ADVERTISEMENT

ಶಾಸಕ ಜೀವರಾಜ್‌ ಸೇರಿ 23 ಮಂದಿ ವಿರುದ್ಧ ಚಾರ್ಜ್‌ಶೀಟ್‌

ಅಕ್ರಮ -ಸಕ್ರಮ ಅವ್ಯವಹಾರ ಆರೋಪ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:53 IST
Last Updated 3 ಸೆಪ್ಟೆಂಬರ್ 2015, 19:53 IST

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ-ಸಕ್ರಮದಲ್ಲಿ ನಡೆದಿರುವ ಅಕ್ರಮದ ಆರೋಪಕ್ಕೆ ಸಂಬಂಧಿಸಿ ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಗುರುವಾರ ಶಾಸಕ ಡಿ.ಎನ್.ಜೀವರಾಜ್ ಸೇರಿದಂತೆ 23 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದರು.

ಅಕ್ರಮ -ಸಕ್ರಮ ಸಮಿತಿಯ ಅಧ್ಯಕ್ಷರಾದ ಬಿಜೆಪಿ ಶಾಸಕ ಡಿ.ಎನ್.ಜೀವರಾಜ್, ನರಸಿಂಹ ರಾಜಪುರ ತಹಶೀಲ್ದಾರ್‌ ಆಗಿದ್ದ ರಮೇಶ್, ಸಮಿತಿ ಸದಸ್ಯರಾದ ಅನುಪಮ ಆಳ್ವ, ರಮೇಶ್, ಮನು ಸೇರಿದಂತೆ 13ಮಂದಿ ವಿರುದ್ಧ ವಾಸುದೇವ ಕೋಟ್ಯಾನ್ ಎಂಬುವವರು 2012ರ ನವೆಂಬರ್ 30ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

2012ರ ಡಿಸೆಂಬರ್ 5ರಂದು ಎಫ್‌ಐಆರ್ ಕೂಡ ದಾಖಲಾಗಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾಲಯ 2012ರ ಡಿಸೆಂಬರ್ 14ರಂದು ತನಿಖೆ ನಡೆಸಲು ಆದೇಶ ನೀಡಿತ್ತು. ಆರೋಪಿಗಳಿಗೆ ಹಲವು ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ನೀಡಿತ್ತು.

ಅಂದಿನ ಲೋಕಾಯುಕ್ತ ಡಿವೈಎಸ್ಪಿ ಪ್ರಸನ್ನ ವಿ.ರಾಜು ಪ್ರಕರಣದ ವಿಚಾರಣೆ ನಡೆಸಿದ್ದರು. ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಮೂವರು ಆರೋಪಿಗಳು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಸಿಗದ ಕಾರಣ ಮತ್ತೊಬ್ಬ ಆರೋಪಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪ್ರಕರಣದಿಂದ ಕೈಬಿಡಲಾಗಿದೆ.

ತನಿಖೆ ವೇಳೆ ದೊರೆತ ಸಾಕ್ಷ್ಯಾಧಾರ ಪರಿಗಣಿಸಿ ಶಾಸಕ ಡಿ.ಎನ್‌.ಜೀವರಾಜ್ ಸೇರಿದಂತೆ 23 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.