ADVERTISEMENT

ವೋಟಿಗೆ ತಪ; ನೀರಿಗೆ ಜನರ ಜಪ

ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ

ಕೆ.ಎಚ್.ಓಬಳೇಶ್
Published 25 ಮಾರ್ಚ್ 2017, 3:01 IST
Last Updated 25 ಮಾರ್ಚ್ 2017, 3:01 IST
ಗುಂಡ್ಲುಪೇಟೆ ತಾಲ್ಲೂಕಿನ ಕೂತನೂರು ಗ್ರಾಮದಲ್ಲಿ ಬಿಜೆಪಿ ಪ್ರಚಾರದ ವೇಳೆ ಟ್ಯಾಂಕ್‌ಗಳ ಮುಂಭಾಗ ಕಂಡುಬಂದ ಖಾಲಿ ಬಿಂದಿಗೆಗಳು
ಗುಂಡ್ಲುಪೇಟೆ ತಾಲ್ಲೂಕಿನ ಕೂತನೂರು ಗ್ರಾಮದಲ್ಲಿ ಬಿಜೆಪಿ ಪ್ರಚಾರದ ವೇಳೆ ಟ್ಯಾಂಕ್‌ಗಳ ಮುಂಭಾಗ ಕಂಡುಬಂದ ಖಾಲಿ ಬಿಂದಿಗೆಗಳು   

ಚಾಮರಾಜನಗರ: ನೆತ್ತಿ ಸುಡುವ ರಣಬಿಸಿಲು. ಟ್ಯಾಂಕ್‌ಗಳ ಮುಂಭಾಗ ಸಾಲಾಗಿ ಇಟ್ಟಿರುವ ಖಾಲಿ ಬಿಂದಿಗೆಗಳು. ಅಂತರ್ಜಲ ಕುಸಿದು ನೀರಿನ ಸಮಸ್ಯೆಗೆ ಮೂಕಸಾಕ್ಷಿಯಾಗಿ ನಿಂತಿರುವ ಕೊಳವೆಬಾವಿಗಳು.

ಇನ್ನೊಂದೆಡೆ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರ ಅಬ್ಬರದ ಪ್ರಚಾರ. ಉಪ ಚುನಾವಣೆಯಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳ ವರಿಷ್ಠರಿಗೆ ಖಾಲಿ ಬಿಂದಿಗೆಗಳ ಸಮಸ್ಯೆ ಅರ್ಥವಾಗುತ್ತಿಲ್ಲ. ನೀರಿನ ವಾಸ್ತವ ಸಮಸ್ಯೆ ಅರ್ಥೈಸಿಕೊಳ್ಳುವ ಸಮಯವೂ ಅವರಿಗಿಲ್ಲ.

–ಇದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದರೆ ಕಾಣುವ ಚಿತ್ರಣ. ಕ್ಷೇತ್ರದಲ್ಲಿ ರಾಜಕೀಯ ಪಕ್ಷದ ಮುಖಂಡರು ಉಪ ಚುನಾವಣೆಯ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಬಿರುಸಿನ ಪ್ರಚಾರ ನಡೆಸುತ್ತಿದೆ. ಕುಡಿಯುವ ನೀರಿನ ಸಮಸ್ಯೆ, ಖಾಲಿ ಬಿಂದಿಗೆಗಳ ದರ್ಶನ ಆಗುತ್ತಿದೆ.

