ADVERTISEMENT

ವಂಚನೆಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಬಳಕೆ

ಸೈಬರ್‌ ಅಪರಾಧ ಪೊಲೀಸರಿಗೆ ಸವಾಲು

ರಾಜೇಶ್ ರೈ ಚಟ್ಲ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST
ವಂಚನೆಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಬಳಕೆ
ವಂಚನೆಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಬಳಕೆ   

ಹುಬ್ಬಳ್ಳಿ: ಇದು ‘ಫೇಸ್‌ಬುಕ್’ ಮೂಲಕ ಸ್ನೇಹ ಬೆಳೆಸಿ, ‘ವಾಟ್ಸ್‌ಆ್ಯಪ್‌’ನಲ್ಲಿ ಆತ್ಮೀಯರಾಗಿ, ವಂಚಕರ ಜಾಲದೊಳಗೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಇಬ್ಬರು ಗೃಹಿಣಿಯರ ಕಥೆ.

ಒಬ್ಬರು ವೃತ್ತಿಯಲ್ಲಿ ಬ್ಯೂಟಿಷಿಯನ್‌. ಇನ್ನೊಬ್ಬರು ಪ್ರತಿಷ್ಠಿತ ಕಂಪೆನಿಯ ಉದ್ಯೋಗಿ. ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್ ವಂಚಕರ ಜಾಲವೊಂದು ಪಾರ್ಸೆಲ್ ಕಂಪೆನಿ ಮತ್ತು ಆರ್‌ಬಿಐ ನೆಟ್‌ ಬ್ಯಾಂಕಿಂಗ್‌ ಹೆಸರಿನಲ್ಲಿ ನಕಲಿ ಇ– ಮೇಲ್‌ ಸೃಷ್ಟಿಸಿ, ನಂಬಿಸಿ, ಪುಸಲಾಯಿಸಿ, ಬೆದರಿಸಿ ಇಬ್ಬರನ್ನೂ ವಂಚಿಸಿದೆ.

ಬ್ಯೂಟಿಷಿಯನ್‌ ₹ 8.96 ಲಕ್ಷ ಮತ್ತು ಉದ್ಯೋಗಿ ₹ 3.93 ಲಕ್ಷ ಕಳೆದುಕೊಂಡಿದ್ದಾರೆ. ಇಲ್ಲಿನ ಸೈಬರ್‌ ಕ್ರೈಮ್‌ ಠಾಣೆಯಲ್ಲಿ ಈ ಪ್ರಕರಣಗಳು ದಾಖಲಾಗಿವೆ.
ಇಂಗ್ಲೆಂಡಿನ ಇಗ್ನೇಷಿಯಸ್ ಮೈಕಲ್‌ ಮಾಂಜಿ ಎಂಬಾತನ ಜೊತೆ ಫೇಸ್‌ಬುಕ್‌ ಸ್ನೇಹ ಬೆಳೆಸಿದ ಇಲ್ಲಿನ ದೇಶಪಾಂಡೆ ನಗರದ ಬ್ಯೂಟಿಷಿಯನ್‌, ವಾಟ್ಸ್ ಆ್ಯಪ್‌ನಲ್ಲಿ ವೈಯಕ್ತಿಕ ವಿಷಯ ಹಂಚಿಕೊಂಡಿದ್ದಾರೆ. ಕ್ರಿಸ್ಮಸ್‌ ಉಡುಗೊರೆ  ಕಳುಹಿಸುತ್ತೇನೆ ಎಂದು ನಂಬಿಸಿದ ಆತನ ಜಾಲದೊಳಗೆ ಬಿದ್ದು ಹಣ  ಕಳೆದುಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಲಂಡನ್‌ನ ಜೇಮ್ಸ್‌ ಪೌಲ್‌ ಎಂದು ಹೇಳಿಕೊಂಡ ವ್ಯಕ್ತಿ ಮಹಿಳಾ ಉದ್ಯೋಗಿಯೊಬ್ಬರಿಗೆ ವಂಚಿಸಿದ್ದಾನೆ. ವಂಚಕನಿಗೆ ಈಕೆ ಯೋಗ ಚಿಕಿತ್ಸೆಯ ವಿಧಾನಗಳನ್ನು ಪರಿಚಯಿಸಿದ್ದರು. ಅದಕ್ಕೆ ಪ್ರತಿಫಲವಾಗಿ ₹ 2.5 ಕೋಟಿ ಉಡುಗೊರೆ ನೀಡುವುದಾಗಿ ತಿಳಿಸಿ ಅವರನ್ನು ಮರುಳು ಮಾಡಿದ್ದ.

‘ಆನ್‌ಲೈನ್‌ ವಂಚನೆಯ ಹೊಸ ಸ್ವರೂಪವಿದು. ಇಂತಹ ಪ್ರಕರಣಗಳಲ್ಲಿ ಅನೇಕರು ಹಣ ಕಳೆದುಕೊಂಡಿದ್ದಾರೆ. ಪ್ರತಿಷ್ಠೆಗೆ ಧಕ್ಕೆಯಾಗಬಹುದು ಎಂದು ದೂರು ನೀಡದೆ ಸುಮ್ಮನಾಗಿದ್ದಾರೆ’ ಎಂದು ಧಾರವಾಡ ಸೈಬರ್ ಕ್ರೈಮ್‌ ಠಾಣೆಯ ಡಿವೈಎಸ್ಪಿ ಮಹಾಂತೇಶ ಎಸ್. ಜಿದ್ದಿ ತಿಳಿಸಿದರು.

ವಂಚನೆ ವಿಧಾನ
* ದೆಹಲಿಯ ಪಾರ್ಸೆಲ್‌ ಕಂಪೆನಿ ಹೆಸರಲ್ಲಿ ಅಮಾಯಕರಿಗೆ ಕರೆ
* ‘ವಿದೇಶದಿಂದ ಪಾರ್ಸೆಲ್‌ ಬಂದಿದೆ. ಬಿಡಿಸಿಕೊಳ್ಳಲು ಹಣ ಕಟ್ಟಿ’ ಎಂದು ಬ್ಯಾಂಕ್‌ ಖಾತೆ ವಿವರ ರವಾನೆ
* ಪಾರ್ಸೆಲ್‌ನಲ್ಲಿ ನಗದು ಇದೆ. ಇದು ಕಾನೂನುಬಾಹೀರ. ದಂಡ, ತೆರಿಗೆ ರೂಪದಲ್ಲಿ ಮತ್ತಷ್ಟು ಹಣಕ್ಕೆ ಬೇಡಿಕೆ, ಬೆದರಿಕೆ
* ಹಣ ಕೈಸೇರಿದ ನಂತರ ಏಕಾಏಕಿ ಮೊಬೈಲ್‌ ಸ್ವಿಚ್‌ಆಫ್‌ ಮಾಡುವ ವಂಚಕರು
****
ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಬಳಸಿ ಆನ್‌ಲೈನ್ ವಂಚನೆ ಹೊಸ ಮಾದರಿಯ ಸೈಬರ್‌ ಅಪರಾಧ. ಜನ ಎಚ್ಚರ ವಹಿಸಬೇಕು.
-ಮಹಾಂತೇಶ ಎಸ್‌. ಜಿದ್ದಿ, ಡಿವೈಎಸ್ಪಿ, ಸೈಬರ್ ಕ್ರೈಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.