ADVERTISEMENT

ಸಡಗರದ ಮನೆಯಲ್ಲಿ ಅಡ್ವಾಣಿ ಮೌನ...

ಹಿರಿಯ ನಾಯಕನನ್ನು ನಡೆಸಿಕೊಂಡ ರೀತಿಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2015, 16:21 IST
Last Updated 5 ಏಪ್ರಿಲ್ 2015, 16:21 IST

ಬೆಂಗಳೂರು: ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರನ್ನು ನಡೆಸಿಕೊಂಡ ರೀತಿ ಹಲವು ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಅಡ್ವಾಣಿ ಗುರುವಾರ ರಾತ್ರಿಯೇ ಬೆಂಗಳೂರಿಗೆ ಬಂದಿದ್ದರು. ಶುಕ್ರವಾರ ಕಾರ್ಯಕಾರಿಣಿ ಉದ್ಘಾಟನಾ ಸಮಾರಂಭದಲ್ಲಿ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಆದರೂ ಭಾಷಣ ಮಾಡುವ ಅವಕಾಶ ಕೊಟ್ಟಿರಲಿಲ್ಲ. ಅಂದು ವೇದಿಕೆಯಲ್ಲಿ ಪಕ್ಷದ ಅಧ್ಯಕ್ಷ ಅಮಿತ್‌ ಷಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಅರುಣ್‌ ಜೇಟ್ಲಿ ಆಸೀನರಾಗಿದ್ದರು. ವೇದಿಕೆಯಲ್ಲಿದ್ದ ಯಾವೊಬ್ಬ ನಾಯಕರು ಅಡ್ವಾಣಿ ಜತೆ ಆತ್ಮೀಯ ಸಂವಾದ ನಡೆಸದೆ ಬಿಗುಮಾನ ಕಾಯ್ದುಕೊಂಡಿದ್ದರು ಎನ್ನಲಾಗಿದೆ.

ಇದರಿಂದ ಬೇಸತ್ತ ಅಡ್ವಾಣಿ ಭೋಜನ ವಿರಾಮದ ನಂತರ ಆರಂಭವಾದ ಸಭೆಯಲ್ಲಿ ವೇದಿಕೆ ಏರಲು ಹಿಂದೇಟು ಹಾಕಿ, ಸಭಿಕರ ಸಾಲಿನಲ್ಲಿ ಆಸೀನರಾಗಿದ್ದರು. ಕೂಡಲೇ ಸೂಕ್ಷ್ಮತೆಯನ್ನು ಅರಿತ ಧುರೀಣರು ಅವರ ಮನವೊಲಿಸಿ, ವೇದಿಕೆಗೆ ಕರೆದೊಯ್ದಿದ್ದರು ಎಂದು ಗೊತ್ತಾಗಿದೆ.

ಶನಿವಾರವೂ ಮೌನ: ಕಾರ್ಯಕಾರಿಣಿಯ 2ನೇ ದಿನವಾದ ಶನಿವಾರವೂ ಅವರಿಗೆ ಮಾತನಾಡುವ ಅವಕಾಶ ನೀಡಲಿಲ್ಲ ಎನ್ನಲಾಗಿದೆ. ವೇದಿಕೆಯಲ್ಲಿದ್ದ ಎಲ್ಲರೂ ಮಾತನಾಡಿದರೂ ಅಡ್ವಾಣಿ ಅವರನ್ನು ಸೌಜನ್ಯಕ್ಕಾದರೂ ಭಾಷಣಕ್ಕೆ ಆಹ್ವಾನಿಸಲಿಲ್ಲ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ ಜತೆ ನೋವು ತೋಡಿಕೊಂಡರು.

‘ಅಡ್ವಾಣಿ ಅವರನ್ನು ಕಡೆಗಣಿಸಲಾಗಿದೆಯೇ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಚಿವರಾದ ಅರುಣ್‌ ಜೇಟ್ಲಿ ಮತ್ತು ನಿರ್ಮಲಾ ಸೀತಾರಾಮನ್‌ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡರು. ‘ಪಕ್ಷದ ಆಂತರಿಕ ನಿರ್ಧಾರಗಳನ್ನು  ಮಾಧ್ಯಮಗಳೊಂದಿಗೆ ಚರ್ಚಿಸಲು ಸಾಧ್ಯವಿಲ್ಲ’ ಎಂದಷ್ಟೇ ಉತ್ತರಿಸಿದರು.

ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅಡ್ವಾಣಿ ಅವರನ್ನು ಸನ್ಮಾನಿಸದೆ  ಮೋದಿ ಹಾಗೂ ಅಮಿತ್‌ ಷಾ ಅವರಿಗೆ ಮಾತ್ರ ಸನ್ಮಾನ ಮಾಡಲಾಗಿತ್ತು. ಈ ಕುರಿತಂತೆ ಶನಿವಾರ ಪ್ರಶ್ನಿಸಿದಾಗ ನಿರ್ಮಲಾ ಸೀತಾರಾಮನ್‌ ಅವರು, ‘ಅಡ್ವಾಣಿ ಪಕ್ಷದ ಅತ್ಯಂತ ಹಿರಿಯ ನಾಯಕ. ಅವರು ಸದಾ ನಮ್ಮ ಜೊತೆಗಿದ್ದು ಮಾರ್ಗದರ್ಶಕರಾಗಿದ್ದಾರೆ.  ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಅಡ್ವಾಣಿ ಅವರು ಮೌನದ ಮೂರ್ತಿಯಾಗಿಯೇ ಕಾರ್ಯಕಾರಿಣಿ ಮುಗಿಸಿ ದೆಹಲಿಗೆ ತೆರಳಿದರು.
2013ರಲ್ಲಿ ಗೋವಾದಲ್ಲಿ ನಡೆದಿದ್ದ ಕಾರ್ಯಕಾರಿಣಿಯಲ್ಲಿ ಅಡ್ವಾಣಿ ಭಾಗವಹಿಸಿರಲಿಲ್ಲ. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ  ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.