ADVERTISEMENT

ವಿದ್ಯಾರ್ಥಿನಿ ಸಾವು: ಗೆಳತಿ ಗಂಭೀರ

ಬೆಂಗಳೂರಿನ ಹಾಸ್ಟೆಲ್‌ನಲ್ಲಿ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 20:46 IST
Last Updated 1 ಏಪ್ರಿಲ್ 2015, 20:46 IST

ಬೆಂಗಳೂರು: ಕಾಡುಗೋಡಿಯ ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿ ಕಚೇರಿ ಸಹಾಯಕನೊಬ್ಬ ಮಂಗಳವಾರ ರಾತ್ರಿ ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಗೌತಮಿ (17)  ಮೃತಪಟ್ಟಿದ್ದು, ಆಕೆಯ ಸಹಪಾಠಿ ಸಿರೀಷಾ (16) ಗಂಭೀರ ಗಾಯಗೊಂಡಿದ್ದಾಳೆ.

ಆರೋಪಿ ಮಹೇಶ್‌ನನ್ನು (38) ಪೊಲೀಸರು ಬಂಧಿಸಿದ್ದಾರೆ. ಮೂಲತಃ ಆಗುಂಬೆಯ ಕೆಂದಾಳಬೈಲು ಗ್ರಾಮದ ಮಹೇಶ್, ಎರಡು ವರ್ಷಗಳಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಹಾಸ್ಟೆಲ್‌ ಕೊಠಡಿಗೆ ನುಗ್ಗಿದ್ದ ಈತ, ದೇಶಿ ನಿರ್ಮಿತ ಪಿಸ್ತೂಲಿನಿಂದ (.9ಎಂಎಂ) ಗೌತಮಿಯ ತಲೆಗೆ ಹಾಗೂ ಸಿರೀಷಾಳ ಮುಖಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದ.

ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಬಂದ ಹಾಸ್ಟೆಲ್ ಸಿಬ್ಬಂದಿ, ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಗೌತಮಿ ಕೊನೆಯುಸಿರೆಳೆದಳು. ಪ್ರಾಥಮಿಕ ಚಿಕಿತ್ಸೆ ನಂತರ ಸಿರೀಷಾಳನ್ನು ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಗುಂಡೇಟಿನಿಂದ ಆಕೆಯ ಕೆನ್ನೆ ಛಿದ್ರವಾಗಿದೆ ಎಂದು ಪೊಲೀಸರು ಹೇಳಿದರು.

ಗೌತಮಿ ಹಾಗೂ ಸಿರೀಷಾ ಮೂಲತಃ ತುಮಕೂರು ಜಿಲ್ಲೆಯ ಪಾವಗಡದವರು. ಪಿಯುಸಿ ಮುಗಿಸಿದ್ದ ಅವರು, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸಿದ್ಧತೆಯಲ್ಲಿ ತೊಡಗಿದ್ದರು. ಈ ನಡುವೆ ಆರೋಪಿ, ‘ಕಾಲೇಜಿನಲ್ಲಿ ನಾನು ಹೇಳಿದಂತೆಯೇ ನಡೆದುಕೊಳ್ಳಬೇಕು. ಅನುಮತಿ ಇಲ್ಲದೆ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಪುರುಷ ಸಿಬ್ಬಂದಿ ಜತೆ ಮಾತನಾಡಬಾರದು’ ಎಂಬ ನಿಬಂಧನೆಗಳನ್ನು ಹೇರಿದ್ದ.
ಇದಕ್ಕೆ ವಿದ್ಯಾರ್ಥಿನಿಯರ ವಿರೋಧವಿತ್ತು. ಈ ಬಗ್ಗೆ ಪ್ರಾಂಶುಪಾಲ ಹಾಗೂ ಸಂಸ್ಥೆಯ ಅಧ್ಯಕ್ಷ ಸೋಮ್‌ಸಿಂಗ್ ಅವರ ಬಳಿ ದೂರಿದ್ದರು.

ಇದರಿಂದ ಕುಪಿತಗೊಂಡಿದ್ದ ಆತ, ಅವರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಇತ್ತೀಚೆಗೆ ಆಗುಂಬೆಗೆ ಹೋಗಿದ್ದ ಆತ, ಅಲ್ಲಿಂದ ಪಿಸ್ತೂಲು ತಂದು ಈ ಕೃತ್ಯ ಎಸಗಿದ್ದಾನೆ. ಆತನಿಗೆ ಪಿಸ್ತೂಲು ಹೇಗೆ ಸಿಕ್ಕಿತು ಎಂಬುದು ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT