ADVERTISEMENT

ವೇಶ್ಯಾವೃತ್ತಿಗೆ ಮಾನ್ಯತೆ: ಪರಿಶೀಲನೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ‘ವೇಶ್ಯಾವಾಟಿಕೆಯನ್ನು ಕಾನೂನು­ಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಮಾರ್ಗ­ದರ್ಶಿ ಸೂತ್ರ ಸಿದ್ಧಪಡಿಸಲು  ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿ­ಯನ್ನು ರಚಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದರು.

ಚಾರುಮತಿ ಪ್ರಕಾಶನವು ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋ­ಜಿಸಿದ್ದ ಡಾ.ಲೀಲಾ ಸಂಪಿಗೆ ಅವರ ‘ಬುದ್ಧನಿಲ್ಲದ ಅಮ್ರಪಾಲಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ  ಮಾತನಾಡಿದರು. ‘ಇದು ಸೂಕ್ಷ್ಮ ವಿಚಾರ. ಇದರ ಕುರಿತು ದಿಢೀರ್‌ ನಿರ್ಧಾರ ತೆಗೆದು­ಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವೇಶ್ಯೆಯರ ಕುರಿತು, ಅವರ ಏಳಿಗೆ ಮತ್ತು ಅವರ ನೋವುಗಳ ಕುರಿತು ಪ್ರಾಮಾ­ಣಿಕವಾಗಿ ಕೆಲಸ ಮಾಡಿದ ತಜ್ಞರ ಸಮಿತಿಯನ್ನು ರಚಿಸಲಾಗು­ವುದು. ಆ ಸಮಿತಿ ನೀಡುವ ಸಲಹೆ­ಗ­ನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾ­ಗುವುದು’ ಎಂದರು.

‘ಇದನ್ನು ವೃತ್ತಿಯೆಂದು ಘೋಷಿ­ಸಬೇಕೊ ಅಥವಾ ಇದನ್ನೇ ಸಂಪೂರ್ಣ­ವಾಗಿ ನಿಷೇಧಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕೊ ಎಂಬ ಪ್ರಶ್ನೆಗಳು ಸರ್ಕಾ­ರದ ಮುಂದಿವೆ. ಹೀಗಾಗಿ, ಇದರ ಕುರಿತು ದೊಡ್ಡ ಮಟ್ಟದ ಚರ್ಚೆಗಳಾ­ಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪ್ರಾಂಶುಪಾಲ ಸಿ. ಯತಿ­ರಾಜು ಕೃತಿಯ ಕುರಿತು ಮಾತನಾಡಿ, ‘ಡಾ. ಲೀಲಾ ಸಂಪಿಗೆ ಅವರ ಜೀವನದಲ್ಲಿ ಸಾಗಿಬಂದ ಹೆಜ್ಜೆಗಳೇ ಇಲ್ಲಿ ಅಕ್ಷರ ರೂಪವನ್ನು ತಾಳಿವೆ. ಲೈಂಗಿಕ ವೃತ್ತಿಯಲ್ಲಿ ತೊಡಗಿದವರ ನೋವು, ನಲಿವುಗಳನ್ನು ಕೃತಿ ಮನೋ­ಜ್ಞವಾಗಿ ಕಟ್ಟಿಕೊಡುತ್ತದೆ’ ಎಂದು ತಿಳಿಸಿದರು.

ಸಹಭಾಗಿನಿ ಲೈಂಗಿಕ ವೃತ್ತಿ ಮಹಿಳೆ­ಯರ ರಾಜ್ಯ ಒಕ್ಕೂಟದ ಕಾರ್ಯ­ದರ್ಶಿ ಶಾಂತಮ್ಮ, ‘ವೇಶ್ಯಾವಾಟಿಕೆ­ಯನ್ನು ವೃತ್ತಿ­ಯೆಂದು ಪರಿಗಣಿಸ­ಬೇಕು. ಸಮಾ­ಜದ ಸಮತೋಲನಕ್ಕೆ ಅವರ ಕೊಡು­ಗೆಯೂ ಇದೆ. ಒಂದು ವೇಳೆ ಅವರಿಲ್ಲದೆ ಇದ್ದಿದ್ದರೆ ತೊಟ್ಟಿಲ ಮಗುವಿನ ಮೇಲೊ ದೌರ್ಜನ್ಯ ನಡೆಯುವ ಪ್ರಸಂಗಗಳು ನಡೆಯುತ್ತಿದ್ದವು’ ಎಂದರು.

‘ನನ್ನನ್ನು ಉಳಿಸಿದ ಗಟ್ಟಿ ನಿರ್ಧಾರ’
‘ನನ್ನ ಬದುಕಿನ 17, 18 ಹಾಗೂ 20 ನೇ ವಯಸ್ಸಿನಲ್ಲಿ ಎಲ್ಲ ಬಗೆಯ ಸಂಕಷ್ಟ ಬಂದಿತ್ತು. ಆಗ ಯಾವುದೇ ಕಾರಣಕ್ಕೂ ವೇಶ್ಯಾವಾಟಿಕೆಯಲ್ಲಿ ತೊಡ­­ಗ­­ಬಾರದು, ಆತ್ಮಹತ್ಯೆ ಮಾಡಿ­ಕೊಳ್ಳ­ಬಾರದು ಎಂಬ ಗಟ್ಟಿ ನಿರ್ಧಾ­ರ­­ಕೈಗೊಂಡಿದ್ದೆ. ಅಂದು ಕೈಗೊಂಡ ಗಟ್ಟಿ ನಿರ್ಧಾರವೇ ಇಡ್ಲಿ ವ್ಯಾಪಾರ ಆರಂಭಿ­ಸಲು ಪ್ರೇರಣೆಯಾಯಿತು’ ಎಂದು ಸಚಿವೆ ಉಮಾಶ್ರೀ ಭಾವುಕ­ರಾಗಿ ನುಡಿದರು.  ‘ಶ್ರಮ ವಹಿಸಿ ಕೆಲಸ ಮಾಡುವುದರಿಂದಲೇ ಜೀವ­ನ­ದಲ್ಲಿ ಸಾಧನೆ ಮಾಡಬಹುದು ಎಂಬ ಭರವಸೆ ಮೂಡಿತು. ಆ ನಂತರ ಕಾಲಿಗೆ ಗೆಜ್ಜೆ ಕಟ್ಟಿ, ನೃತ್ಯ ಮಾಡಿ, ನಾಟಕ ಮಾಡಿ ದೊಡ್ಡ ಕಲಾವಿದೆ ಎನಿಸಿಕೊಳ್ಳಲು 40 ವರ್ಷ ಹಿಡಿಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.