ADVERTISEMENT

ಶಾಸನ ಕಾಣದಂತೆ ಧ್ವಜಸ್ತಂಭ ಸ್ಥಾಪನೆ

ಕೋಲಾರಮ್ಮ ದೇವಾಲಯದಲ್ಲಿ ರಾತ್ರೋರಾತ್ರಿ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2015, 19:30 IST
Last Updated 24 ಫೆಬ್ರುವರಿ 2015, 19:30 IST
ಕೋಲಾರದ ಕೋಲಾರಮ್ಮ ದೇವಾಲಯದ ಆವರಣದ ಗೋಡೆಯ ಮೇಲಿನ ಶಾಸನ ಬರಹ ಮುಚ್ಚುವ ರೀತಿಯಲ್ಲಿ ಬಲಿಪೀಠದ ಹಿಂದೆ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದೆ
ಕೋಲಾರದ ಕೋಲಾರಮ್ಮ ದೇವಾಲಯದ ಆವರಣದ ಗೋಡೆಯ ಮೇಲಿನ ಶಾಸನ ಬರಹ ಮುಚ್ಚುವ ರೀತಿಯಲ್ಲಿ ಬಲಿಪೀಠದ ಹಿಂದೆ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದೆ   

ಕೋಲಾರ: ಕೇಂದ್ರ ಪುರಾತತ್ವ ಇಲಾಖೆ ಸಂರಕ್ಷಿತ ಸ್ಮಾರಕವಾಗಿರುವ ನಗರದ ಕೋಲಾರಮ್ಮ ದೇವಾಲಯದ ಆವ ರಣದ ಗೋಡೆಯ ಮೇಲಿನ ಶಾಸನ ಬರಹ ಕಾಣದ ರೀತಿಯಲ್ಲಿ ಬಲಿಪೀಠದ ಹಿಂದೆ ಧ್ವಜಸ್ತಂಭವನ್ನು ದಿಢೀರನೆ ಸ್ಥಾಪಿಸಲಾಗಿದೆ.

ಒಂದು ದಿನದ ಹಿಂದೆಯಷ್ಟೇ ನಗರದಲ್ಲಿ ಮುಕ್ತಾಯವಾದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೂ ಮುನ್ನ ಫೆ. 22ರಂದು ನಡೆದ ಮೆರವಣಿಗೆಯ ಅಂಗವಾಗಿ ದೇವಾಲಯದ ಪ್ರಮುಖ ಶಾಸನಗಳ ಕನ್ನಡ ರೂಪವನ್ನು ಇಲ್ಲಿ ಪ್ರದರ್ಶಿಸ­ಲಾಗಿತ್ತು. ಸಮ್ಮೇಳನ ಅಧ್ಯಕ್ಷ ಪ್ರೊ.ಕೆ.ಎನ್‌.ಗಣೇಶಯ್ಯ ಅವರು ಸೇರಿದಂತೆ ಹಲವು ಗಣ್ಯರು ದೇವಾಲ­ಯಕ್ಕೆ ಭೇಟಿ ನೀಡಿದ್ದರು. ಆಗ ಕಾಣದ ಧ್ವಜಸ್ತಂಭ, ಸಮ್ಮೇಳನ ನಡೆದ ದಿನವೇ ರಾತ್ರೋರಾತ್ರಿ ಸ್ಥಾಪನೆಗೊಂಡಿದೆ.

ದೇವಾಲಯದ ಗರ್ಭಗುಡಿಯ ಹೊರ ಆವರಣದ ಗೋಡೆಗಳ ಮೇಲೆ ಹಲವು ಶಾಸನಗಳಿವೆ. ಪ್ರವೇಶದ್ವಾರ­ದಲ್ಲಿ ಕಾಣುವ ಬಲಿಪೀಠದ ಹಿಂಭಾಗದ ಗೋಡೆಯ ನೆಲಮಟ್ಟದಿಂದಲೂ ಶಾಸನ ಬರಹವಿದೆ. ಆದರೆ ಬಲಿಪೀಠ ಮತ್ತು ಗೋಡೆಯ ನಡುವೆ ಇದ್ದ ಜಾಗದಲ್ಲೇ ಸುಮಾರು ಮೂರು ಅಡಿಯ ಧ್ವಜಸ್ತಂಭದ ಕಲ್ಲನ್ನು ಸ್ಥಾಪಿಸಲಾಗಿದೆ. ಅದರ ಮೇಲೆ ಮರದ ಸ್ತಂಭವನ್ನು ನಿಲ್ಲಿಸಲಾಗಿದೆ. ಧ್ವಜಸ್ತಂಭವನ್ನು ಸ್ಥಾಪಿಸಿರುವ ಕಾರಣದಿಂದಾಗಿ ಅದು ಇರುವ ಅಷ್ಟೂ ಜಾಗದಲ್ಲಿರುವ ಶಾಸನ ಬರಹವನ್ನು ಓದಲು ಸಾಧ್ಯವಾಗದ ಸನ್ನಿವೇಶ ನಿರ್ಮಾಣವಾಗಿದೆ.

