ADVERTISEMENT

ಶೀಘ್ರ ವಿಚಾರಣೆಗೆ ತ್ವರಿತ ನ್ಯಾಯಾಲಯ

ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕಡಿವಾಣ: ಮುಖ್ಯಮಂತ್ರಿ ಸಭೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 20:30 IST
Last Updated 31 ಅಕ್ಟೋಬರ್ 2014, 20:30 IST

ಬೆಂಗಳೂರು: ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ­ಗಳ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಇಂತಹ ಪ್ರಕರಣಗಳ ತನಿಖೆಯನ್ನು ಎಸಿಪಿ ಮತ್ತು ಅವರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳಿಂದ ನಡೆಸಲು ತೀರ್ಮಾನಿಸಿದೆ.

ಶುಕ್ರವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ­ಮಂತ್ರಿ ಸಿದ್ದ­ರಾಮಯ್ಯ, ‘ತ್ವರಿತ ನ್ಯಾಯಾಲಯ ಸ್ಥಾಪನೆ ಸಂಬಂಧ ಹೈಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿಗಳ ಜತೆ ಶೀಘ್ರ ಮಾತುಕತೆ ನಡೆಸಲಾಗುವುದು’ ಎಂದರು.

ಬೆಂಗಳೂರಲ್ಲಿ ಇತ್ತೀಚಿನ ಮೂರೂ ಪ್ರಕರಣ­ಗಳು ಖಾಸಗಿ ಶಾಲೆ­ಗಳಲ್ಲಿ ನಡೆದಿವೆ. ಸಿಬ್ಬಂದಿಯೇ ಈ ಹೀನ ಕೃತ್ಯ ಎಸಗಿದ್ದಾರೆ. ಈ ಘಟನೆಗಳಲ್ಲಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡಿದೆ. ಘಟನೆ ನಡೆದ ತಕ್ಷಣ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ­ದ್ದಾರೆ. ಈಗ ಅವರೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು. ಶಾಲೆಗಳಲ್ಲಿ ನಡೆ­ಯುವ ಅತ್ಯಾಚಾರ ಪ್ರಕರಣ­ಗಳಲ್ಲಿ ಸರ್ಕಾ­ರದ ಜೊತೆಗೆ ಆಡಳಿತ  ಮಂಡಳಿಯ ಜವಾಬ್ದಾರಿ­ಯೂ ಇದೆ. ಇತ್ತೀಚೆಗೆ ನಡೆದ ಘಟನೆ­ಗಳಲ್ಲಿ ಪೊಲೀಸರು ಶಾಲಾ ಮುಖ್ಯಸ್ಥರ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ ಎಂದರು.

ಮಾಧ್ಯಮಗಳಿಗೆ ಮನವಿ: ‘ಮಕ್ಕಳ ಮತ್ತು ಸಮಾ­ಜದ ಹಿತದೃಷ್ಟಿಯಿಂದ ಇಂತಹ ಪ್ರಕರಣ­ಗಳನ್ನು ಹೆಚ್ಚು ಉತ್ಪ್ರೇಕ್ಷೆಯಿಂದ  ವರದಿ ಮಾಡಬೇಡಿ’ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ ಅವರು, ಇಂತಹ ವರದಿಗಳು ವಿಕೃತ ಮನಸ್ಸಿನ­ವರಿಗೆ ಇನ್ನಷ್ಟು ಉತ್ತೇಜನ ನೀಡುತ್ತದೆ ಎಂದರು. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಸೇರಿ­ದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಮುಖ ತೀರ್ಮಾನಗಳು
* ವಿವಿಧ ಇಲಾಖೆಗಳಿಂದ ಜಾಗೃತಿ ಅಭಿಯಾನ
* ಶಾಲೆ ಸುತ್ತ ಪೊಲೀಸ್‌ ಸಿಬ್ಬಂದಿ ಗಸ್ತು
* ಸುರಕ್ಷತಾ ಮಾರ್ಗಸೂಚಿ ಪಾಲನೆ ಕಡ್ಡಾಯ
* ಮಾರ್ಗಸೂಚಿ ಜಾರಿ ಗಡುವು ವಿಸ್ತರಣೆ
*ವಿಕೃತ ಮನಸ್ಸಿನ ಸಿಬ್ಬಂದಿ ಮೇಲೆ ನಿಗಾ
* ಪೊಲೀಸರು ಶಾಲೆಗಳಿಗೆ ಭೇಟಿ ನೀಡಿ ಶಾಲಾಡಳಿತವನ್ನು ಎಚ್ಚರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.