ADVERTISEMENT

ವಸತಿ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ

ಅಡುಗೆ ಸಹಾಯಕನಿಂದ ಅತ್ಯಾಚಾರ: ವಿದ್ಯಾರ್ಥಿನಿಯರ ದೂರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST
ವಿಜಯಕುಮಾರ
ವಿಜಯಕುಮಾರ   

ವಿಜಾಪುರ: ಜಿಲ್ಲೆಯ ಸಿಂದಗಿ ತಾಲ್ಲೂಕು ಆಲಮೇಲ ಪಟ್ಟಣದ ವಸತಿ ಶಾಲೆಯ ಅಡುಗೆ ಸಹಾಯಕ­ನೊಬ್ಬ ವಿದ್ಯಾರ್ಥಿನಿ­ಯರಿಗೆ ಪದೇ, ಪದೇ ಲೈಂಗಿಕ ಕಿರುಕುಳ ನೀಡುವ ಜತೆಗೆ ಕೆಲವರ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಜಿಲ್ಲಾ ಮಕ್ಕಳ ಸಹಾಯವಾಣಿ ಮೂಲಕ ಬೆಳಕಿಗೆ ಬಂದಿದೆ.

ವಿಜಯಕುಮಾರ ಎಂಟಮಾನ ಎಂಬಾತನೇ ವಿದ್ಯಾರ್ಥಿನಿಯರಿಗೆ ನಾಲ್ಕು ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿರುವ  ಆರೋಪಿ. ಈತನ ವಿರುದ್ಧ ವಸತಿ ಶಾಲೆಯ ವಿದ್ಯಾರ್ಥಿನಿ­ಯರು ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ.

‘ವಸತಿ ಶಾಲೆಯ ವಿದ್ಯಾರ್ಥಿನಿ­ಯರು ನಿತ್ಯ ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಜಿಲ್ಲಾ ಮಕ್ಕಳ ಸಹಾಯವಾಣಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಆರೋಪಿ ನಡೆಸಿರುವ ದೌರ್ಜನ್ಯವನ್ನು ಎಳೆ ಎಳೆಯಾಗಿ ವಿವರಿ­ಸಿದ್ದು, ರಕ್ಷಣೆ ಒದಗಿಸುವಂತೆ ಕೋರಿದ್ದಾರೆ’ ಎಂದು ಸಹಾಯ­ವಾಣಿಯ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಇದೇ 15ರಿಂದ ವಸತಿ ಶಾಲೆಯ ವಿದ್ಯಾರ್ಥಿನಿಯರು ಮಕ್ಕಳ ಸಹಾಯ­ವಾಣಿಗೆ ದೂರವಾಣಿ ಮೂಲಕ ದೌರ್ಜನ್ಯ ಕುರಿತು ದೂರು ನೀಡಿ­ದ್ದರು. 16, 18ರಂದು ಬೇರೆ ಬೇರೆ ವಿದ್ಯಾರ್ಥಿನಿಯರು ದೂರವಾಣಿ ಕರೆ ಮಾಡಿ ದೂರು ನೀಡಿದ್ದರು. ದೂರಿ­ನನ್ವಯ ಆಲಮೇಲದ ಶಾಲೆಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ಆಪ್ತ ಸಮಾ­ಲೋಚನೆ ನಡೆಸಿದಾಗ, ಅಡುಗೆ ಸಹಾಯಕ ಲೈಂಗಿಕ ಕಿರುಕುಳ ನೀಡಿರು­ವುದರ ಜತೆಗೆ ಅತ್ಯಾಚಾರ ಮಾಡಿ­ರುವ ಘಟನೆಗಳನ್ನು ಬಿಚ್ಚಿಟ್ಟರು. ಈ ಮಾಹಿತಿಯನ್ನು ಇದೇ 18ರಂದೇ ಆಲಮೇಲ ಪೊಲೀಸ್‌ ಠಾಣೆಗೆ ನೀಡಲಾಗಿದೆ. ಜಿಲ್ಲಾಡಳಿತಕ್ಕೂ ನೀಡ­ಲಾಗಿದೆ’ ಎಂದು ಸುನಂದಾ ಹೇಳಿದ್ದಾರೆ.

ದೂರು ದಾಖಲಿಸಲು ಸೂಚನೆ:  ‘ಶಾಲೆಯ ಪ್ರಾಚಾರ್ಯರಿಗೆ ದೂರು ನೀಡುವಂತೆ ಸೂಚಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ­ಯಿಂದ ತನಿಖೆ ನಡೆಸಿ ವಾರ್ಡನ್, ಆರೋಪಿ ವಿರುದ್ಧ  ಕ್ರಿಮಿನಲ್‌ ದೂರು ದಾಖಲಿಸ­ಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹ­ಣಾಧಿಕಾರಿ ಕೆ.ಬಿ. ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆ ಕ್ರೈಸ್ಟ್‌ ಅಧೀನದಲ್ಲಿರುವ ಶಾಲೆಯ ಆಡಳಿತವನ್ನು ಸದ್ಯಕ್ಕೆ ಸಿಂದಗಿ ಬಿಇಒಗೆ ಹಸ್ತಾಂತರಿಸಲು ಸೂಚಿಸ­ಲಾಗಿದೆ. ವಸತಿ ಶಾಲೆಯ ಸಿಬ್ಬಂದಿ­ಯನ್ನು ಶಾಲೆಯಿಂದ ದೂರ ಇರುವಂತೆ ಸೂಚಿಸಿದ್ದು, ಅಡುಗೆ ಸಿಬ್ಬಂದಿ ಸೇರಿದಂತೆ ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಯಿಂದ ವಸತಿ ಶಾಲೆಗೆ ನಿಯೋಜಿಸ­ಲಾಗಿದೆ. ಘಟನೆಯ ಸತ್ಯಾಂಶ ತಿಳಿಯಲು ಸ್ಥಳಕ್ಕೆ ತಂಡ­ವೊಂದನ್ನು ಕಳುಹಿಸ­ಲಾಗಿದೆ. ರಾಜ್ಯ ಮಟ್ಟದ ಅಧಿಕಾರಿಗಳ ತಂಡ ಸಹ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ’ ಎಂದು ಅವರು ಹೇಳಿದರು.

ಪರ–ವಿರೋಧ: ಜಿಲ್ಲಾಡಳಿತದ ನಿರ್ದೇ­ಶನದಂತೆ ಸ್ಥಳಕ್ಕೆ ಸಿಂದಗಿ ತಹಶೀಲ್ದಾರ್ ಜಿ.ಎಸ್‌.ಮಳಗಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಭೇಟಿ ನೀಡಿ ವಿದ್ಯಾರ್ಥಿನಿ­ಯರಿಂದ ಮಾಹಿತಿ ಪಡೆದರು.

‘ಕೆಲ ವಿದ್ಯಾರ್ಥಿನಿಯರು ಶಾಲೆಯಲ್ಲಿ ದೌರ್ಜನ್ಯ ನಡೆದಿಲ್ಲ ಎಂದು ತಿಳಿಸಿದರೆ, ಇನ್ನೂ ಕೆಲವರು ಅಡುಗೆ ಸಹಾಯಕ ನಿತ್ಯ ನೀಡುತ್ತಿದ್ದ ದೌರ್ಜನ್ಯವನ್ನು ಕಣ್ಣೀರು ಹಾಕುತ್ತಾ ವಿವರಿಸಿದರು’ ಎಂದು ಮಹೇಶ ಪೋತದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆ ತಿಳಿಯುತ್ತಿದ್ದಂತೆಯೇ ಅಧಿಕಾರಿ­­ಗಳು ವಸತಿ ಶಾಲೆಗೆ ಬುಧವಾರ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ದೌರ್ಜನ್ಯ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿನಿಯನ್ನು ವಿಚಾರಿಸುತ್ತಿದ್ದು, ವಿದ್ಯಾರ್ಥಿನಿಯರು ಭೀತಿಗೊ­ಳಗಾ­ಗಿದ್ದಾರೆ. ಆತಂಕಗೊಂಡಿರುವ ಪೋಷಕರು ಶಾಲೆಗೆ ಧಾವಿಸಿ ಮಕ್ಕಳನ್ನು ಕರೆದೊಯ್ಯಲು ಮುಂದಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದೂರಿನ ನಂತರ ಕ್ರಮ: ‘ಘಟನೆ ಕುರಿತು ದೂರು ದಾಖಲಾದ ನಂತರ, ದೂರಿನ ಆಧಾರದಲ್ಲಿ ಮುಂದಿನ ಕ್ರಮ ತೆಗೆದು­ಕೊಳ್ಳ­ಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿನೇಂದ್ರ ಖಣಗಾವಿ ಹೇಳಿದರು.

ಸಮಗ್ರ ತನಿಖೆ
ವಿಜಾಪುರ: ಆಲಮೇಲ ಪಟ್ಟಣದ ವಸತಿ ನಿಲಯದ ಲೈಂಗಿಕ ಕಿರುಕುಳ ಪ್ರಕರಣ ಕುರಿತು ಉನ್ನತ ಮಟ್ಟದ ಸಮಿತಿ ರಚಿಸಿ, ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧಿಕಾರಿ­ಗಳಿಗೆ ಸೂಚಿಸಿದ್ದಾರೆ.

‘ವಸತಿ ಶಾಲೆಯಲ್ಲಿ ವಿದ್ಯಾರ್ಥಿ­ನಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳದ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹ­ಣಾಧಿಕಾರಿ­ಗಳೊ­ಡನೆ  ಚರ್ಚಿ­ಸಿದ್ದೇನೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸ­ಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಹೇಳಿದ್ದಾರೆ. ‘ಮಕ್ಕಳ ಹೇಳಿಕೆಗಳನ್ನು ಪಡೆ­ಯಲು ಮಹಿಳಾ ಅಧಿಕಾರಿ­ಗಳನ್ನು ಮಾತ್ರ ನಿಯೋ­ಜಿಸಲು, ಇಂಥ ಪ್ರಕರಣಗಳು ಮರುಕಳಿಸ­ದಂತೆ ಎಲ್ಲ ಮುನ್ನೆಚ್ಚರಿಕೆ ಕೈಗೊ­ಳ್ಳಲು ಸೂಚಿಸ­ಲಾಗಿದೆ’ ಎಂದು ತಿಳಿಸಿದ್ದಾರೆ.

ವಿಜಯಕುಮಾರ ಬಂಧನ
ಸಿಂದಗಿ: ತಾಲ್ಲೂಕಿನ ಆಲ­ಮೇಲದ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದು­ತ್ತಿರುವ ಕೆಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋ­ಪದ ಮೇರೆಗೆ ವಸತಿ ನಿಲಯದ ಅಡುಗೆ ಸಹಾ­ಯಕ ವಿಜಯ­ಕುಮಾರ ಎಂಟ­ಮಾನ ಎಂಬಾತ­ನನ್ನು ಬುಧವಾರ ರಾತ್ರಿ ಪೊಲೀ­ಸರು ಬಂಧಿಸಿದ್ದಾರೆ. ಈತನಿಗೆ ಸಹಕರಿಸುತ್ತಿದ್ದ ವಸತಿ ನಿಲಯದ ಸಿಬ್ಬಂದಿ ಜ್ಯೋತಿ  ವಿರುದ್ಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ADVERTISEMENT

ವಸತಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸತ್ಯಪ್ಪ ದುರ್ಗಪ್ಪ ಬಿದರಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಸಿಪಿಐ ಗಂಗಾಧರ ಮಠ   ತನಿಖೆ ಕೈಗೊಂಡಿದ್ದಾರೆ.

ಆಲಮೇಲ ಬಂದ್‌: ಆಲಮೇಲ ವ್ಯಾಪಾರಸ್ಥರ ಸಂಘದವರು ಗುರುವಾರ ಆಲಮೇಲ ಬಂದ್‌ಗೆ ಕರೆ ನೀಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.