ADVERTISEMENT

ಶ್ರೀಕೃಷ್ಣದೇವರಾಯ ವಿ.ವಿ ಪ್ರಾಧ್ಯಾಪಕರ ನೇಮಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 19:42 IST
Last Updated 13 ಮಾರ್ಚ್ 2017, 19:42 IST
ಶ್ರೀಕೃಷ್ಣದೇವರಾಯ ವಿ.ವಿ   ಪ್ರಾಧ್ಯಾಪಕರ ನೇಮಕ ಸ್ಥಗಿತ
ಶ್ರೀಕೃಷ್ಣದೇವರಾಯ ವಿ.ವಿ ಪ್ರಾಧ್ಯಾಪಕರ ನೇಮಕ ಸ್ಥಗಿತ   

ಬಳ್ಳಾರಿ: ಯುಜಿಸಿಯ 12ಬಿ ಮಾನ್ಯತೆಯನ್ನು ಇನ್ನೂ ಪಡೆಯಲಾಗದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇದೇ 3 ರಿಂದ ನಡೆಯುತ್ತಿದ್ದ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ಮೌಖಿಕ ಸೂಚನೆ ಮೇರೆಗೆ, ಅಭ್ಯರ್ಥಿಗಳ ಸಂದರ್ಶನವನ್ನು ರದ್ದುಗೊಳಿಸಲಾಗಿದೆ. ಇಲಾಖೆಯು ಸಂದರ್ಶನ ಪ್ರಕ್ರಿಯೆ ಬದಲಿಗೆ ಆನ್‌ಲೈನ್‌ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲು ಉದ್ದೇಶಿಸಿರುವುದರಿಂದ, ನೇಮಕಾತಿ ಪ್ರಕ್ರಿಯೆಯ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.

ಆದರೆ, ಯು.ಜಿ.ಸಿ ನಿಯಮಾವಳಿ ಪ್ರಕಾರ ಒಮ್ಮೆ ಆರಂಭವಾದ ನೇಮಕಾತಿ ಸಂದರ್ಶನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತಿಲ್ಲ. ಹೀಗಾಗಿ, ಈಗಾಗಲೇ ಸಂದರ್ಶನ ಎದುರಿಸಿರುವ ಅಭ್ಯರ್ಥಿಗಳನ್ನು ವಿಶ್ವವಿದ್ಯಾಲಯ ಹೇಗೆಪರಿಗಣಿಸುತ್ತದೆ? ಸಂದರ್ಶನ ಎದುರಿಸಬೇಕಾಗಿದ್ದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗಳು ಮೂಡಿವೆ ಎಂದು ಮೂಲಗಳು ಹೇಳಿವೆ.

ADVERTISEMENT

ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾಗಿ ಕುಲಪತಿ ಪ್ರೊ.ಎಂ.ಎಸ್‌. ಸುಭಾಷ್‌  ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನೇಮಕಾತಿ ಕೇಂದ್ರೀಕರಣ ಉದ್ದೇಶ’
ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಸಂದರ್ಭದಲ್ಲಿ ಅವ್ಯವಹಾರ ತಡೆಯಲು ಉನ್ನತ ಶಿಕ್ಷಣ ಇಲಾಖೆಯು ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರೀಕರಿಸಲು ನಿರ್ಧರಿಸಿರುವುದರಿಂದ, ನೇಮಕಾತಿ ಪ್ರಕ್ರಿಯೆಗೆ ತಡೆ ಒಡ್ಡಿದೆ ಎಂದು ಹೇಳಲಾಗಿದೆ. ಆದರೆ ಇಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಲೋಪವಾಗಿರುವುದರಿಂದ ತಡೆ ಒಡ್ಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ಆದರೆ ಕೇಂದ್ರೀಕೃತ ನೇಮಕಾತಿ ವ್ಯವಸ್ಥೆ ಜಾರಿಗೆ ಬಂದರೆ ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಭಂಗ ಬರುವ ಸಾಧ್ಯತೆ ಇರುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶೈಕ್ಷಣಿಕ ಪರಿಷತ್ತಿನ ಸದಸ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.