ADVERTISEMENT

ಸಂಪುಟ ವಿಸ್ತರಣೆ ಸನ್ನಿಹಿತ

ಪರಮೇಶ್ವರ್‌ಗೆ ಡಿಸಿಎಂ ಪಟ್ಟ ಇಲ್ಲ?

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮ­ಯ್ಯ­­ನವರ ಸಂಪುಟ ವಿಸ್ತರಣೆಗೆ ದಿನ­-ಗಣನೆ ಆರಂಭ­ವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಸಚಿವರಾ­ಗು­­­ವುದು ಬಹು­ತೇಕ ಖಚಿತ­ವಾಗಿದೆ. ಆದರೆ,  ಅವರಿಗೆ ಉಪ ಮುಖ್ಯ­ಮಂತ್ರಿ ಸ್ಥಾನ ದೊರೆಯುವ ಸಾಧ್ಯತೆ ಕ್ಷೀಣವಾಗಿದೆ.

ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನಗಳಿಗೆ ಲಾಬಿ ಮಾಡಲು ಕಾಂಗ್ರೆಸ್‌ ಶಾಸಕರ ದೊಡ್ಡ ದಂಡು ಸೋಮವಾರ ರಾತ್ರಿ ರಾಜ­ಧಾನಿಗೆ ಧಾವಿಸಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ  ನಾಯ­ಕರ ಜತೆ ಸಂಪುಟ ವಿಸ್ತರಣೆ ಕುರಿತು ಸಮಾ­ಲೋಚಿ­ಸಲು ಸಿದ್ದರಾ­ಮಯ್ಯ ಮತ್ತು ಪರ­ಮೇಶ್ವರ್ ಬುಧ­ವಾರ ಬೆಳಿಗ್ಗೆ ದೆಹಲಿಗೆ ಬರಲಿ­ದ್ದಾರೆ. ಸೋನಿಯಾ ಅವರ ಅನು­ಮತಿ ದೊರೆತ ಬಳಿಕ ಯಾವುದೇ ಕ್ಷಣ­ದಲ್ಲಿ ಸಂಪುಟ ವಿಸ್ತರಣೆ ಆಗುವ ಸಂಭವವಿದೆ.

ಅನಿವಾರ್ಯತೆ ಇಲ್ಲ: ‘ಸಚಿವರಾಗಲು ತುದಿ­ಗಾಲಲ್ಲಿ ನಿಂತಿ­ರುವ ಪರಮೇಶ್ವರ್‌  ಸಂಪುಟ ಸೇರ್ಪಡೆಗೆ ಸೋನಿಯಾ ಒಪ್ಪಿಗೆ ಕೊಡು­ವುದು ಹೆಚ್ಚುಕಡಿಮೆ ಖಚಿತ­ವಾ­ಗಿದೆ. ಅವರಿಗೆ ‘ನಂಬರ್‌ ಟು’ ಸ್ಥಾನ ಸಿಗು­ವು­ದಿಲ್ಲ. ಕಾಂಗ್ರೆಸ್‌ ಅಧಿಕಾರ­ದ­ಲ್ಲಿರುವ ರಾಜ್ಯ­ಗಳಲ್ಲಿ ಪರ್ಯಾಯ ಅಧಿ­ಕಾರ ಕೇಂದ್ರ ಸ್ಥಾಪಿ­ಸುವ ಪರಂಪರೆ ಪಕ್ಷದ­ಲ್ಲಿಲ್ಲ. ಅನಿ­ವಾರ್ಯ ರಾಜಕೀಯ ಸಂದ­ರ್ಭ­ಗ­ಳಲ್ಲಿ ಕೆಲವೆಡೆ ಉಪ ಮುಖ್ಯ­ಮಂತ್ರಿ ಸ್ಥಾನ ಸೃಷ್ಟಿಸಲಾಗಿತ್ತು. ಕರ್ನಾಟ­ಕ­ದಲ್ಲಿ ಅಂಥ ಅನಿವಾರ್ಯ ಪರಿಸ್ಥಿತಿ ಇಲ್ಲ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಾಜ್ಯದಲ್ಲಿ ಪರ್ಯಾಯ ಅಧಿಕಾರ ಕೇಂದ್ರ ಸೃಷ್ಟಿಸುವುದರಿಂದ ಮುಖ್ಯ­ಮಂತ್ರಿ­ಗಳ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿ­ದಂತಾಗುತ್ತದೆ. ಇದರಿಂದ ಉಪ ಮುಖ್ಯ­ಮಂತ್ರಿ ಸ್ಥಾನ ಸೃಷ್ಟಿಸುವುದು ಬೇಡ ಎಂದು ರಾಜ್ಯದ ಕೆಲವು ಹಿರಿಯ ನಾಯ­ಕರು ಹೈಕಮಾಂಡ್‌ ಮೇಲೆ ಒತ್ತಡ ಹೇರಿ­ದ್ದಾರೆಂದು ಮೂಲಗಳು ವಿವರಿಸಿವೆ.

