ADVERTISEMENT

ವೇದಿಕೆಯಲ್ಲೂ ಮುಂದುವರೆದ ಮುನಿಸು

ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಪರಸ್ಪರ ಮುಖ ನೋಡದ ಯಡಿಯೂರಪ್ಪ – ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಕಲಬುರ್ಗಿಯಲ್ಲಿ ಶನಿವಾರ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹಾಗೂ ಪಕ್ಷದ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರರಾವ್ ಸಮಾಲೋಚನೆಯಲ್ಲಿ ತೊಡಗಿರುವುದು. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇದ್ದಾರೆ
ಕಲಬುರ್ಗಿಯಲ್ಲಿ ಶನಿವಾರ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರರಾವ್ ಸಮಾಲೋಚನೆಯಲ್ಲಿ ತೊಡಗಿರುವುದು. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇದ್ದಾರೆ   

ಕಲಬುರ್ಗಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಬಹುದಿನಗಳ ನಂತರ ವೇದಿಕೆ ಹಂಚಿಕೊಂಡರೂ ಪರಸ್ಪರ ಮುಖ ಸಹ ನೋಡಲಿಲ್ಲ.

ಇಲ್ಲಿನ ಹಾರಕೂಡ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆರಂಭವಾದ ಕಾರ್ಯಕಾರಿಣಿ ಸಭೆಯಲ್ಲಿ ಈ ಇಬ್ಬರೂ ನಾಯಕರ ಮುನಿಸು ಎದ್ದು ಕಾಣಿಸುತ್ತಿತ್ತು. ವೇದಿಕೆಯಲ್ಲಿ ಅನಂತಕುಮಾರ್‌ ಪಕ್ಕದಲ್ಲಿ ಯಡಿಯೂರಪ್ಪ, ಮುರಳೀಧರರಾವ್‌ ಪಕ್ಕದಲ್ಲಿ ಈಶ್ವರಪ್ಪ ಕುಳಿತಿದ್ದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ ಜಿಗಜಿಣಗಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರರಾವ್ ಅವರ ಹೆಸರುಗಳನ್ನು ಮಾತ್ರ ಹೇಳಿದರು. ಬಳಿಕ ‘ವೇದಿಕೆ ಮೇಲಿರುವ ರಾಜ್ಯ ಮುಖಂಡರೇ’ ಎಂದು ಮಾತು ಆರಂಭಿಸಿದರು.

ADVERTISEMENT

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಈಶ್ವರಪ್ಪ, ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ವಿಷಯ ಮಂಡಿಸುವಂತೆ ಸೂಚಿಸಿದ್ದಾರೆ’ ಎಂದರೇ ಹೊರತು, ಯಡಿಯೂರಪ್ಪ ಅವರ ಹೆಸರು ಹೇಳಲಿಲ್ಲ.

ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ವೇದಿಕೆಯಲ್ಲಿ ಪರಸ್ಪರ ಮಾತನಾಡಬಹುದು ಎನ್ನುವ ನಿರೀಕ್ಷೆ ಪಕ್ಷದ ವಲಯದಲ್ಲಿತ್ತು. ಆದರೆ ಮಾತನಾಡುವುದು ಹಾಗಿರಲಿ, ಅವರಿಬ್ಬರೂ ಹೆಸರೂ ಹೇಳದೆ, ಮುಖವನ್ನೂ ನೋಡದೆ ತಮ್ಮಿಬ್ಬರ ಮಧ್ಯದ ಭಿನ್ನಾಭಿಪ್ರಾಯ ಶಮನಗೊಂಡಿಲ್ಲ ಎನ್ನುವುದನ್ನು ಸಾಬೀತುಪಡಿಸಿದರು.

