ADVERTISEMENT

ವಿದ್ಯಾರ್ಥಿನಿಯರ ವಿವಸ್ತ್ರ ಪ್ರಕರಣ: ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:57 IST
Last Updated 3 ಸೆಪ್ಟೆಂಬರ್ 2015, 19:57 IST

ನಾಗಮಂಗಲ: ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೊಷಣೆಮುಕ್ತ ಸಮಾಜ ನಿರ್ಮಿಸಲು ಮತ್ತು ಮಕ್ಕಳನ್ನು ಭಯದ ವಾತಾವರಣದಿಂದ ರಕ್ಷಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿದ ಅವರು, ವಿದ್ಯಾರ್ಥಿನಿಯರ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ಕುಮಾರ್ ಮತ್ತು ಬಿಇಒ ಅನಂತರಾಜು ಅವರಿಂದ ಮಾಹಿತಿ ಪಡೆದರು. ಬಾಲಕಿಯರ ಶಾಲಾ, ಕಾಲೇಜುಗಳಲ್ಲಿ ಇಡಲಾಗಿರುವ ದೂರುಪೆಟ್ಟಿಗೆ ತೆರೆಯುವಾಗ ಸ್ಥಳೀಯ ಪೊಲೀಸರು ಅಥವಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕು.

ಆದರೆ, ಈ ಶಾಲೆಯಲ್ಲಿ ದೂರುಪೆಟ್ಟಿಗೆ ತೆರೆಯುವಾಗ ಈ ನಿಯಮ ಉಲ್ಲಂಘಿಸಲಾಗಿದೆ. ಶಿಕ್ಷಕಿಯಿಂದ ದೌರ್ಜನ್ಯ ನಡೆದಿರುವುದು ಮೇಲ್ನೋಟಕ್ಕೆ ಸತ್ಯ ಎಂದು ಕಂಡು ಬರುತ್ತಿದ್ದರೂ ಪಾರದರ್ಶಕ ತನಿಖೆಯಿಂದ ನಿಜಾಂಶ ತಿಳಿಯಲಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹಂತದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ತನಿಖೆ ಮುಗಿದ ನಂತರ ಸತ್ಯಾಸತ್ಯತೆ ತಿಳಿಯಲಿದೆ.

ಮಕ್ಕಳ ಸಹಾಯಕ್ಕೆ ನಾವೂ ಇದ್ದೇವೆ ಎಂಬ ಧೈರ್ಯ ತುಂಬುವ ಉದ್ದೇಶದಿಂದ ಶಾಲೆಗೆ ಭೇಟಿ ನೀಡಿದ್ದೇವೆ ಎಂದು ತಿಳಿಸಿದರು. ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವ ಜೊತೆಗೂಡಿ ಪ್ರಕರಣದಿಂದ ನೊಂದ ವಿದ್ಯಾರ್ಥಿನಿಯರ ಹೇಳಿಕೆ ಪಡೆದರು. ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ವಿಚಲಿತರಾಗಬಾರದು ಎಂದು ಧೈರ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.