ADVERTISEMENT

ಶಾಲೆಯಲ್ಲ, ಇದು ಮಕ್ಕಳ ಈಜುಕೊಳ!

ಮಳೆ ಬಂದರೆ ಪಾಠ ಇಲ್ಲ; ನೀರು ಬಸಿಯುವುದೇ ಶಿಕ್ಷಕಿಯರ ಕೆಲಸ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆಯೊಳಗೆ ತುಂಬಿಕೊಳ್ಳುತ್ತಿರುವ ಒಸರು ನೀರನ್ನು ಹೊರಗೆ ಹಾಯಿಸುವ ಕೆಲಸದಲ್ಲಿ ನಿರತ ಶಿಕ್ಷಕಿಯರು
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಳಗೆ ತುಂಬಿಕೊಳ್ಳುತ್ತಿರುವ ಒಸರು ನೀರನ್ನು ಹೊರಗೆ ಹಾಯಿಸುವ ಕೆಲಸದಲ್ಲಿ ನಿರತ ಶಿಕ್ಷಕಿಯರು   

ಪುತ್ತೂರು: ಈ ಸರ್ಕಾರಿ ಶಾಲೆ ಮಳೆಗಾಲದಲ್ಲಿ ಮಕ್ಕಳ ಪಾಲಿಗೆ ಈಜು ಕೊಳ! ಜೋರಾಗಿ ಮಳೆ ಸುರಿದರೆ ಒಸರು ನೀರನ್ನು ಹೊರಗೆ ಹಾಯಿಸುವುದೇ ಇಲ್ಲಿನ ಶಿಕ್ಷಕರ ಕೆಲಸ! ಮಳೆಯ ನಿಮಿತ್ತ ಇಲ್ಲಿ ಮಕ್ಕಳಿಗೆ ರಜೆ ಸಾರುವ ಪ್ರಮೇಯವೇ ಬರುವುದಿಲ್ಲ. ಮಳೆ ಜೋರಾಗಿ ಬಂದರೆ ಮಕ್ಕಳೇ ಅಂದು ಶಾಲೆಗೆ ಬರುವುದಿಲ್ಲ. ಇಂತಹ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದು ಪುತ್ತೂರು ನಗರದ ಹೃದಯ ಭಾಗದಲ್ಲಿಯೇ ಇದೆ!

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕಿರಿಯ ಪ್ರಾಥಮಿಕ ಶಾಲೆಯೇ ಈ ದುಃಸ್ಥಿತಿಯಲ್ಲಿರುವುದು. ಒಂದರಿಂದ 5ನೇ ತರಗತಿವರೆಗಿನ ಎಳೆಯ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಶಾಲೆ ಮಳೆಗಾಲದಲ್ಲಿ ಎದುರಿಸುತ್ತಿರುವ  ಸಮಸ್ಯೆಯ ಬಗ್ಗೆ ಶಿಕ್ಷಣ ಇಲಾಖೆಯಾಗಲಿ, ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಗಮನಿಸಿಯೇ ಇಲ್ಲ!

ಶಾಲೆಯ ಹಿಂಬದಿಯ ಎತ್ತರ ಪ್ರದೇಶದಲ್ಲಿ ನೀರು ಹರಿದು ಹೋಗುವ ಒಳಚರಂಡಿ ಇದೆ. ಈ ಚರಂಡಿ ನೀರು ಪಕ್ಕದಲ್ಲಿಯೇ ಹರಿಯುವ ತೋಡಿಗೆ ಸೇರುತ್ತದೆ. ಮಳೆಗಾಲದಲ್ಲಿ ತೋಡಿನ ನೀರು ಏರುತ್ತಿದ್ದಂತೆಯೇ ಚರಂಡಿ ನೀರು ಬಂದ್ ಆಗಿ ಶಾಲೆಯೊಳಗೆ ಒಸರಲು ಆರಂಭಗೊಳ್ಳುತ್ತದೆ.

ಚರಂಡಿಯೊಳಗೆ ಹೆಗ್ಗಣಗಳು ಕೊರೆದ  ತೂತುಗಳ ಮೂಲಕ ಚರಂಡಿಯಲ್ಲಿನ ನೀರು ಕೆಳಗಿನ ಪ್ರದೇಶದಲ್ಲಿರುವ ಶಾಲಾ ಕಟ್ಟಡದ ಗೋಡೆಗೆ ಹರಿದು ಬರುತ್ತಿರುವುದೇ ಶಾಲೆಯ ಕೋಣೆಯೊಳಗೆ ಒಸರಾಗಲು ಕಾರಣ ಎನ್ನಲಾಗುತ್ತಿದೆ.