ವೇದಿಕೆಯಲ್ಲಿ ಮಾತನಾಡಿದ ಅನಂತಕುಮಾರ್ ಹಾಗೂ ಪಿ.ಮುರಳೀಧರರಾವ್, ‘ರಾಜ್ಯ ಸರ್ಕಾರದ ವೈಫಲ್ಯ, ಕೇಂದ್ರದ ಬರ ಪರಿಹಾರದ ಅನುದಾನ ಬಳಕೆ ಮಾಡದಿರುವುದು ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಾರ್ಯಕಾರಿಣಿ ಬಳಿಕ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಹೋರಾಟ ಆರಂಭಿಸಲಾಗುವುದು’ ಎಂದು ಘೋಷಿಸುವ ಮೂಲಕ ಯಡಿಯೂರಪ್ಪ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದರು. ಅಲ್ಲದೆ, ಪರೋಕ್ಷವಾಗಿ ಈಶ್ವರಪ್ಪ ಅವರಿಗೆ ಸಂದೇಶವನ್ನೂ ರವಾನಿಸಿದರು.

ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭ ಮುಗಿಯುತ್ತಿದ್ದಂತೆಯೇ ಈಶ್ವರಪ್ಪ ಹೊರನಡೆದರು. ನಂತರ ಅವರು ಎಲ್ಲಿಗೆ ಹೋದರು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಸಂಜೆ 4 ಗಂಟೆಗೆ ಮತ್ತೆ ಕಾರ್ಯಕಾರಿಣಿ ಭಾಗವಹಿಸಿ, ರಾಜ್ಯ ಸರ್ಕಾರದ ವೈಫಲ್ಯ ಕುರಿತು ವಿಷಯ ಮಂಡಿಸಿದರು.

‘ಭಿನ್ನಮತ ಇರುವುದು ನಿಜ’
‘ಪಕ್ಷದಲ್ಲಿ ಭಿನ್ನಮತ ಇರುವುದು ನಿಜ. ಅಪ್ಪ–ಮಕ್ಕಳ ಮಧ್ಯೆಯೇ ಭಿನ್ನಮತ ಇರುವಾಗ ಒಂದು ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷದಲ್ಲಿ ಇದೆಲ್ಲವೂ ಸಹಜ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು. ಕಾರ್ಯಕಾರಿಣಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಬಿಜೆಪಿಯಲ್ಲಿನ ಗೊಂದಲದಿಂದ ತಾವು ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌ನಲ್ಲಿದೆ. ಆದರೆ ಅದು ಅಸಾಧ್ಯ’ ಎಂದರು.

‘ಕಾಂಗ್ರೆಸ್ 420 ಸರ್ಕಾರ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 420 ಸರ್ಕಾರವಾಗಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ್ ವಾಗ್ದಾಳಿ ನಡೆಸಿದರು. ‘ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಸಿಸಿಐ)ಗೆ ವಾರ್ಷಿಕ ₹1ಸಾವಿರ ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ ₹3,150 ಕೋಟಿ ಘೋಷಣೆ ಮಾಡಿದ್ದು, ಅದರಲ್ಲಿ ₹1,330 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಖರ್ಚಾಗಿದ್ದು ₹420 ಕೋಟಿ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ 420 ಸರ್ಕಾರವಾಗಿದೆ’ ಎಂದು ಗೇಲಿ ಮಾಡಿದರು.

ಈಶ್ವರಪ್ಪ ಜತೆ ಮುರಳೀಧರರಾವ್ ಮಾತುಕತೆ
ಕಲಬುರ್ಗಿ: ನಗರದಲ್ಲಿ ಶನಿವಾರ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಬಳಿಕ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರರಾವ್ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದರು. ‘ಸಭೆ ನಡೆಯುತ್ತಿರುವ ಕಲ್ಯಾಣ ಮಂಟಪದ ಒಂದನೇ ಅಂತಸ್ತಿಗೆ ತೆರಳಿದ ಮುರಳೀಧರರಾವ್, ಬಿಜೆಪಿ– ಬ್ರಿಗೇಡ್‌ ನಡುವಿನ ಭಿನ್ನಮತಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಬಿಎಸ್‌ವೈ ಬ್ರಿಗೇಡ್‌ ಕಟ್ಟುತ್ತೇವೆ’
ಕಾರವಾರ: ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ದೂರ ಆಗಬೇಕು.ಇಲ್ಲದಿದ್ದರೆ ಬಿಎಸ್‌ವೈ ಬ್ರಿಗೇಡ್‌ ರಚಿಸುವ ಮೂಲಕ ಅವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.