ADVERTISEMENT

ಶಿರಡಿ–ಮೈಸೂರು ರೈಲಿನಲ್ಲಿ ದರೋಡೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 20:29 IST
Last Updated 27 ಮೇ 2015, 20:29 IST

ಮೈಸೂರು: ‘ಮೊದಲೇ ಊಟ ಮುಗಿಸಿ ದ್ದರಿಂದ ರೈಲು ಹತ್ತಿ ಮಲಗಿದೆವು. ರಾತ್ರಿ ಸುಮಾರು 1.30ಕ್ಕೆ ರೈಲು ನಿಲುಗಡೆ ಯಾಯಿತು. ಕ್ರಾಸಿಂಗ್‌ ಇರಬೇಕು ಎಂದು ಭಾವಿಸಿ ಹಾಗೆ ನಿದ್ದೆಗೆ ಜಾರಿದೆವು. ಮತ್ತೊಂದು ನಿಲ್ದಾಣವನ್ನು ತಲುಪಿದ ಬಳಿಕವೇ ವಿಷಯ ಗೊತ್ತಾಗಿದ್ದು. ನಾವಿರುವ ಬೋಗಿಯು ಸೇರಿದಂತೆ ರೈಲಿನಲ್ಲಿ ದರೋಡೆ ನಡೆದಿತ್ತು’ ಎಂದು ಶಿರಡಿ–ಮೈಸೂರು ರೈಲು ದರೋಡೆ ಕುರಿತು ಮೈಸೂರಿನ ಶ್ರೀಕಾಂತ ಅನುಭವ ಹಂಚಿಕೊಂಡರು.

‘ಶಿರಡಿ– ಮೈಸೂರು ರೈಲು ಮಂಗಳ ವಾರ ರಾತ್ರಿ 11.50ಕ್ಕೆ ಶಿರಡಿಯಿಂದ ಹೊರಟಿತು. ರೈಲು ಪ್ರಯಾಣ ಬೆಳಸಿದ ಬಳಿಕ ಎಲ್ಲ ಲೈಟುಗಳನ್ನು ಆರಿಸಿ ಮಲಗಿದೆವು. ಸುಮಾರು ಒಂದೂವರೆ ಗಂಟೆಯ ಬಳಿಕ ಮಹಾರಾಷ್ಟ್ರದ ಬೈಲಾಪುರ ಎಂಬಲ್ಲಿ ಇದ್ದಕ್ಕಿದ್ದಂತೆ ರೈಲು ನಿಲುಗಡೆಯಾಯಿತು. ಮಹಿಳೆಯೊಬ್ಬರು ಕಿರುಚಿದಂತೆ ಭಾಸವಾಯಿತು. ಅಲ್ಲಲ್ಲಿ ಕೆಲವರು ಓಡಾಡುತ್ತಿದ್ದರು. ನಿದ್ದೆಯ ಮಂಪರಿನಲ್ಲಿದ್ದ ನಮಗೆ ಏನೂ ತಿಳಿಯಲಿಲ್ಲ. ನಮ್ಮ ಭೋಗಿಯಲ್ಲಿಯೂ ಅನೇಕ ಮಹಿಳೆಯರ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿದ್ದರು’ ಎಂದರು.

‘ದರೋಡೆ ನಡೆದ ಸ್ಥಳದಲ್ಲಿ ರೈಲು ಕೆಲ ಹೊತ್ತು ನಿಂತಿತ್ತು. ಬಳಿಕ ಮುಂದಿನ ನಿಲ್ದಾಣಕ್ಕೆ ಬಂದಿತು. ಆತಂಕದಲ್ಲಿದ್ದ ಪ್ರಯಾಣಿಕರು ಬಳಿಕ ಆಕ್ರೋಶ ಹೊರ ಹಾಕಿದರು. ಪ್ರಯಾಣಿಕರು ದರೋಡೆಗೆ ಒಳಗಾದರೂ ರೈಲ್ವೆ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸಲಿಲ್ಲ. ಇದು ಇನ್ನಷ್ಟು ಬೇಸರ ತರಿಸಿತು. ಕರ್ನಾಟಕ ಗಡಿ ಬಂದ ಬಳಿಕ ಪ್ರಯಾಣಿಕರ ಆಕ್ರೋಶ ಇನ್ನೂ ಹೆಚ್ಚಾಯಿತು. ಆದರೆ, ರೈಲ್ವೆ ಪೊಲೀಸರು ಬಂದು ರಕ್ಷಣೆ ಒದಗಿಸಿದರು. ರೈಲಿನಲ್ಲಿ ಹೆಚ್ಚಿನವರು ಆಂಧ್ರಪ್ರದೇಶದವರಿದ್ದರು.

ದರೋಡೆಗೆ ಒಳಗಾದವರಲ್ಲಿಯೂ ಅವರ ಸಂಖ್ಯೆಯೇ ಹೆಚ್ಚಾಗಿತ್ತು. ನಮ್ಮ ಬೋಗಿಯಲ್ಲಿ ಬೆಂಗಳೂರಿನ ನಾಲ್ವರು ಮಹಿಳೆಯರು ಚಿನ್ನಾಭರಣ ಕಳೆದು ಕೊಂಡಿದ್ದರು’ ಎಂದು ವಿವರಿಸಿದರು.

‘ಇದೇ ರೈಲಿನಲ್ಲಿ ಇದ್ದ ಕೆ.ಆರ್‌. ನಗರದ ಸೋಮಶೇಖರ್‌, ಮಂಡಿ ಮೊಹಲ್ಲಾದ ನಿವಾಸಿ ಸುರೇಶ್‌ ಸುರಕ್ಷಿತ ವಾಗಿದ್ದಾರೆ. ಮೈಸೂರು ಪ್ರಯಾಣಿಕರಿಗೆ ತೊಂದರೆಯಾಗಿರುವ ಕುರಿತು ಖಚಿತ ವಾಗಿಲ್ಲ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.