ADVERTISEMENT

ಶಾಸಕರ ಅತೃಪ್ತಿ: 16ರ ಕೆಪಿಸಿಸಿ ಕಾರ್ಯಕಾರಿಣಿ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2016, 19:30 IST
Last Updated 10 ಏಪ್ರಿಲ್ 2016, 19:30 IST

ಬೆಂಗಳೂರು: ಇದೇ 16ರಂದು ನಿಗದಿಯಾಗಿದ್ದ ಕೆಪಿಸಿಸಿ ಕಾರ್ಯಕಾರಿಣಿಯನ್ನು ಮುಂದೂಡಲು ಕಾಂಗ್ರೆಸ್‌ ನಿರ್ಧರಿಸಿದೆ.

‘ಅನೇಕ ಸಚಿವರ ಕಾರ್ಯವೈಖರಿ ಬಗ್ಗೆ  ಪಕ್ಷದ ಶಾಸಕರು ಅಸಮಾಧಾನ ಹೊಂದಿದ್ದಾರೆ. ಸಂಪುಟವನ್ನು ತಕ್ಷಣ  ಪುನರ್‌ರಚನೆ ಮಾಡಬೇಕು ಎಂದು   ಶಾಸಕರ ಗುಂಪು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಅತೃಪ್ತ ಶಾಸಕರು ಸಿಟ್ಟನ್ನು ತೋಡಿಕೊಳ್ಳಲು ಸಭೆಯನ್ನು ಬಳಸಿಕೊಂಡರೆ ಮುಜುಗರದ ಪರಿಸ್ಥಿತಿ ನಿರ್ಮಾಣ ಆಗಬಹುದು.  ಹಾಗಾಗಿ ಈಗ ಸಭೆ ನಡೆಸುವುದು ಸೂಕ್ತ ಅಲ್ಲ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ. ಇದನ್ನು ಆಧರಿಸಿ  ಸಭೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂದು  ಮೂಲಗಳು ತಿಳಿಸಿವೆ.

ಜಿಲ್ಲಾ ಮತ್ತು  ತಾಲ್ಲೂಕು ಪಂಚಾಯ್ತಿ  ಹಾಗೂ ವಿಧಾನಸಭಾ ಉಪಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆ  ಹಾಗೂ ಪಕ್ಷದ ಸಂಘಟನೆ ಬಗ್ಗೆ ಚರ್ಚಿಸುವ ಸಲುವಾಗಿ ಕಾರ್ಯಕಾರಿಣಿ  ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿಯಾಗಿದ್ದ  ಪಕ್ಷದ 25 ಸಮಾನ ಮನಸ್ಕ ಶಾಸಕರು, ‘2018ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸಲು ಅಸಮರ್ಥ ಸಚಿವರನ್ನು ಕೈಬಿಡುವುದು ಅನಿವಾರ್ಯ. ಸಮರ್ಪಕವಾಗಿ ಕಾರ್ಯನಿರ್ವಹಿಸದ  ಸಚಿವರನ್ನು  ತಕ್ಷಣವೇ ಕೈಬಿಟ್ಟು, ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದ್ದರು.

ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 15ರಂದು ಸಿ.ಎಂ. ದೆಹಲಿಗೆ: ಸಂಪುಟ ಪುನರ್‌ರಚನೆ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚಿಸಲು ಮುಖ್ಯಮಂತ್ರಿಯವರು ಇದೇ 15 ದೆಹಲಿಗೆ ತೆರಳಲಿದ್ದಾರೆ. 16ರಂದು ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯದ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಅವರು ಇದೇ 13ರಂದು ಬೆಂಗಳೂರಿಗೆ ಬರಲಿದ್ದಾರೆ. ಅಂಬೇಡ್ಕರ್‌ ಅವರ 125ನೇ ಜಯಂತಿ ಪ್ರಯುಕ್ತ ಕೆಪಿಸಿಸಿ ವತಿಯಿಂದ ಏರ್ಪಡಿಸಿರುವ ವಿಚಾರ ಸಂಕಿರಣದಲ್ಲಿ ಅವರು ಭಾಗವಹಿಸಲಿದ್ದಾರೆ.  ಸಂಪುಟ ಪುನರ್‌ರಚನೆ ಬಗ್ಗೆ ಮುಖ್ಯಮಂತ್ರಿಯವರು ದಿಗ್ವಿಜಯ ಸಿಂಗ್‌ ಜತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಇದೇ 11 ರಂದು (ಸೋಮವಾರ) ನಾಗಪುರದಲ್ಲಿ ಏರ್ಪಡಿಸಲಾದ, ಅಂಬೇಡ್ಕರ್‌ ಅವರ 125ನೇ ಜಯಂತಿ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೂ ಪಾಲ್ಗೊಳ್ಳಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.