ಸಿದ್ದರಾಮಯ್ಯ ಜನವರಿ 1ರಂದು ತಮ್ಮ ಸಂಪುಟ ವಿಸ್ತರಿಸಿದ್ದರು. ಆಗ ಡಿ.ಕೆ. ಶಿವಕುಮಾರ್‌ ಮತ್ತು ರೋಷನ್‌ ಬೇಗ್‌ ಅವರನ್ನು ಸೇರಿಸಿಕೊಂಡಿದ್ದರು.   ಇನ್ನೂ ನಾಲ್ಕು ಸ್ಥಾನಗಳು ಖಾಲಿ ಉಳಿದಿವೆ. ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದ ಪರಮೇಶ್ವರ್‌ ಅವರು ಕೊರಟಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಸೋತ ಬಳಿಕ ಉಪ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಈಚಿನ ಉಪ ಚುನಾವಣೆಯಲ್ಲಿ ಬಳ್ಳಾರಿ ಸೇರಿದಂತೆ ಎರಡು ಕ್ಷೇತ್ರಗಳನ್ನು ಗೆದ್ದಕೊಂಡ ಬಳಿಕ ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯನವರ  ಕೈ ಮೇಲಾಗಿದೆ. ಹೈಕಮಾಂಡ್‌ ಬಹುತೇಕ ಮುಖ್ಯಮಂತ್ರಿ ಶಿಫಾರಸು ಮಾಡುವ ಹೆಸರು­ಗಳನ್ನೇ ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ವಿವರಿಸಿವೆ. ಸಚಿವರಾಗಲು 40ಕ್ಕೂ ಅಧಿಕ ಶಾಸಕರು ಪೈಪೋಟಿಗೆ ಇಳಿದಿರುವುದರಿಂದ ಮುಖ್ಯ­ಮಂತ್ರಿ­ಗಳು ಇಕ್ಕಟ್ಟಿಗೆ ಸಿಕ್ಕಿದ್ದಾರೆ.

ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ: ರಾಜ್ಯ ಸಚಿವ ಸಂಪುಟ­ದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲವೆಂದು ಅಸಮಾಧಾನ­ಗೊಂಡಿ­ರುವ ಪ್ರಬಲ ವೀರಶೈವ ಸಮಾಜಕ್ಕೆ ಮತ್ತೊಂದು ಪ್ರಾತಿನಿಧ್ಯ ದೊರೆಯುವ ಅವಕಾಶ ಇದೆ. ಹಿಂದುಳಿದ ಕುರುಬ ಜಾತಿಗೂ ಇನ್ನೊಂದು ಸ್ಥಾನ ದೊರೆಯಲಿದೆ.

ಪರಮೇಶ್ವರ್‌ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಉಳಿದ ಒಂದು ಸ್ಥಾನ ಯಾವ ಜಾತಿಯ  ಪಾಲಾಗಲಿದೆ ಎನ್ನುವುದು ನಿಗೂಢವಾಗಿದೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎ.ಬಿ. ಮಾಲಕರೆಡ್ಡಿ, ಕೆ.ಬಿ ಕೋಳಿವಾಡ, ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ವಿನಯ್‌ ಕುಲಕರ್ಣಿ, ನಾಗರಾಜ ಛಬ್ಬಿ, ಎ. ಮಂಜು, ಮನೋಹರ ತಹಸೀಲ್ದಾರ್‌, ಅಬ್ದುಲ್‌ ಜಬ್ಬಾರ್‌, ಎಚ್‌.ಆರ್‌. ಅಲಗೂರ್‌, ಪ್ರಕಾಶ್‌ ರಾಥೋಡ್‌, ವೀರಣ್ಣ ಮತ್ತಿಕಟ್ಟಿ, ಶಿವಮೂರ್ತಿ ನಾಯಕ್‌, ಆರ್.ಬಿ. ವೆಂಕಟೇಶ್‌ ಸೇರಿದಂತೆ ಹಲವು ಶಾಸಕರು ದೆಹಲಿಗೆ ಬಂದಿದ್ದಾರೆ. ಮಂಗಳವಾರ ಇನ್ನೂ ಅನೇಕ ಶಾಸಕರು ಬರಲಿದ್ದಾರೆ. ಶಾಸಕರ ಪರ ಲಾಬಿ ಮಾಡಲು ಕೆಲ ಸಚಿವರೂ ಬರುತ್ತಿ­ದ್ದಾರೆ.

ವಿಧಾನಸಭೆ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರ ಹೆಸರೂ ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದೆ. ಕಾಂಗ್ರೆಸ್‌ ಪಕ್ಷದೊಳಗೆ ಮಹತ್ವದ ಜವಾಬ್ದಾರಿ ಹೊತ್ತಿರುವ ರಾಜ್ಯದ ಹಿರಿಯ ನಾಯಕರೊಬ್ಬರು ಮುಖ್ಯಮಂತ್ರಿ ಬಳಿ ತಿಮ್ಮಪ್ಪ ಅವರ ಪರವಾಗಿ ವಕಾಲತ್ತು ವಹಿಸಿದ್ದಾರೆ.
ಈಚೆಗೆ ತಮ್ಮದೇ ಸರ್ಕಾರವನ್ನು ಟೀಕಿಸಿ ಸ್ಪೀಕರ್‌ ಮುಜುಗರ ಸೃಷ್ಟಿಸಿದ್ದಾರೆ. ಅಲ್ಲದೆ, ಅವರಿಗೆ ವಯಸ್ಸೂ ಆಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಮುಖ್ಯಮಂತ್ರಿ ಸಂಪುಟ ವಿಸ್ತರಣೆ ಕುರಿತು ಅನೌಪಚಾರಿಕವಾಗಿ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ. ಸಚಿವ ಸ್ಥಾನ ಸಿಗದವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನಪಡಿಸುವ ಉದ್ದೇಶವೂ ಹೈಕಮಾಂಡ್‌ಗೆ ಇದ್ದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT