ADVERTISEMENT

ವಾಮಾಚಾರ ನಿಷೇಧ ಮಸೂದೆಗೆ ಪರಿಷತ್ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:33 IST
Last Updated 22 ನವೆಂಬರ್ 2017, 19:33 IST
ವಾಮಾಚಾರ ನಿಷೇಧ ಮಸೂದೆಗೆ ಪರಿಷತ್ ಅಂಗೀಕಾರ
ವಾಮಾಚಾರ ನಿಷೇಧ ಮಸೂದೆಗೆ ಪರಿಷತ್ ಅಂಗೀಕಾರ   

ಬೆಳಗಾವಿ: ಅಮಾನವೀಯ ದುಷ್ಟ ಪದ್ಧತಿ, ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ ಮಸೂದೆ (ಮೌಢ್ಯ ನಿಷೇಧ ಮಸೂದೆ) ವಿಧಾನ ಪರಿಷತ್‌ನಲ್ಲಿ ಬುಧವಾರ ಅಂಗೀಕಾರವಾಯಿತು.

ಮಸೂದೆಯಲ್ಲಿ ಬಳಕೆಯಾಗಿರುವ ‘ಗರ್ಭಿಣಿಯಾದ ಸ್ತ್ರೀ’ ಪದದ ಬದಲು ‘ಬಾಣಂತಿ ಮತ್ತು ಮಗು’ ಎಂಬ ಪದ ಬಳಸಲು ತೀರ್ಮಾನಿಸಲಾಯಿತು.

ತಪ್ಪಿತಸ್ಥರಿಗೆ ವಿಧಿಸುವ ದಂಡವನ್ನು ₹ 50 ಸಾವಿರದಿಂದ ₹ 5 ಲಕ್ಷಕ್ಕೆ ಹೆಚ್ಚಿಸಬೇಕು. ಇಂತಹ ಪ್ರಕರಣಗಳ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆಸುವ ಬದಲು ಸೆಷನ್ಸ್‌ ನ್ಯಾಯಾಲಯಗಳಲ್ಲಿ ನಡೆಸಲು ತಿದ್ದುಪಡಿ ಮಾಡಬೇಕು ಎಂದು ಕಾಂಗ್ರೆಸ್‌ನ ಐವನ್‌ ಡಿಸೋಜಾ ಸಲಹೆ ನೀಡಿದರು.

ADVERTISEMENT

‘ಲಿಂಗತ್ವ ಅಲ್ಪಸಂಖ್ಯಾತರು ಲಿಂಗ ಪರಿವರ್ತನೆ ನಡೆಸುವ ವಿಧಾನದಲ್ಲಿ ಅನೇಕ ಕ್ರೌರ್ಯಗಳಿವೆ. ಬಲತ್ಕಾರದಿಂದ ನಡೆಯುವ ಇಂತಹ ಕ್ರೌರ್ಯವನ್ನು ನಿಷೇಧಿಸುವ ಅಂಶವನ್ನೂ ಮಸೂದೆಯಲ್ಲಿ ಸೇರಿಸಬೇಕು’ ಎಂದು ಕಾಂಗ್ರೆಸ್‌ನ ಜಯಮಾಲಾ ಹೇಳಿದರು.

‘ಬ್ರಾಹ್ಮಣರ ತಪ್ತ ಮುದ್ರಾಧಾರಣೆ, ಮುಸ್ಲಿಮರು ಸುನ್ನತ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಶತಮಾನಗಳಿಂದ ಬಂದ ಸಂಪ್ರದಾಯ. ಇವುಗಳನ್ನು ನಿಲ್ಲಿಸಲು ಹೊರಟರೆ ಸರ್ಕಾರಕ್ಕೆ ತೆಲೆ ಕೆಟ್ಟಿದೆ ಎನ್ನುತ್ತಾರೆ’ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

