ADVERTISEMENT

ಸಚಿವ ಆಂಜನೇಯ ಮೇಲೆ ಮುಗಿಬಿದ್ದ ಕಾಂಗ್ರೆಸ್‌ ಶಾಸಕರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 19:30 IST
Last Updated 15 ನವೆಂಬರ್ 2017, 19:30 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಶಾಸಕಾಂಗ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರಿಷತ್ತಿನ ಮುಖ್ಯಸಚೇತಕ ಐವನ್‌ ಡಿಸೋಜ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್‌ ಪಟ್ಟಣ ಸ್ವಾಗತಿಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಶಾಸಕಾಂಗ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರಿಷತ್ತಿನ ಮುಖ್ಯಸಚೇತಕ ಐವನ್‌ ಡಿಸೋಜ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್‌ ಪಟ್ಟಣ ಸ್ವಾಗತಿಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌   

ಬೆಳಗಾವಿ: ‘ಸಮಾಜ ಕಲ್ಯಾಣ ಸಚಿವಾಲಯದಲ್ಲಿ ದಲ್ಲಾಳಿಗಳದ್ದೇ ದರ್ಬಾರು’ ಎಂದು ಕಾಂಗ್ರೆಸ್‌ ಶಾಸಕರೇ ಸಚಿವ ಎಚ್‌. ಆಂಜನೇಯ ಅವರನ್ನು ತರಾಟೆಗೆ ತೆಗೆದುಕೊಂಡ ಅಪರೂಪದ ಪ್ರಸಂಗ ನಡೆದಿದೆ.

ಇಲ್ಲಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಸೇರಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಂಜನೇಯ ಅವರ ಮೇಲೆ ಮುಗಿಬಿದ್ದರು. ‘ಒಂದು ಹಂತದಲ್ಲಿ ಏಕವಚನ ಪ್ರಯೋಗವೂ ನಡೆಯಿತು. ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು’ ಎಂದು ಮೂಲಗಳು ತಿಳಿಸಿವೆ.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಕುರಿತು ಸಭೆಯಲ್ಲಿ ಪ್ರಸ್ತಾಪವಾಗುವ ನಿರೀಕ್ಷೆಯಿತ್ತು. ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ವಿರುದ್ಧ ಮುಗಿಬೀಳಲು ಅನೇಕ ಶಾಸಕರು ಎರಡು ದಿನಗಳಿಂದ ತುದಿಗಾಲಲ್ಲಿ ನಿಂತಿದ್ದರು. ಮುಖ್ಯಮಂತ್ರಿ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿದರು. ಇದನ್ನು ಪ್ರಸ್ತಾಪಿಸಲು ಅವಕಾಶವನ್ನೇ ಕೊಡಲಿಲ್ಲ.

ADVERTISEMENT

ಅನಂತರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಒಳ ಮೀಸಲಾತಿ ಸಂಬಂಧ ನ್ಯಾ. ಎ.ಜೆ. ಸದಾಶಿವ ಆಯೋಗ ಕೊಟ್ಟಿರುವ ವರದಿ ಜಾರಿ ಕುರಿತು ಲೋಕಸಭೆ ಸದಸ್ಯ ಕೆ.ಎಚ್‌. ಮುನಿಯಪ್ಪ ಪ್ರಸ್ತಾಪಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. ಪರಿಶಿಷ್ಟ ಜಾತಿ ಬಲಗೈ ಬಣಕ್ಕೆ ಸೇರಿದ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಕೂಡಲೇ ವಿವಿಧ ಜಾತಿಗಳ ಸಂಖ್ಯೆಯನ್ನೊಳಗೊಂಡ ಪಟ್ಟಿ ಪ್ರದರ್ಶಿಸಿದರು. ಇದಕ್ಕೆ ಆಂಜನೇಯ ಆಕ್ಷೇಪಿಸಿದಾಗ ಭಾರಿ ವಾಗ್ವಾದವೇ ನಡೆಯಿತು.

‘ಯಾವ ಜಾತಿ ಎಷ್ಟು ಸಂಖ್ಯೆಯಲ್ಲಿದೆ ಎಂದು ನೀವೇ ಅಧಿಕೃತವಾಗಿ ಮಾಹಿತಿ ನೀಡಿದ್ದೀರಿ. ಅದರಲ್ಲಿ ನಿಮ್ಮದೇ ಸಹಿ ಇದೆ’ ಎಂದು ನರೇಂದ್ರ ಸ್ವಾಮಿ ದಾಖಲೆಯೊಂದನ್ನು ಪ್ರದರ್ಶಿಸಿದರು. ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರಿದು ಏಕವಚನದ ಪ್ರಯೋಗವೂ ನಡೆಯಿತು. ನರೇಂದ್ರ ಸ್ವಾಮಿ ಅವರಿಗೆ ಪರಮೇಶ್ವರ ನಾಯ್ಕ್‌ ಸಾಥ್ ನೀಡಿದರು. ‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸಗಳು ಆಗುತ್ತಿಲ್ಲ. ಶಾಸಕರ ಮಾತುಗಳಿಗೆ ಬೆಲೆ ಇಲ್ಲ. ದಲ್ಲಾಳಿಗಳಿಗೆ ಮಣೆ ಹಾಕಲಾಗುತ್ತಿದೆ. ನಾವು ಕೇಳಿದರೆ ಅನುದಾನ ಬಿಡುಗಡೆ ಮಾಡುವುದಿಲ್ಲ. ದಲ್ಲಾಳಿಗಳಿಗೆ ಬೇಕಾದಷ್ಟು ಹಣ ನೀಡಲಾಗುತ್ತಿದೆ. ನಮ್ಮ ಕ್ಷೇತ್ರದ ದಲ್ಲಾಳಿಗಳು ಇಲಾಖೆ ಆದೇಶ ತಂದು ನಮ್ಮ ಮುಖಕ್ಕೇ ಹಿಡಿಯುತ್ತಾರೆ. ಹೀಗಾದರೆ ನಾವ್ಯಾಕೆ ಶಾಸಕರಾಗಿ ಮುಂದುವರಿಯಬೇಕು’ ಎಂದು ಎಂ.ಟಿ.ಬಿ ನಾಗರಾಜ್‌ ಹಾಗೂ ವಸಂತ ಬಂಗೇರ ಕೂಗಾಡಿದರು. ಸಚಿವರೂ ಏರಿದ ದನಿಯಲ್ಲಿ ಶಾಸಕರಿಗೆ ತಿರುಗೇಟು ಕೊಟ್ಟರು.

