ADVERTISEMENT

ಶಿಕ್ಷಕರಿಗೆ ನೇರ ವೇತನ

ಆರ್ಥಿಕ ಇಲಾಖೆ ಮೂಲಕ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ: ಸಚಿವ ಕಿಮ್ಮನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲಾ– ಕಾಲೇಜು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ವೇತನ ಪಾವತಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಆರ್ಥಿಕ ಇಲಾಖೆ ಮೂಲಕ ನೇರವಾಗಿ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಬಹಿರಂಗಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಬಿಜೆಪಿ ಸದಸ್ಯ ಗಣೇಶ್‌ ಕಾರ್ಣಿಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈಗ ಜಿಲ್ಲಾ ಪಂಚಾಯಿತಿಗಳ ಮೂಲಕ ವೇತನ ಬಟವಾಡೆ ಆಗುತ್ತಿದೆ. ಆದರೆ ಮೂರು ಮೂರು ತಿಂಗಳು ಕಳೆದರೂ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ವೇತನ ಸಿಗುತ್ತಿಲ್ಲ ಎಂಬುದು ನಿಜ. ವೇತನ ವಿಳಂಬದಿಂದ ಅವರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ’ ಎಂದು ಒಪ್ಪಿಕೊಂಡರು.

ಸದ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಆಯವ್ಯಯ ಬೇಡಿಕೆಯ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗುತ್ತಿದೆ. ಈ ಹಂತದಲ್ಲಿ ತಾಂತ್ರಿಕ ತೊಂದರೆಗಳಿಂದ ಅನುದಾನದ ಕೊರತೆಯಾಗುತ್ತಿದೆ. ಜತೆಗೆ ಅಧಿಕಾರಿಗಳು ಕೂಡ ವಿಳಂಬ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

‘ಹೊಸದಾಗಿ ಅನುದಾನ ಪಡೆದಿರುವ ಶಾಲಾ ಸಿಬ್ಬಂದಿಯ ವೇತನ, ಹೆಚ್ಚಿನ ಹುದ್ದೆಗಳು, ಹೊಸ ಕಚೇರಿ, ನೇಮಕಾತಿ, ಗುತ್ತಿಗೆ ಆಧಾರಿತ ಶಿಕ್ಷಕರ ನೇಮಕಾತಿ ಸಕ್ರಮ, ವರ್ಗಾವಣೆಯಿಂದಾಗಿಯೂ ವೇತನ ಪಾವತಿ ವಿಳಂಬವಾಗುತ್ತಿದೆ.  ಇದನ್ನು ತಪ್ಪಿಸುವ ಉದ್ದೇಶದಿಂದಲೇ ಆರ್ಥಿಕ ಇಲಾಖೆ ಮೂಲಕ ನೇರ ವೇತನ ಪಾವತಿ ವ್ಯವಸ್ಥೆ ಜಾರಿ ಮಾಡಲಾಗುವುದು’ ಎಂದು ಸಚಿವರು ಹೇಳಿದರು.

ಹಲವು ವರ್ಷಗಳ ಸಮಸ್ಯೆ: ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಾಲಕೃಷ್ಣ ಭಟ್‌, ‘ಹತ್ತಾರು ಹಂತಗಳನ್ನು ದಾಟಿದ ಮೇಲೆ ವೇತನವು ಶಿಕ್ಷಕರ ಕೈ ಸೇರುತ್ತಿದೆ. ಪ್ರತಿಬಾರಿಯೂ ವೇತನಕ್ಕಾಗಿ 2–3 ತಿಂಗಳು  ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಸುಮಾರು 4 ಲಕ್ಷ ಶಿಕ್ಷಕರಿಗೆ ಅನುಕೂಲವಾಗಲಿದೆ’ ಎಂದರು.

‘ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಯಾವಾಗ ವೇತನ ಬರುತ್ತೆ ಎಂಬುದೇ ಶಿಕ್ಷಕರಿಗೆ ಗೊತ್ತಿರುವುದಿಲ್ಲ. ಇದರಿಂದಾಗಿ ಅವರ ಜೀವನವೇ ಏರುಪೇರಾಗಿದೆ. ಅಧಿಕಾರಿಗಳ ಉದಾಸೀನ ಮನೋಭಾವವೇ ಇದಕ್ಕೆಲ್ಲಾ ಕಾರಣ’ ಎಂದು  ತಿಳಿಸಿದರು.

₹ 200 ಕೋಟಿ ಸೆಸ್‌ ಬಾಕಿ: ‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಗಳು ಕ್ರಮಬದ್ಧವಾಗಿ ಗ್ರಂಥಾಲಯದ ಸೆಸ್‌ ತುಂಬುತ್ತಿಲ್ಲ. ಸುಮಾರು ₹ 200 ಕೋಟಿ ಸೆಸ್‌ ಬರಬೇಕಿದೆ. ಈ ಸಂಬಂಧ  ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಚಿವ ಕಿಮ್ಮನೆ ರತ್ನಾಕರ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.