‘ಈ ಮಸೂದೆಯನ್ನು ಅನುಷ್ಠಾನಗೊಳಿಸಲು ಸಾಧ್ಯವೇ. ಮೊಹರಂ ವೇಳೆ ಮುಸ್ಲಿಮರು ದೇಹ ದಂಡನೆ ಮಾಡಿಕೊಳ್ಳುವುದನ್ನು ನಿಲ್ಲಿಸಲು ಆಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು. ‘ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ ನಿಲ್ಲಿಸಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ಆದರೆ ಅಲ್ಲಿ ಬೇರೆ ರೂಪದಲ್ಲಿ ಈ ಆಚರಣೆ ಗುಟ್ಟಾಗಿ ನಡೆಯುತ್ತಿದೆ’ ಎಂದು ಅವರು ಗಮನ ಸೆಳೆದರು.

‘ಈ ಮಸೂದೆಯೇ ಅಂತಿಮವಲ್ಲ. ಕೆಲವೊಂದು ಅಂಶಗಳನ್ನು ಸೇರ್ಪಡೆಗೊಳಿಸಲು, ಕಿತ್ತುಹಾಕಲು ಅಥವಾ ಮಾರ್ಪಾಡು ಮಾಡಲು ಅವಕಾಶ ಇದೆ. ಮೌಢ್ಯಗಳನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಲು ಈ ಮಸೂದೆ ನೆರವಾಗಲಿದೆ’ ಎಂದು ಜಯಚಂದ್ರ ಸ್ಪಷ್ಟಪಡಿಸಿದರು.

ಬಿಜೆಪಿ ಕೆ.ಬಿ.ಶಾಣಪ್ಪ, ‘ಈ ಮಸೂದೆಯನ್ನು ಸ್ವಾಗತಿಸುತ್ತೇನೆ. ನಾನು ದೇವರನ್ನು ನಂಬುವುದಿಲ್ಲ. ದೇವರ ಹೆಸರಿನಲ್ಲಿ ನಡೆಯುವ ಶೋಷಣೆ ಒಪ್ಪಲು ಸಾಧ್ಯವಿಲ್ಲ. ಪಕ್ಷದ ಧೋರಣೆ ಏನೇ ಇರಲಿ. ಈ ಮಸೂದೆಯನ್ನು ವಿರೋಧಿಸಿ ಆತ್ಮವಂಚನೆ ಮಾಡಿಕೊಳ್ಳಲು ನಾನು ಸಿದ್ಧನಿಲ್ಲ’ ಎಂದರು.

ಬಿಜೆಪಿಯ ಡಿ.ಎಸ್‌.ವೀರಯ್ಯ, ಎಸ್‌.ವಿ.ಸಂಕನೂರ, ಜೆಡಿಎಸ್‌ನ ಕೆ.ಟಿ.ಶ್ರಿಕಂಠೇಗೌಡ, ಬಸವರಾಜ ಹೊರಟ್ಟಿ ಅವರೂ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರು.

ಪಕ್ಷೇತರ ಸದಸ್ಯ ಬಸನಗೌಡ ಯತ್ನಾಳ್‌, ಬಿಜೆಪಿಯ ಪ್ರಾಣೇಶ್‌ ಮಸೂದೆಯನ್ನು ವಿರೋಧಿಸಿದರು.

ಕೃಷ್ಣ ಮಠಕ್ಕೂ ಭೇಟಿ ನೀಡಿದ್ದೇನೆ: ಮುಖ್ಯಮಂತ್ರಿ
‘ನಿಮ್ಮನ್ನು ಕರೆದಿಲ್ಲ ಎಂಬ ಕಾರಣಕ್ಕೆ ಉಡುಪಿಯ ಕೃಷ್ಣ ಮಠಕ್ಕೆ ಏಕೆ ಹೋಗಿಲ್ಲ’ ಎಂದು ಈಶ್ವರಪ್ಪ ಪ್ರಶ್ನಿಸಿದರು.