ಕ್ಷೇತ್ರದ ಯಾವುದೇ ಗ್ರಾಮಕ್ಕೆ ತೆರಳಿದರೂ ಟ್ಯಾಂಕ್‌ಗಳ ಮುಂಭಾಗ ಇಟ್ಟಿರುವ ಖಾಲಿ ಬಿಂದಿಗೆಗಳು ಅಭ್ಯರ್ಥಿಗಳು, ಮುಖಂಡರು ಮತ್ತು ಕಾರ್ಯಕರ್ತರಿಗೆ ಸ್ವಾಗತ ನೀಡುತ್ತವೆ. ನಮ್ಮ ಪಕ್ಷ ಗೆಲುವು ಸಾಧಿಸಿದರೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಯೋಜನೆ ರೂಪಿಸುತ್ತೇವೆ ಎಂಬ ಆಶ್ವಾಸನೆ ನೀಡಿ ಮತ್ತೊಂದು ಊರಿಗೆ ಪ್ರಚಾರದ ದಂಡು ತೆರಳುತ್ತದೆ. ಸದ್ಯದ ಸಮಸ್ಯೆ ಬಗೆಹರಿಸಲು ಯಾರೊಬ್ಬರೂ ಮುಂದಾಗುತ್ತಿಲ್ಲ ಎನ್ನುವುದು ಗ್ರಾಮೀಣರ ಅಳಲು.

ಗುಂಡ್ಲುಪೇಟೆ ತಾಲ್ಲೂಕಿನ ಜನರು ಸತತ ಬರದಿಂದ ತತ್ತರಿಸಿದ್ದಾರೆ. ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತದೆ. ಆದರೆ, ಮುಂಗಾರು ಹಂಗಾಮಿನಡಿ ಮಳೆ ಸುರಿಯುವುದಿಲ್ಲ. ಪ್ರತಿವರ್ಷ ನೀರಿಗಾಗಿ ಅನುಭವಿಸುವ ಸಂಕಷ್ಟ ಮಾತ್ರ ಕಡಿಮೆಯಾಗಿಲ್ಲ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 158 ಹಳ್ಳಿಗಳಿವೆ. ಈ ಪೈಕಿ ಮುಕ್ಕಾಲು ಭಾಗದಷ್ಟು ಗ್ರಾಮಗಳ ನೀರಿನ ಮೂಲಗಳಲ್ಲಿ ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಪ್ರಸ್ತುತ 10 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಗ್ರಾಮಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ರಾಜಕೀಯ ಪಕ್ಷದ ಮುಖಂಡರು ಮನೆಗಳಿಗೆ ತೆರಳಿ ಮತ ನೀಡುವಂತೆ ಮನವಿ ಮಾಡುತ್ತಾರೆ. ಆದರೆ, ನೀರಿನ ಸಮಸ್ಯೆ ಬಗೆಹರಿಸುವಂತೆ ಜನರು ಮಾಡುವ ಮನವಿ ಕೇಳುವ ವ್ಯವಧಾನ ರಾಜಕೀಯ ಧುರೀಣರಿಗೆ ಇಲ್ಲ ಎನ್ನುವುದು ಗ್ರಾಮೀಣರ ದೂರು.

ಬಹುಗ್ರಾಮ ಯೋಜನೆ ವಿಳಂಬ: ತಾಲ್ಲೂಕಿನ 131 ಗ್ರಾಮಗಳಿಗೆ ನದಿಮೂಲದಿಂದ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ಆಮೆಗತಿಯಲ್ಲಿ ಸಾಗಿದೆ. ಹಿಂದಿನ ವರ್ಷದ ಡಿಸೆಂಬರ್‌ನಲ್ಲಿಯೇ ಪ್ರಾಯೋಗಿಕವಾಗಿ ಕಚ್ಚಾ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಈ ಯೋಜನೆಯ ಒಟ್ಟು ವೆಚ್ಚ ₹ 205 ಕೋಟಿ. ಯೋಜನೆಯಡಿ ಇಲ್ಲಿಯವರೆಗೆ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಿಗದಿತ ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆಯ ವಿಳಂಬದಿಂದ ಜನರು ನೀರಿಗೆ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದಲ್ಲಿ 6 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ರಾಜಕೀಯ ಪಕ್ಷಗಳಿಗೆ ಈಗ ವೋಟಿನ ಚಿಂತೆಯಾಗಿದೆ. ನಮಗೆ ಕುಡಿಯುವ ನೀರಿನ ಸಮಸ್ಯೆ.
ದೊರೆಸ್ವಾಮಿ
ಕಲ್ಲಿಗೌಡನಹಳ್ಳಿ,
ಗುಂಡ್ಲುಪೇಟೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.