು ಸಾಧ್ಯ. ಲೋಕಾಯುಕ್ತರಿಗೆ ಅಧಿಕಾರ ಇಲ್ಲ
-ಸುಭಾಷ್‌ ಅಡಿ
ಉಪ ಲೋಕಾಯುಕ್ತ

* ನನ್ನ ಮತ್ತು ಉಪ ಲೋಕಾಯುಕ್ತರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್‌ ನಡೆಸುವ ತನಿಖೆಗೆ ತಡೆ ನೀಡಿಲ್ಲ.
-ವೈ. ಭಾಸ್ಕರರಾವ್‌
ಲೋಕಾಯುಕ್ತ

ಮುಖ್ಯಾಂಶಗಳು
* ಎಸ್‌ಐಟಿ ರಚನೆ

ADVERTISEMENT

* ತನಿಖೆ ಮುಂದುವರಿಸಲು ಉಪಲೋಕಾಯುಕ್ತ  ಆದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.