‘ನಿಮ್ಮನ್ನು ಇವತ್ತು ಕೃಷ್ಣ ಮಠಕ್ಕೆ ಕರೆದಿಲ್ಲವೇ ಎಂದು ಪತ್ರಕರ್ತರು ಕೇಳಿದ್ದರು. ಅದಕ್ಕೆ ಇಲ್ಲ ಎಂದಿದ್ದೆ ಅಷ್ಟೇ. ನಾನು ಕೃಷ್ಣ ಮಠಕ್ಕೆ ಈ ಹಿಂದೆಯೇ ಭೇಟಿ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

‘ಪೇಜಾವರ ಸ್ವಾಮೀಜಿ ನಾಲ್ಕು ಸಲ ಕರೆದರೂ ನೀವು ಅಲ್ಲಿಗೆ ಹೋಗಿಲ್ಲ ಏಕೆ’ ಎಂದು ಈಶ್ವರಪ್ಪ ಕೇಳಿದರು.

‘ಈ ಹಿಂದೆ ಸ್ವಾಮೀಜಿ ನನ್ನನ್ನು ಕರೆದಿದ್ದು ನಿಜ. ನಾನು ಹೋಗದಿರುವುದೂ ನಿಜ. ಅಗತ್ಯ ಬಿದ್ದರೆ ನಾನೇ ಹೋಗುತ್ತೇನೆ’ ಎಂದು ಅವರು ಹೇಳಿದರು.

‘ನಾವು ಯಾರ ನಂಬಿಕೆಗೂ ಅಡ್ಡಿಪಡಿಸುವುದಿಲ್ಲ. ಆದರೆ ಅದರಿಂದ ಮನುಕುಲಕ್ಕೆ ಧಕ್ಕೆ ಆಗಬಾರದು. ಅವು ಮನುಷ್ಯರ ವಿಕಾಸಕ್ಕೆ ಪೂರಕವಾಗಿರಬೇಕು’ ಎಂದರು.

ಟಿ.ವಿ.ಯಲ್ಲಿ ಜ್ಯೋತಿಷ ನಿಷೇಧಿಸಲು ಒತ್ತಾಯ
ಟಿ.ವಿ.ಯಲ್ಲಿ ಪ್ರಸಾರವಾಗುವ ಜ್ಯೋತಿಷ ಕಾರ್ಯಕ್ರಮವನ್ನು ನಿಷೇಧಿಸುವಂತೆ  ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.

‘ಜ್ಯೋತಿಷ ಕಾರ್ಯಕ್ರಮ ಅನೇಕ ಮನೆಗಳನ್ನು ಒಡೆಯುತ್ತಿದೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕಾದ ಅಗತ್ಯವಿದೆ’ ಎಂದು ಕಾಂಗ್ರೆಸ್‌ನ ರವಿ ಸಲಹೆ ನೀಡಿದರು.

ಇದಕ್ಕೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಹಾಗೂ ಬಿಜೆಪಿಯ ಡಿ.ಎಸ್‌.ವೀರಯ್ಯ ಅವರೂ ಧ್ವನಿಗೂಡಿಸಿದರು.

ರಾಜಕಾರಣಿಗಳ ಮೌಢ್ಯ ಬಯಲು ಮಾಡಿದ ಕಲಾಪ
ಬೆಂಗಳೂರು: ರಾಜಕಾರಣಿಗಳು ಚುನಾವಣೆ ಗೆಲ್ಲಲು ಮೌಢ್ಯ ಹಾಗೂ ಕಂದಾಚಾರಗಳಿಗೆ ಹೇಗೆ ಮೊರೆ ಹೋಗುತ್ತಾರೆ ಎಂಬ ವಿಷಯ ವಿಧಾನಪರಿಷತ್ತಿನಲ್ಲಿ ಬುಧವಾರ ಸ್ವಾರಸ್ಯಕರ ಚರ್ಚೆಗೆ ಪ್ರೇರಣೆಯಾಯಿತು.

‘ಕಂದಾಚಾರಗಳಿಗೆ ಹೇಗೆ ಜೋತು ಬೀಳುತ್ತಿದ್ದೇವೆ’ ಎಂದು ಕೆಲವು ಸದಸ್ಯರು ಸ್ವತಃ ಬಹಿರಂಗಪಡಿಸಿದರು.