ಇಲ್ಲಿ ಒಂದೇ ಶಾಲಾ ಕಟ್ಟಡದಲ್ಲಿ ಪ್ರತ್ಯೇಕ ಎರಡು ವಿಭಾಗ ಮಾಡಿಕೊಂಡು  ಒಂದರಿಂದ 5 ರ ತನಕದ ತರಗತಿಗಳು ನಡೆಯುತ್ತಿವೆ. ಒಟ್ಟು 24 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಒಂದರಿಂದ ಮೂರನೇ ತರಗತಿ ತನಕದ ಮಕ್ಕಳ ‘ನಲಿಕಲಿ’ ಶಿಕ್ಷಣಕ್ಕಾಗಿ ಮಾಡಿಕೊಂಡ ವಿಭಾಗದಲ್ಲಿ ಮಳೆಗಾಲದಲ್ಲಿ ಒಸರು ನೀರು ತುಂಬಿಕೊಳ್ಳುವ ಕಾರಣ ಮಕ್ಕಳು ನೀರಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. 

ಇಲ್ಲಿ ಇಬ್ಬರು ಶಿಕ್ಷಕಿಯರಿದ್ದಾರೆ. ಆದರೆ ಮಳೆಗಾಲದಲ್ಲಿ ಪಾಠ ಮಾಡುವ ಬದಲು ಶಾಲೆಯೊಳಗೆ ತುಂಬಿಕೊಳ್ಳುವ ನೀರನ್ನು ಹೊರಗೆ ಹಾಯಿಸುವ ಕೆಲಸ ಮಾಡಬೇಕಾಗಿದೆ.

ಶಾಲೆಯೊಳಗೆ ಕೊಳಕು ನೀರು ತುಂಬಿಕೊಳ್ಳುವುದರಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಕೂಡ ಬಾಧಿಸುವ ಸಾಧ್ಯತೆಯೂ ಇದೆ. ಒಸರು ನೀರಿನಿಂದಾಗಿ ಶಿಕ್ಷಕರ ಕಾಲ ಬೆರಳುಗಳು ಹುಳ ಬಾಧೆಗೆ ತುತ್ತಾಗುತ್ತಿವೆ. ಹೀಗಿರುವಾಗ ಎಳೆಯ ಮಕ್ಕಳ ಪಾಡೇನು?

‘ಮಳೆ ಬರುವಾಗ ಕುಳಿತುಕೊಳ್ಳಲು ಆಗುವುದಿಲ್ಲ. ಪಾಠ ಮಾಡುವ ಸ್ಥಿತಿಯೂ ಇಲ್ಲ. ನಾವೆಲ್ಲರೂ ಸೇರಿಕೊಂಡು ನೀರನ್ನು ಹೊರಗೆ ಹಾಯಿಸಬೇಕಾಗಿದೆ. ಮಳೆ ಜೋರಾಗಿ ಬಂದರೆ ಮಕ್ಕಳು ಬರುವುದಿಲ್ಲ’ ಎನ್ನುತ್ತಾರೆ ಶಿಕ್ಷಕಿಯರು.

ಶಿಕ್ಷಣ ಇಲಾಖೆಯಿಂದ ಕೇವಲ ಅರ್ಧ ಕಿ.ಮೀ. ವ್ಯಾಪ್ತಿಯೊಳಗಿರುವ ಈ ಶಾಲೆಯ ಸಮಸ್ಯೆಯ ಬಗ್ಗೆ ಅಧಿಕಾರಿಗಳು ಗಮನ ಹರಿಸಿಲ್ಲ. ಪ್ರತೀ  ಮಳೆಗಾಲದಲ್ಲಿ ಈ ಸಮಸ್ಯೆ ಉದ್ಭವಿಸುತ್ತಿದ್ದರೂ ಪರಿಹಾರಕ್ಕೆ ಮುಂದಾಗಿಲ್ಲ ಎಂಬುದು ಮಕ್ಕಳ ಪೋಷಕರ ಆರೋಪ.

ಶಾಲೆಯ ಸಮಸ್ಯೆ ಬಗೆಹರಿಸಿ ಅಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಇಲ್ಲಿನ ಮಕ್ಕಳನ್ನು ನೆಲ್ಲಿಕಟ್ಟೆ ಶಾಲೆಗೆ ಕಳುಹಿಸಿ ಎನ್ನುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸಮಸ್ಯೆ ಬಗೆಹರಿಸುವ ಬದಲು ಸರ್ಕಾರಿ ಶಾಲೆಯೊಂದನ್ನು ಮೂಲೆಗುಂಪು ಮಾಡಲು ಹೊರಟಿರುವುದು ಎಷ್ಟು ಸರಿ? ಎನ್ನುವುದು ಸಾರ್ವಜನಿಕರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.