ಗಂಗರ ಕಾಲದಲ್ಲಿ ನಿರ್ಮಾಣ­ಗೊಂಡು ಚೋಳರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಈ ದೇವಾ­ಲಯ ಒಂದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಚರಿತ್ರೆಕಾರರು ಹೇಳುತ್ತಾರೆ. ಈ ದೇವಾಲಯದಲ್ಲಿ ಮೊದಲು ಪ್ರಾಣಿಬಲಿಯನ್ನು ಕೊಡಲಾ­ಗುತ್ತಿತ್ತು. ನಂತರ ಕೋಳಿಬಲಿಯನ್ನು ಮಾತ್ರ ಕೊಡಲಾರಂಭಿಸಲಾಯಿತು. ಅದನ್ನು ತಡೆಯುವ ಸಲುವಾಗಿಯೇ, ಕೋಳಿ ಬಲಿ ಕೊಡುವವರು, ಹಸು­ಗಳನ್ನು ಕೊಂದ ಪಾಪಕ್ಕೆ ಈಡಾಗುತ್ತಾರೆ ಎಂಬ ಬರಹವನ್ನೂ ಇಲ್ಲಿ ಬರೆಸಲಾಗಿದೆ  ಎಂದು ಸಮ್ಮೇಳನ­ದಲ್ಲಿ ಶಾಸನ ಓದುಗ ವಿ. ಎಸ್‌. ಎಸ್‌.ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದರು.

ದೇವಾಲಯಕ್ಕೆ ‘ಪ್ರಜಾವಾಣಿ’ ಮಂಗಳ­ವಾರ ಭೇಟಿ ನೀಡಿದ ಸಮಯದಲ್ಲಿ ಪುರಾತತ್ವ ಇಲಾಖೆ ಸ್ಮಾರಕ ಸಂರಕ್ಷಣೆಗಾರ ಕೃಷ್ಣಮೂರ್ತಿ ಹೊಸದಾಗಿ ಸ್ಥಾಪಿಸಿರುವ ಧ್ವಜಸ್ತಂಭ­ವನ್ನು ಪರಿಶೀಲಿಸುತ್ತಿದ್ದರು.

ಧ್ವಜಸ್ತಂಭ ಸ್ಥಾಪನೆಯ ಕುರಿತು ಪ್ರತಿಕ್ರಿಯಿಸಿದ ದೇವಾಲಯದ ಕಿರಿಯ ಅರ್ಚಕ ಪ್ರದೀಪ್‌ಕುಮಾರ್‌, ಹಳೆಯ ಧ್ವಜಸ್ತಂಭವನ್ನು ಗೆದ್ದಲು ತಿಂದ ಪರಿಣಾಮ ಅದನ್ನು ಇಲಾಖೆಯವರೇ ತೆಗೆದಿದ್ದರು. ಈಗ ಇಲಾಖೆಯಿಂದ ಅನುಮತಿ ಪಡೆದೇ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಧ್ವಜಸ್ತಂಭ  ಸ್ಥಾಪಿಸಲು ಅನು­ಮತಿ ನೀಡಲಾಗಿದೆ. ಆದರೆ, ನಿಯಮಾವಳಿ ಪ್ರಕಾರ ಸ್ಥಾಪಿಸಿಲ್ಲ. ಶಾಸನಗಳನ್ನು ಓದಲು ಅಡ್ಡಿಯಾಗುವಂತೆ ಸ್ಥಾಪಿಸಿರು­ವುದರಿಂದ ಅದನ್ನು ತೆಗೆಸುತ್ತೇವೆ ಎಂದು ಸ್ಮಾರಕ ಸಂರಕ್ಷಣೆಗಾರ ಕೃಷ್ಣಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.