ಅಮಾನವೀಯ ದುಷ್ಟ ಪದ್ಧತಿ, ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ ಮಸೂದೆ (ಮೌಢ್ಯ ನಿಷೇಧ ಮಸೂದೆ) ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿಸೋಜಾ, 2008ರ ವಿಧಾನಸಭಾ ಚುನಾವಣೆ ವೇಳೆ ಕೇರಳದ ಜ್ಯೋತಿಷಿಯೊಬ್ಬರ ಮೊರೆ ಹೋಗಿದ್ದ ಸಂಗತಿಯನ್ನು ಹೇಳಿಕೊಂಡರು.

‘ಮತದಾನ ಮುಗಿದ ಬಳಿಕ ನನ್ನ ಸ್ನೇಹಿತನೊಬ್ಬ ಕೇರಳದ ಜ್ಯೋತಿಷಿಯ ಬಗ್ಗೆ ಹೇಳಿದ. ನೀನು ಗೆಲ್ಲುತ್ತೀಯಾ ಅಥವಾ ಸೋಲುತ್ತೀಯಾ ಎಂಬುದನ್ನು ಆ ಜ್ಯೋತಿಷಿ ನಿಖರವಾಗಿ ಹೇಳುತ್ತಾರೆ. ಒಂದು ವೇಳೆ ಸೋಲುವ ಸೂಚನೆ ಸಿಕ್ಕರೆ ಫಲಿತಾಂಶ ಬದಲಿಸಲು ಏನು ಮಾಡಬೇಕು ಎಂದೂ ಪರಿಹಾರ ಸೂಚಿಸುತ್ತಾರೆ’ ಎಂದು ಆತ ನಂಬಿಸಿದ.

‘ಗೆಳೆಯನ ಮಾತು ಕೇಳಿ ನಾನು ಜ್ಯೋತಿಷಿ ಬಳಿ ಹೋದೆ. ನಾನು ಸೋಲುವ ಲಕ್ಷಣ ಇದೆ ಎಂದೂ, ಫಲಿತಾಂಶ ಬದಲಿಸಲು ವಾಮಚಾರವನ್ನೂ ಮಾಡಬೇಕು ಎಂದೂ ಜ್ಯೋತಿಷಿ ಸಲಹೆ ನೀಡಿದ. ಮತದಾನ ಮುಗಿದು, ಫಲಿತಾಂಶ ವಿದ್ಯುನ್ಮಾನ ಮತ ಯಂತ್ರದಲ್ಲಿ ಭದ್ರವಾಗಿದೆ. ಈ ಹಂತದಲ್ಲಿ ಇಂತಹ ತಂತ್ರ ಫಲಿಸುತ್ತದೆಯೇ ಎಂಬ ಗೊಂದಲದಲ್ಲಿ ಮುಳುಗಿದ್ದೆ. ಗೆಲ್ಲುವ ಆಸೆಯಿಂದ ₹ 1.5 ಲಕ್ಷ ಖರ್ಚು ಮಾಡಿದೆ. ಆದರೂ ಸೊತೆ’ ಎಂದು ಡಿಸೋಜಾ ತಿಳಿಸಿದರು.

‘₹ 1.5 ಲಕ್ಷ ವೆಚ್ಚದ ಬಗ್ಗೆ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಿದ್ದೀಯಾ? ಇಲ್ಲವಾದರೆ ಅದು ಅಪರಾಧವಾಗುತ್ತದೆ’ ಎಂದು ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಕಾಲೆಳೆದರು.

‘ಅನೇಕ ರಾಜಕಾರಣಿಗಳು ಚುನಾವಣೆ ವೇಳೆ ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ. ನನಗೂ ಒಬ್ಬರು ಇಂತಹ ಸಲಹೆ ನೀಡಿದ್ದರು. ಇಂತಹ ಕಡೆ ಪೂಜೆ ಮಾಡಿಸಿದರೆ ಮಂತ್ರಿ ಆಗುತ್ತೀಯ ಎಂದರು. ಮಂತ್ರಿ ಆಗುವ ಆಸೆಯಿಂದ ನಾನೂ ಆ ಪಾಳುಬಿದ್ದ ಗುಡಿಗೆ ಹೋದೆ. ಆರತಿ ತಟ್ಟೆಗೆ ₹ 2000 ನೋಟು ಹಾಕಿದ್ದನ್ನು ನೋಡಿ ಅಲ್ಲಿನ ಸ್ವಾಮಿಗೆ ನಾನು ಒಳ್ಳೇ ಗಿರಾಕಿ ಅನಿಸಿರಬೇಕು.’ ಎಂದು ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ್‌ ಅನುಭವ ಹೇಳಿಕೊಂಡರು.

‘ಸಿದ್ಧೇಶ್ವರನ ಮೇಲೆ ನಂಬಿಕೆ ಇಡು. ನೀನು ಖಂಡಿತಾ ಮಂತ್ರಿ ಆಗುತ್ತೀಯ. ಆದರೆ ನಿನಗೆ ಒಂದು ಕಂಟಕ ಇದೆ. ಅದರ ನಿವಾರಣೆಗೆ ಒಂದು ಯಜ್ಞ ಮಾಡಿಸಬೇಕು ಎಂದು ಅಲ್ಲಿನ ಸ್ವಾಮಿ ಸಲಹೆ ನೀಡಿದರು. ಮುಂದಿನ ಸೋಮವಾರ ಒಳ್ಳೆಯ ಮುಹೂರ್ತ ಇದೆ. ಅಂದೇ ಯಜ್ಞ ಮಾಡಿಸದಿದ್ದರೆ ರಾಜಕೀಯವಾಗಿ ತೊಂದರೆ ಆಗುತ್ತದೆ ಎಂದು ಭಯ ಹುಟ್ಟಿಸಿದರು.’

‘ಯಜ್ಞಕ್ಕೆ ₹ 7ಲಕ್ಷದಿಂದ ₹ 8 ಲಕ್ಷ ಖರ್ಚಾಗುತ್ತದೆ. ನನಗೆ ಮಂತ್ರಿಗಿರಿಯೂ ಬೇಡ, ಎಮ್ಮೆಲ್ಯೆಗಿರಿಯೂ ಬೇಡವೆಂದೆ’ ಎಂದು ಯತ್ನಾಳ ವಿವರಿಸಿದರು.

‘ಪವಾಡ ಪುರುಷ ಎಂದು ಹೇಳಿಕೊಂಡ ಫಿಲಿಪ್ಪೀನ್ಸ್‌ನ ಆಲ್ಬ್ರಿಟೊ ಎಂಬ ವ್ಯಕ್ತಿ ದಶಕದ ಹಿಂದೆ ಬೆಂಗಳೂರಿಗೆ ಬಂದಿದ್ದ. ಕತ್ತು ನೋವಿನಿಂದ ಬಳಲುತ್ತಿದ್ದ ನಾನೂ ಆತನ ಬಳಿ ಪರಿಹಾರಕ್ಕೆ ಹೋಗಿದ್ದೆ. ನಾನಾಗ ಸಚಿವೆ ಆಗಿದ್ದೆ. ಅನೇಕ ಸಹೋದ್ಯೊಗಿಗಳೂ ಆತನಿಂದ ಪರಿಹಾರ ಪಡೆದರು. ಬರಿಗೈಯಲ್ಲಿ ಆತ ಚಿಕಿತ್ಸೆ ಮಾಡಿದ್ದ’ ಎಂದು ಕಾಂಗ್ರೆಸ್‌ ಸದಸ್ಯೆ ಮೋಟಮ್ಮ ತಿಳಿಸಿದರು.

ಸಿನಿಮಾ ರಂಗದಲ್ಲೂ ಇಂತಹ ವಾಮಾಚಾರಗಳು ಬಹಳ ನಡೆಯುತ್ತವೆ.ಇದರಿಂದಾಗಿ ಅನೇಕರು ಮನೆಮಠ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ನ ಜಯಮಾಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.