ADVERTISEMENT

ಲ್ಯಾಪ್‌ಟಾಪ್‌ ಉಚಿತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಲ್ಯಾಪ್‌ಟಾಪ್‌ ಉಚಿತ
ಲ್ಯಾಪ್‌ಟಾಪ್‌ ಉಚಿತ   

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಓದುತ್ತಿರುವ 1.5 ಲಕ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ,  ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್‌ ಹಾಗೂ ಡಿಪ್ಲೊಮಾದಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಈ ಭಾಗ್ಯ ಸಿಗಲಿದೆ. ಸರ್ಕಾರಿ ಕೋಟಾದಡಿ ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಸಿಗುವುದಿಲ್ಲ.

ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ,  ವಾರ್ಷಿಕ ₹2.5 ಲಕ್ಷ ಆದಾಯ ಮಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲು  ನಿರ್ಧರಿಸಲಾಗಿದೆ. ಇದಕ್ಕಾಗಿ ₹300 ಕೋಟಿ ಬೇಕಾಗುತ್ತದೆ ಎಂದರು.

ADVERTISEMENT

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿನ 1.25 ಲಕ್ಷ ವಿದ್ಯಾರ್ಥಿಗಳಿಗೆ ಸೋಪ್, ಟೂಥ್‌ ಬ್ರಶ್, ಪೇಸ್ಟ್‌, ಕೊಬ್ಬರಿ ಎಣ್ಣೆ ವಿತರಿಸುವ ₹15.70 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.

146 ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಹಿತ ಮೂರು ಹಾಸಿಗೆಯ   ತೀವ್ರ ನಿಗಾ ಘಟಕ (ಐಸಿಯು) ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಸಂಸದರ ನಿಧಿಯಿಂದ ತಲಾ ₹5 ಲಕ್ಷ ಹಾಗೂ ಶಾಸಕರ ನಿಧಿಯಿಂದ ತಲಾ ₹15 ಲಕ್ಷ ಬಳಸಿಕೊಂಡು ಯೋಜನೆ ಅನುಷ್ಠಾನ ಮಾಡಲಾಗುವುದು. ಇದಕ್ಕೆ ₹45 ಕೋಟಿ ಅನುದಾನ ಬೇಕಾಗಲಿದೆ ಎಂದು ಸಚಿವರು ತಿಳಿಸಿದರು.

ಅನಿಮೇಶನ್ ನೀತಿ: ‘ಕರ್ನಾಟಕ ಅನಿಮೇಶನ್‌, ಗೇಮಿಂಗ್‌  ಕಾಮಿಕ್ಸ್‌ ನೀತಿ 2017–22’ಕ್ಕೆ ಒಪ್ಪಿಗೆ ನೀಡಲಾಗಿದೆ.

ಬೆಂಗಳೂರು ಮಾತ್ರವಲ್ಲದೇ ಎರಡನೇ ಹಂತದ ನಗರಗಳಲ್ಲಿ ಅನಿಮೇಶನ್ ಮತ್ತು ಗೇಮಿಂಗ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದು, ಯುವಜನರಿಗೆ ಕೌಶಲ ತರಬೇತಿ, ವಿನ್ಯಾಸ ಮತ್ತು ಗೇಮಿಂಗ್‌ ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜನ ನೀಡುವುದು, ಕೌಶಲ ಕೇಂದ್ರಗಳನ್ನು ಆರಂಭಿಸುವುದು ಈ ನೀತಿಯಲ್ಲಿ ಸೇರಿದೆ.

ಅನಿಮೇಶನ್ ಕ್ಷೇತ್ರದಲ್ಲಿ ನವೋದ್ಯಮ ಆರಂಭಿಸುವವರನ್ನು ಪ್ರೋತ್ಸಾಹಿಸುವ ಕುರಿತು ನೀತಿ ಪ್ರಸ್ತಾಪಿಸಿದೆ.  20,000 ಉದ್ಯೋಗ ಸೃಷ್ಟಿಯ ಗುರಿಯನ್ನು ನೀತಿ ಹೊಂದಿದೆ ಎಂದು ಜಯಚಂದ್ರ ತಿಳಿಸಿದರು. ಗ್ರಾಮೀಣ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ನೀತಿಗೆ ಅನುಮೋದನೆ ನೀಡಲಾಗಿದೆ. 

ರಾಜ್ಯದಲ್ಲಿ 1,77,542  ಕಿ.ಮೀ ಉದ್ದದ  ಗ್ರಾಮೀಣ ರಸ್ತೆ ಇದ್ದು, ಈ ಪೈಕಿ 63,374 ಕಿ.ಮೀ ಮಾತ್ರ ಡಾಂಬರು ರಸ್ತೆಯಾಗಿದೆ. 23,059 ಕಿ.ಮೀ ಜಲ್ಲಿ ರಸ್ತೆ, 25,562 ಕಿ.ಮೀ ಕಚ್ಚಾ ರಸ್ತೆ ಹಾಗೂ 65,542 ಕಿ.ಮೀ ಉದ್ದದ ಮಣ್ಣಿನ ರಸ್ತೆಗಳಿವೆ. ಇವುಗಳನ್ನು ಹಂತಹಂತವಾಗಿ ಮೇಲ್ದರ್ಜೆಗೆ
ಏರಿಸಲು ಕ್ರಮ ವಹಿಸುವುದು ನೀತಿಯ ಉದ್ದೇಶ  ಎಂದು ತಿಳಿಸಿದರು.

ತಂತ್ರಜ್ಞಾನ ಬಳಸುವ ರೈತರಿಗೆ ಸಿಗಲಿದೆ ಪ್ರೋತ್ಸಾಹಧನ: ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ಯಂತ್ರೋಪಕರಣ ಬಳಸುವ ರೈತರಿಗೆ ಇನ್ನು
ಮುಂದೆ ನೇರವಾಗಿ ಪ್ರೋತ್ಸಾಹಧನ ಸಿಗಲಿದೆ.

ಬೆಳೆವಾರು ನಿರ್ದಿಷ್ಟ ತಾಂತ್ರಿಕತೆಯನ್ನು ಬಳಸುವವರಿಗೆ ಪ್ರತ್ಯೇಕವಾಗಿ ಪ್ರೋತ್ಸಾಹಧನ ನಿಗದಿ ಮಾಡಲಾಗಿದೆ. ಇದಕ್ಕಾಗಿ ಈ ವರ್ಷ ₹130 ಕೋಟಿ ಅನುದಾನ ನೀಡಲು ಸರ್ಕಾರ ಒಪ್ಪಿದೆ.

ಪ್ರಮುಖ ನಿರ್ಣಯಗಳು
* ಕೊಪ್ಪಳ ಜಿಲ್ಲೆ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ನೀರು ಒದಗಿಸಲು ₹762 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಮ್ಮತಿ.
* ಕೃಷ್ಣಾ ನದಿಯಿಂದ 0.198 ಟಿ.ಎಂ.ಸಿ ಅಡಿ ನೀರನ್ನು ಬಳಸಿಕೊಂಡು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ 10 ಗ್ರಾಮದ 39 ಕೆರೆಗಳನ್ನು ತುಂಬಿಸುವ ₹91.40 ಕೋಟಿ  ಮೊತ್ತದ ಯೋಜನೆಗೆ ಅನುಮೋದನೆ.
* ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ 5 ಎಕರೆ ಜಮೀನನ್ನು ಬಸ್ ಡಿಪೊ ಸ್ಥಾಪಿಸಲು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲು ಒಪ್ಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.