‘ಆಂಜನೇಯ ಬರೀ ಸುಳ್ಳು ಹೇಳುತ್ತಾರೆ. ನಾವು ಅವರ ಬಳಿ ಹೋದಾಗ ಭರವಸೆಗಳನ್ನು ಕೊಟ್ಟು ಕಳುಹಿಸುತ್ತಾರೆ. ಆದರೆ, ಕೆಲಸ ಮಾಡುವುದಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಲ್ಯಾಣ ಯೋಜನೆಯಡಿ ಸರ್ಕಾರ ಬೇಕಾದಷ್ಟು ಹಣ ನೀಡಿದೆ. ಈ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಲಾಗುತ್ತಿದೆ’ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕಾಂಗ ಸಭೆಯಲ್ಲಿ ಒಳ ಮೀಸಲಾತಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ, ‘ಇಲ್ಲಿ ಅದರ ಚರ್ಚೆಗೆ ಅವಕಾಶ ಕೊಡಬೇಡಿ’ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಆದರೆ, ಮುಖ್ಯಮಂತ್ರಿ, ‘ಚರ್ಚೆ ನಡೆಯಲಿ, ಶಾಸಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿ’ ಎಂದು ಹೇಳಿದ್ದರಿಂದ ವಾತಾವರಣ ಕಾವೇರಿತು ಎಂದೂ ಮೂಲಗಳು ಖಚಿತಪಡಿಸಿವೆ.

ಈ ಸಭೆ ಮುಗಿಸಿ ಹೊರ ಬರುತ್ತಿದ್ದಂತೆ ಆಂಜನೇಯ ಹಾಗೂ ಎಂಟಿಬಿ ನಾಗರಾಜ್‌ ತೋಳು ಏರಿಸಲು ಮುಂದಾದರು. ಜತೆಯಲ್ಲಿ ಇದ್ದ ಕೆಲವರು ಇಬ್ಬರನ್ನೂ ಸಮಾಧಾನಪಡಿಸಿದರು.

ಉಭಯ ಬಣಗಳ ಜೊತೆ ಚರ್ಚೆ

ಪರಿಶಿಷ್ಟ ಜಾತಿ ಮತ್ತು ಪಂಗಡದ ಒಳ ಮೀಸಲಾತಿ ಸಂಬಂಧ ನ್ಯಾ. ಎ.ಜೆ. ಸದಾಶಿವ ಸಮಿತಿ ನೀಡಿರುವ ವರದಿ ಜಾರಿಗೊಳಿಸುವ ಸಂಬಂಧ  ಬೆಂಗಳೂರಿನಲ್ಲಿ ಬಲಗೈ ಹಾಗೂ ಎಡಗೈ ಬಣಗಳ ಪ್ರಮುಖರ ಜೊತೆ ಚರ್ಚಿಸುವುದಾಗಿ ಮುಖ್ಯಮಂತ್ರಿ  ಭರವಸೆ ನೀಡಿದ್ದಾರೆ.

ಒಳ ಮೀಸಲಾತಿ ಕುರಿತಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ವಾಗ್ವಾದದಲ್ಲಿ ತೊಡಗಿದ್ದ ಉಭಯ ಬಣಗಳ ಶಾಸಕರನ್ನು ಸಮಾಧಾನಪಡಿಸಿದ ಮುಖ್ಯಮಂತ್ರಿ, ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಪ್ರಮುಖರ ಸಭೆ ಕರೆದು ಸಮಾಲೋಚಿಸಿದ ಬಳಿಕ ಸಂಪುಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ಸಚಿವರಾದ ಎಚ್‌.ಸಿ. ಮಹದೇವಪ್ಪ, ಆಂಜನೇಯ, ಮೋಟಮ್ಮ ಸೇರಿದಂತೆ ಪ್ರಮುಖರನ್ನು  ಕರೆದು ಚರ್ಚಿಸುವುದಾಗಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

* ಈಗಲೂ ಮಲ ಹೊರುತ್ತಿರುವ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ ಮೀಸಲಾತಿ ಕೇಳುವುದರಲ್ಲಿ ತಪ್ಪೇನಿದೆ.

–ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.