ADVERTISEMENT

ವಿದ್ಯುತ್‌ ಮಾರಿ, ಹಣ ಗಳಿಸಿ!

‘ಸೂರ್ಯ ರೈತ’ ಯೋಜನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ರೈತರು ಕೃಷಿ ಅಗತ್ಯಗಳಿಗೆ ಬಳಸುವ ಸೌರ ವಿದ್ಯುತ್‌ ಚಾಲಿತ ಪಂಪ್‌ಸೆಟ್ಟುಗಳಿಂದ ವಿದ್ಯುತ್‌ ಖರೀದಿಸುವ ‘ಸೂರ್ಯ ರೈತ’ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ರೈತರು ಉತ್ಪಾದಿಸುವ ಸೌರ   ವಿದ್ಯುತ್ತನ್ನು ಈ ಯೋಜನೆಯ ಅಡಿ ಪ್ರತಿ ಯೂನಿಟ್‌ಗೆ ₨ 9.56ರ ದರದಲ್ಲಿ ಮಾರಾಟ ಮಾಡಬಹುದು.
‘ರೈತರ ಪಂಪ್‌ಸೆಟ್ಟುಗಳಿಗೆ ಉಚಿತ ವಿದ್ಯುತ್‌ ನೀಡಲು ಬೇಕಿರುವ ಸಬ್ಸಿಡಿ ಹೊರೆ ಇಳಿಸುವುದು ಮತ್ತು ಸೌರ ವಿದ್ಯುತ್‌ ಬಳಸುವ ರೈತನಿಗೆ ಲಾಭ ಮಾಡಿ­ಕೊಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಯೋಜನೆಯ ಅಡಿ ರೈತರಿಗೆ ವಾರ್ಷಿಕ ₨ 50 ಸಾವಿರದವರೆಗೆ ಆದಾಯ ಗಳಿಸುವ ಅವಕಾಶ ಇದೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈತ ಎಷ್ಟು ವಿದ್ಯುತ್‌ ಉತ್ಪಾದಿಸಿದ್ದಾನೆ ಎಂಬುದನ್ನು ಮೀಟರ್‌ ಅಳವಡಿಸಿ ಲೆಕ್ಕ ಇಡಲಾಗುತ್ತದೆ. ಆತ ಗ್ರಿಡ್‌ಗೆ ಮಾರುವ ಪ್ರತಿ ಯೂನಿಟ್‌ಗೆ ₨ 9.56 ನೀಡಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಒಪ್ಪಿದೆ. ಹಣವನ್ನು ಪ್ರತಿ ಆರು ತಿಂಗಳಿಗೊಮ್ಮೆ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.

‘ಒಂದು ಲಕ್ಷ ಸೌರ ಪಂಪ್‌ಸೆಟ್ಟುಗಳನ್ನು ನೀಡು­ವು­ದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅದರಲ್ಲಿ ರಾಜ್ಯದ ಪಾಲಿಗೆ ಅಂದಾಜು 10 ಸಾವಿರ ಪಂಪ್‌ಸೆಟ್ಟುಗಳು ದೊರೆಯುವ ನಿರೀಕ್ಷೆ ಇದೆ. ನಾವು ಆರಂಭದಲ್ಲಿ 2,400ರಿಂದ 3,000 ಸೌರ ಪಂಪ್‌ಸೆಟ್ಟುಗಳಿಗೆ ಈ ಯೋಜನೆಯನ್ನು ವಿಸ್ತರಿಸುತ್ತೇವೆ’ ಎಂದರು.

ಸೌರ ಫಲಕಗಳ ಮೂಲಕ ರೈತರು ವರ್ಷದ ಎಲ್ಲ ದಿನ ವಿದ್ಯುತ್‌ ಉತ್ಪಾದಿಸಬಹುದು. ಆದರೆ ವರ್ಷದ ಎಲ್ಲ ದಿನ ರೈತರಿಗೆ ನೀರು ಹಾಯಿಸಲು ವಿದ್ಯುತ್‌ ಅಗತ್ಯ ಇರಲ್ಲ. ಹೆಚ್ಚುವರಿ ವಿದ್ಯುತ್‌ ಮಾರಾಟ ಮಾಡಿ ರೈತನೂ ಹಣ ಗಳಿಸಲಿ, ರಾಜ್ಯ ಎದುರಿಸುತ್ತಿರುವ ವಿದ್ಯುತ್‌ ಕೊರತೆ ತುಸು ನೀಗಿಸಲಿ.

‘ಸೂರ್ಯ ರೈತ’ ಯೋಜನೆಯಡಿ ಸೌರ ವಿದ್ಯುತ್‌ ಪಂಪ್‌ಸೆಟ್ ಅಳವಡಿಸಿಕೊಳ್ಳುವ ರೈತರಿಗೆ ಉಚಿತ ವಿದ್ಯುತ್‌ ಪೂರೈಕೆ ನಿಲ್ಲಿಸುವ ಆಲೋಚನೆ ಸದ್ಯಕ್ಕಿಲ್ಲ ಎಂದು ವಿವರಿಸಿದರು.ಸಬ್ಸಿಡಿ ಪಡೆದು ಅಳವಡಿಸುವ ಸೌರ ವಿದ್ಯುತ್‌ ಫಲಕಗಳಿಂದ ಗ್ರಿಡ್‌ಗೆ ಪಡೆಯುವ ಪ್ರತಿ ಯೂನಿಟ್‌ಗೆ ₨ 7.20 ನೀಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.