ADVERTISEMENT

ಸಂಪುಟ ವಿಸ್ತರಣೆಗೆ ಕಸರತ್ತು: ಜಾತಿ ಲಾಬಿ ಜೋರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2017, 19:30 IST
Last Updated 8 ಆಗಸ್ಟ್ 2017, 19:30 IST

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ 16ರ ಬಳಿಕ ದೆಹಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

ಎಚ್‌.ಎಸ್‌. ಮಹದೇವ ಪ್ರಸಾದ್‌ ನಿಧನ ಹಾಗೂ ಎಚ್‌.ವೈ. ಮೇಟಿ ಮತ್ತು ಜಿ. ಪರಮೇಶ್ವರ ರಾಜೀನಾಮೆನಿಂದ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇವೆ. ಈ ಸ್ಥಾನಗಳಿಗೆ ತೆರೆಮರೆಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಸಮೇತ ವರಿಷ್ಠರ ಜೊತೆ ಮುಖ್ಯಮಂತ್ರಿ ಚರ್ಚೆನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸಂಪುಟ ವಿಸ್ತರಣೆ ಖಚಿತಗೊಂಡ ಬೆನ್ನಲ್ಲೆ ಸಚಿವ ಸ್ಥಾನ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ. ಖಾಲಿಯಾಗಿರುವ ಸ್ಥಾನಗಳನ್ನು ಅದೇ ಜಾತಿಯವರಿಗೆ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಹೀಗಾಗಿ ಆ ಜಾತಿ ಶಾಸಕರು ಒತ್ತಡ ಹೇರಲು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಕುರುಬ ಸಮುದಾಯದಿಂದ ಎಂ.ಟಿ.ಬಿ. ನಾಗರಾಜ್‌, ಸಿ.ಎಸ್‌. ಶಿವಳ್ಳಿ, ಡಿ.ಜಿ. ಗೋವಿಂದಪ್ಪ, ಎಚ್‌.ಎಂ. ರೇವಣ್ಣ, ಬಸವರಾಜ ಶಿವಣ್ಣವರ ಹೆಸರು ಕೇಳಿ ಬರುತ್ತಿದೆ. ಲಿಂಗಾಯತ ಸಮುದಾಯದಿಂದ ರಾಜಶೇಖರ ಪಾಟೀಲ ಹುಮ್ನಾಬಾದ್‌, ಅಪ್ಪಾಜಿ ನಾಡಗೌಡ, ಡಿ.ಎಂ. ಇನಾಮದಾರ್‌. ಅಶೋಕ ಪಟ್ಟಣ, ಡಾ.ಎ.ಬಿ. ಮಾಲಕರೆಡ್ಡಿ, ಷಡಕ್ದಷರಿ, ದಲಿತ ಸಮುದಾಯದಿಂದ ಪಿ.ಎಂ.ನರೇಂದ್ರ ಸ್ವಾಮಿ, ಆರ್‌.ಬಿ. ತಿಮ್ಮಾಪುರ್‌, ಮೋಟಮ್ಮ, ಧರ್ಮಸೇನ ಹೆಸರು ಪ್ರಮುಖವಾಗಿದೆ.

’ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟು ಜಾತಿ ಲೆಕ್ಕಾಚಾರ ಮತ್ತು ಪ್ರಾತಿನಿಧ್ಯವನ್ನು ಸರಿದೂಗಿಸಿ, ಸಚಿವ ಸ್ಥಾನ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಯಸಿದ್ದಾರೆ. ಹೀಗಾಗಿ ಈ ಪೈಕಿ ಯಾರೂ ಸಚಿವ ಸ್ಥಾನ ಪಡೆಯಬಹುದು ಎಂಬ ಕುತೂಹಲ ತಲೆದೋರಿದೆ ಎಂದೂ ಮೂಲಗಳು ತಿಳಿಸಿವೆ

ರಾಹುಲ್‌ 16ರಂದು ನಗರಕ್ಕೆ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಇದೇ 16ರಂದು ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಾಗರಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳಲ್ಲಿ ಆರಂಭಗೊಳ್ಳಲಿರುವ ‘ಇಂದಿರಾ ಕ್ಯಾಂಟೀನ್‌’ನ್ನು ಅಂದು ರಾಹುಲ್‌ ಗಾಂಧಿ ಉದ್ಘಾಟಿಸುವರು.ಇದೇ 12ರಂದು ರಾಯಚೂರಿನಲ್ಲಿ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದಲ್ಲೂ ಅವರು ಭಾಗವಹಿಸುವರು ಎಂದೂ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.