ADVERTISEMENT

ಶ್ರೀರಾಮುಲು ವಿರುದ್ಧ ಕರುಣಾಕರರೆಡ್ಡಿ ದಾವೆ

ಸುಷ್ಮಾ ಸ್ವರಾಜ್‌ ಕಾಲೊನಿ ನಿವೇಶನ ಮಾಲೀಕತ್ವ ವಿವಾದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಶ್ರೀರಾಮುಲು ವಿರುದ್ಧ ಕರುಣಾಕರರೆಡ್ಡಿ ದಾವೆ
ಶ್ರೀರಾಮುಲು ವಿರುದ್ಧ ಕರುಣಾಕರರೆಡ್ಡಿ ದಾವೆ   

ಬಳ್ಳಾರಿ : ನಗರದ ಸುಷ್ಮಾ ಸ್ವರಾಜ್‌ ಕಾಲೊನಿ ನಿವೇಶನಗಳ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಗೈರು ಹಾಜರಾಗಿರುವ ಸಂಸದ ಬಿ. ಶ್ರೀರಾಮುಲು ಸೇರಿದಂತೆ ಮೂವರಿಗೆ ಇಲ್ಲಿನ ಚೀಫ್‌ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನ್ಯಾಯಾಧೀಶರು ಸಮನ್ಸ್‌ ಜಾರಿ ಮಾಡಿದ್ದಾರೆ.

ನಿವೇಶನ ಮಾಲೀಕತ್ವ ವಿವಾದದ ಸಂಬಂಧ ಮಾಜಿ ಸಚಿವ ಕೆ. ಕರುಣಾಕರ ರೆಡ್ಡಿ ಅವರು ಸಂಸದ ಬಿ. ಶ್ರೀರಾಮುಲು, ಕಾರ್ಕಲತೋಟ ಪ್ರದೇಶದ ಕೆ.ತಿಮ್ಮರಾಜು ಮತ್ತು ತಾಲ್ಲೂಕಿನ ಭೈರದೇವನಹಳ್ಳಿ ಗ್ರಾಮದ ಡಿ. ರಾಘವೇಂದ್ರ ವಿರುದ್ಧ ಬೆಂಗಳೂರಿನ ವಕೀಲರ ಮೂಲಕ ಸಿ.ಜೆ.ಎಂ ನ್ಯಾಯಾಲಯದಲ್ಲಿ ಒಟ್ಟು ಹತ್ತು ದಾವೆ ಹೂಡಿದ್ದಾರೆ. ಇದೇ 6ರಂದು ನಡೆದ ವಿಚಾರಣೆಗೆ ಗೈರು ಹಾಜರಾದ ಕಾರಣಕ್ಕೆ ಸಮನ್ಸ್‌ ಜಾರಿ ಮಾಡಿರುವ ನ್ಯಾಯಾಧೀಶರು, ಮಾರ್ಚ್‌ 15ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ. ಒ.ಎಸ್‌/24/2017ರಿಂದ 33ರ ವರೆಗೆ ‘ಆಸ್ತಿ ಮಾಲೀಕತ್ವ ಘೋಷಣೆ’ಯ ಒಟ್ಟು ಹತ್ತು ದಾವೆಗಳನ್ನು ಕರುಣಾಕರ ರೆಡ್ಡಿ ಹೂಡಿದ್ದಾರೆ.

ಶ್ರೀರಾಮುಲು, ರೆಡ್ಡಿಯಿಂದ ಅಂತರ: ಬಿ. ಶ್ರೀರಾಮುಲು, ಗಣಿ ಉದ್ಯಮಿ ಜಿ. ಜನಾರ್ದನರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡಿರುವ ಕರುಣಾಕರ ರೆಡ್ಡಿ ಅವರ ಈ ನಡೆ, ಜಿಲ್ಲೆಯಲ್ಲಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಶ್ರೀರಾಮುಲು ಬಿಜೆಪಿ ತೊರೆದು ಬಿ.ಎಸ್‌.ಆರ್‌. ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದಾಗ ಅವರ ಜತೆ ಕರುಣಾಕರ ರೆಡ್ಡಿ ಗುರುತಿಸಿಕೊಂಡಿರಲಿಲ್ಲ. ಜತೆಗೆ ತಮ್ಮ ಸಹೋದರರಾದ ಜಿ. ಜನಾರ್ದನ ರೆಡ್ಡಿ ಮತ್ತು ಸೋಮಶೇಖರ್‌ ರೆಡ್ಡಿ ಅವರಿಂದಲೂ ದೂರ ಉಳಿದಿದ್ದರು. ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜನಾರ್ದನ ರೆಡ್ಡಿ  ಮಗಳ ಮದುವೆ ಸಮಾರಂಭದಲ್ಲೂ ಅವರು ಪಾಲ್ಗೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.