ADVERTISEMENT

ಶಾಸಕ ರವೀಂದ್ರ ದೂರು

ಯೂಟ್ಯೂಬ್‌ನಲ್ಲಿ ಯುವತಿ ಜತೆ ವಿಡಿಯೊ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST

ದಾವಣಗೆರೆ: ಹರಪನಹಳ್ಳಿಯ ಕಾಂಗ್ರೆಸ್‌ ಶಾಸಕ ಎಂ.ಪಿ.ರವೀಂದ್ರ ಹಾಗೂ ಯುವತಿಯೊಬ್ಬಳು  ಜೊತೆಗಿರುವ ಚಿತ್ರಗಳನ್ನು ಬಳಸಿಕೊಂಡು ಅಶ್ಲೀಲ ಸಂಭಾಷಣೆಯಿರುವ ವಿಡಿಯೊವನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದ್ದು, ಇದರ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹರಿದಾಡುತ್ತಿದೆ.

ರವೀಂದ್ರ ಅವರು ಯುವತಿಯನ್ನು ಅಪ್ಪಿಕೊಂಡಿರುವ, ಯುವತಿಯಿಂದ ತುತ್ತು ತಿನ್ನುತ್ತಿರುವ ಛಾಯಾಚಿತ್ರಗಳನ್ನು ಬಳಸಿಕೊಂಡು 26 ಸೆಕೆಂಡ್‌ಗಳ ವಿಡಿಯೊ ಮಾಡಲಾಗಿದೆ. ಇದರಲ್ಲಿ ಸಿನಿಮಾ ನಟ ಉಪೇಂದ್ರ ಅವರ ಡೈಲಾಗ್‌ ಶೈಲಿಯಲ್ಲಿ ರವೀಂದ್ರ ಅವರನ್ನು ಅವಹೇಳನ ಮಾಡಲಾಗಿದೆ. 2016ರ ಡಿಸೆಂಬರ್‌ 9ರಂದು ಈ ವಿಡಿಯೊ ಅಪ್‌ಲೋಡ್‌ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಾವಳಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದ್ದರಿಂದ ರವೀಂದ್ರ ಅವರು ಹರಪನಹಳ್ಳಿ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ.

‘ನನ್ನ ವೈಯಕ್ತಿಕ ಛಾಯಾಚಿತ್ರಗಳನ್ನು ಬಳಸಿಕೊಂಡು ಕಿಡಿಗೇಡಿಗಳು ಆಕ್ಷೇಪಾರ್ಹ ರೀತಿಯಲ್ಲಿ ಧ್ವನಿಮುದ್ರಿತ ವಿಡಿಯೊ ತುಣುಕು ತಯಾರಿಸಿ ಯೂಟ್ಯೂಬ್‌ನಲ್ಲಿ ಹಾಕಿದ್ದಾರೆ. ಇದನ್ನು ಬಳಸಿಕೊಂಡು ನನ್ನ ರಾಜಕೀಯ ವಿರೋಧಿಗಳು ನನ್ನ ಹೆಸರಿಗೆ ಕಳಂಕ ತರುತ್ತಿದ್ದಾರೆ. ಹೀಗಾಗಿ ಯೂಟ್ಯೂಬ್‌ನಲ್ಲಿರುವ ವಿಡಿಯೊ ತುಣುಕನ್ನು ಕೂಡಲೇ ತೆಗೆದುಹಾಕಬೇಕು. ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರವೀಂದ್ರ ದೂರಿನಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.