ADVERTISEMENT

ಶ್ರೇಷ್ಠ, ಕನಿಷ್ಠ ಭಾವಕ್ಕಿಂತ ಜೀವಭಾವ ದೊಡ್ಡದು

ಇಹ, ಪರ ನಂಟು ಬಿಚ್ಚಿಟ್ಟ ಸಾಹಿತ್ಯ ಮತ್ತು ತತ್ವಜ್ಞಾನ ಗೋಷ್ಠಿ

ಮಂಜುನಾಥ ಗೌಡರ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
‘ಸಾಹಿತ್ಯ ಮತ್ತು ತತ್ವಜ್ಞಾನ’ ಗೋಷ್ಠಿಯಲ್ಲಿ ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ  ಮಾತನಾಡಿದರು. (ಎಡದಿಂದ) ಪ್ರೊ.ಸುಂದರ ಸಾರುಕ್ಕೈ, ಲೇಖಕ ಲಕ್ಷ್ಮೀಶ ತೋಳ್ಪಾಡಿ, ಮಲ್ಲೇಪುರಂ ಜಿ.ವೆಂಕಟೇಶ್‌ ಇದ್ದಾರೆ ಚಿತ್ರ: ಬಿ.ಎಂ.ಕೇದಾರನಾಥ
‘ಸಾಹಿತ್ಯ ಮತ್ತು ತತ್ವಜ್ಞಾನ’ ಗೋಷ್ಠಿಯಲ್ಲಿ ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಮಾತನಾಡಿದರು. (ಎಡದಿಂದ) ಪ್ರೊ.ಸುಂದರ ಸಾರುಕ್ಕೈ, ಲೇಖಕ ಲಕ್ಷ್ಮೀಶ ತೋಳ್ಪಾಡಿ, ಮಲ್ಲೇಪುರಂ ಜಿ.ವೆಂಕಟೇಶ್‌ ಇದ್ದಾರೆ ಚಿತ್ರ: ಬಿ.ಎಂ.ಕೇದಾರನಾಥ   
ಧಾರವಾಡ: ಶ್ರೇಷ್ಠ ಮತ್ತು ಕನಿಷ್ಠ ಎಂಬ ಭಾವ ಬಿಟ್ಟು, ಜೀವವನ್ನು ಜೀವವಾಗಿ ಅಷ್ಟೇ ನೋಡಬೇಕು ಎಂದು ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಭಾನುವಾರ ಇಲ್ಲಿ ಪ್ರತಿಪಾದಿಸಿದರು. 
 
ಧಾರವಾಡ ಸಾಹಿತ್ಯ ಸಂಭ್ರಮದ ‘ಸಾಹಿತ್ಯ ಮತ್ತು ತತ್ವಜ್ಞಾನ’ ಗೋಷ್ಠಿಯಲ್ಲಿ ತಮ್ಮ ಈ ಮಾತನ್ನು ಪುಷ್ಟಿಕರಿಸಲು ಅವರು, ಅಕ್ಕಮಹಾದೇವಿ ಮತ್ತು ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ ವಚನಗಳನ್ನು ಉಲ್ಲೇಖಿಸಿದರು.
 
ಲಿಂಗ ಸಮಾನತೆ ಹಾಗೂ ಸಾಹಿತ್ಯ ಕುರಿತಾದ ನಿಲುವಿಗೆ ವೀಣಾ, ‘ಹೆಂಡಿರು ತೊಳಸಿಕ್ಕುವರು; ಎನ್ನ ಗಂಡಂಗೆ ತೊಳಸುವುದಿಲ್ಲ’ ಎಂಬ ವಚನದ  ಸಾಲುಗಳನ್ನು ಸಭಿಕರ ಮುಂದಿಟ್ಟರು.
 
ಲೇಖಕ ಲಕ್ಷ್ಮೀಶ ತೋಳ್ಪಾಡಿ, ‘ಅನುಭವ ಹೆಚ್ಚಾದಂತೆ, ಆಳವಾದಂತೆ ಮಾತು ಕಡಿಮೆಯಾಗುತ್ತದೆ. ಇನ್ನು ಸಹಜವಾಗಿ ದಕ್ಕುವ ಅನುಭವ ಬರವಣಿಗೆಯನ್ನು ಗಟ್ಟಿಗೊಳಿಸುತ್ತದೆ. ಇದನ್ನೇ ಕಾರಂತರು ಹೇಳುತ್ತಿದ್ದರು. ಅದನ್ನು ಮೀರಿ ತೀವ್ರವಾದಾಗ ಶರಣರು ಹೇಳಿದಂತೆ ಮಾತು ಜ್ಯೋತಿರ್ಲಿಂಗ ಆಗುತ್ತದೆ’ ಎಂದರು.
 
ತನ್ನನ್ನು ತಾನು ಮೀರಿ ನಡೆಯಲು ತತ್ವಜ್ಞಾನ ಹಾಗೂ ಸಾಹಿತ್ಯ ಎರಡು ಬೇಕು. ಅತ್ಯುತ್ತಮ ಕಾವ್ಯ ಹಾಗೂ ಅತ್ಯುತ್ತಮ ತತ್ವಜ್ಞಾನ ಎರಡು ಅವಳಿಗಳಾಗಿವೆ. ಇದನ್ನೇ ಮತ್ತಷ್ಟು ವಿಸ್ತರಿಸಿ, ಪಂಪನ ಘೋಷಣೆಯಾದ ‘ಬೆಳಗುವೆನಿಲ್ಲಿ ಲೌಕಿಕಮನ್, ಅಲ್ಲಿ ಜಿನಾಗಮಮಂ’ ಉಲ್ಲೇಖ ನೀಡಿದರು.
 
ಪ್ರೊ. ಸುಂದರ ಸಾರುಕ್ಕೈ ಗೋಷ್ಠಿಯನ್ನು ಗಣಿತ, ಇಂಗ್ಲಿಷ್‌ ಸಾಹಿತ್ಯ, ಭೌತವಿಜ್ಞಾನ ವಿಷಯದ ಬಳಿಗೆ ಕರೆದೊಯ್ದರು. ಜ್ಞಾನ ಪಡೆಯಲು ಹಾಗೂ ಸಾಹಿತ್ಯವನ್ನು ಆಳವಾಗಿ ಅರ್ಥೈಸಿಕೊಳ್ಳಲು ತತ್ವಜ್ಞಾನ ಬೇಕು. ವಿಜ್ಞಾನದ ಮೂಲಕ ಇನ್ನೊಂದು ದೃಷ್ಟಿಯಲ್ಲಿ ನೋಡಬೇಕು ಎಂದು ಪ್ರತಿಪಾದಿಸಿದರು. ಆಗ ವೀಣಾ ಅವರು, ಎಡಪಂಥ ಹಿನ್ನೆಲೆ ಇಟ್ಟು ಬರೆದದ್ದು ಹೇಗೆ ಎಡಪಂಥೀಯರಿಗೆ ಸುಲಭವಾಗಿ ಅರ್ಥವಾಗುತ್ತದೆಯೋ ಹಾಗೇ ತತ್ವಜ್ಞಾನ ಗೊತ್ತಿದ್ದವರಿಗೆ ಯೋಗ ಮಾರ್ಗ ಹಾಗೂ ತತ್ವಜ್ಞಾನದ ಹಿನ್ನೆಲೆ ಇರುವ ಸಾಹಿತ್ಯ ಸುಲಭವಾಗಿ ಅರಿವಾಗುತ್ತದೆ ಎಂದರು. ಕೊನೆಯಲ್ಲಿ ತೋಳ್ಪಾಡಿ, ‘ಸತ್ಯ ಅನುಭವಕ್ಕೆ ಬರಬೇಕಾದರೆ ಅಹಂಕಾರ ಕಳೆದುಕೊಳ್ಳಬೇಕು’ ಎಂದು ಒತ್ತಿ ಹೇಳಿದರು. 
 
ಗೋಷ್ಠಿ ನಿರ್ದೇಶಕ 
ಡಾ.ಮಲ್ಲೇಪುರಂ ಜಿ.ವೆಂಕಟೇಶ್‌ ಮಾತನಾಡಿ, ‘ಯೋಗಿ ಮತ್ತು ಜ್ಞಾನಿಗಳು ಇನ್ನೊಬ್ಬರನ್ನು ವಂಚಿಸುವುದಿಲ್ಲ. ನುಡಿದಂತೆ, ನಡೆಯುವಂತೆ ತಿಳಿಸುವುದೇ ತತ್ವಶಾಸ್ತ್ರ’ ಎಂದರು.
 
**
‘ಐ ಲವ್ ಯೂ ಚಂಪಾ’
ಪ್ರಶ್ನೋತ್ತರ ಸಂದರ್ಭದಲ್ಲಿ ಚಂಪಾ, ‘ನನಗೆ ಏಕೋ ಗೋಷ್ಠಿ ಪಿಸುಗುಟ್ಟುವ ಗುಂಪಿನಂತೆ ಭಾಸವಾಗುತ್ತಿದೆ. ನೀವೆಲ್ಲರೂ ನಿಮ್ಮದೇ ಆದ ಲೋಕದಲ್ಲಿ 
ಇದ್ದೀರಿ, ಹೊರಬನ್ನಿ ಎಂದರು. ಅದಕ್ಕೆ ತೋಳ್ಪಾಡಿ, ‘ನಾವು ನಮ್ಮ ಲೋಕದಲ್ಲಿದ್ದೇವೆ. ನೀವು ನಿಮ್ಮ ಲೋಕದಲ್ಲಿದ್ದಿರಿ’ ನಿಮ್ಮ ಹಂತಕ್ಕೆ ಮತ್ತು ನಿಮ್ಮ ಲೋಕಕ್ಕೆ ಬರಲು ನನಗೆ ಆಗುವುದಿಲ್ಲ.  ‘ಬಟ್‌, ಐ ಲವ್ ಯೂ’ ಎಂದಾಗ ನಗು ಮೂಡಿತು. ಪ್ರತಿಯಾಗಿ ಚಂಪಾ, ‘ಐ ಲವ್‌ ಯೂ ಟೂ’ ಎಂದರು.
 
**
ನಗಿಸಿದ ಸುಳ್ಳು ಪದ
 ಮಿಥ್ಯ ಮತ್ತು ಸುಳ್ಳು ಪದಗಳ ಕುರಿತು ಮಾತನಾಡಿದ ಲಕ್ಷ್ಮೀಶ ತೋಳ್ಪಾಡಿ, ಸಂಸ್ಕೃತದ ಮಿಥ್ಯಕ್ಕಿಂತ ಕನ್ನಡದ ಸುಳ್ಳು ಪದವೇ ಚೆನ್ನಾಗಿದೆ. ಸುಳ್ಳು ಎಂದರೆ ನಿಜವಾದ ಅರ್ಥ ಸುಳಿವು ಎಂಬುದಾಗಿದೆ. ಹೀಗಾಗಿ ಸಾಹಿತ್ಯ ಹೇಳುವುದೆಲ್ಲವೂ ಸುಳ್ಳು ಎಂದು ಹೇಳಿ ಗೋಷ್ಠಿಯಲ್ಲಿ ನಗೆ ತುಂಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.