ADVERTISEMENT

ಸದನ ಸಮಿತಿ ರಚಿಸಲು ನಿರ್ಧಾರ

ವಿದ್ಯಾರ್ಥಿಗಳಿಗೆ ವಿತರಿಸಲಾದ ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ವಿದ್ಯಾರ್ಥಿಗಳಿಗೆ ವಿತರಿಸಲಾದ ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಅವ್ಯವಹಾರ
ವಿದ್ಯಾರ್ಥಿಗಳಿಗೆ ವಿತರಿಸಲಾದ ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಅವ್ಯವಹಾರ   

ಬೆಳಗಾವಿ: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾದ ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತು ಪರಿಶೀಲಿಸಲು ಸದನ ಸಮಿತಿ ರಚಿಸಲು ಶುಕ್ರವಾರ ವಿಧಾನ ಪರಿಷತ್‌ನಲ್ಲಿ ನಿರ್ಧರಿಸಲಾಯಿತು.

‘2016–17 ಸಾಲಿನಲ್ಲಿ ಖರೀದಿಸಿದ್ದಕ್ಕಿಂತ ₹ 10,000 ಹೆಚ್ಚಿಗೆ ದರ ನೀಡಿ ಈ ವರ್ಷ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿರುವುದರಿಂದ ಸರ್ಕಾರಕ್ಕೆ ₹300 ಕೋಟಿ ನಷ್ಟ ಉಂಟಾಗಿದೆ’ ಎಂದು ಇಲಾಖೆ ನಿರ್ದೇಶಕರಾಗಿದ್ದ ಅಜಯ್‌ ನಾಗಭೂಷಣ್‌ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದ ಮೇಲೆ ಅವರನ್ನು ವರ್ಗಾವಣೆ ಮಾಡಿರುವುದು ಅವ್ಯವಹಾರದ ಶಂಕೆ ಮೂಡಿಸಿದೆ’ ಎಂದು ಬಿಜೆಪಿಯ ರಘುನಾಥ ಮಲ್ಕಾಪೂರೆ ಆರೋಪಿಸಿದರು.

‘ಕಳೆದ ವರ್ಷ ಕಡಿಮೆ ಬಿಡ್‌ ಮಾಡಿದ್ದ ಏಸರ್‌ ಕಂಪೆನಿಯಿಂದ ಪ್ರತಿ ಲ್ಯಾಪ್‌ಟಾಪ್‌ ಅನ್ನು ₹ 14,490ಕ್ಕೆ ಖರೀದಿ ಮಾಡಲಾಗಿದೆ.  ರಾಜ್ಯಮಟ್ಟದ ಬದಲಾಗಿ ವಿಭಾಗವಾರು ಟೆಂಡರ್‌ ಕರೆಯಲು ಸೂಚಿಸಿದ್ದ ಅವರು, ನಂತರ ಟೆಂಡರ್‌ ಕರೆಯಲೇ ಇಲ್ಲ. ಆದ್ದರಿಂದ, ನಷ್ಟವಾಗುವ ಪ್ರಶ್ನೆಯೇ ಬರುವುದಿಲ್ಲ. ಅವ್ಯವಹಾರ ಆಗಿದ್ದು ಸಾಬೀತಾದರೆ ರಾಜೀನಾಮೆ ನೀಡಲೂ ಸಿದ್ಧ’ ಎಂದು ಉನ್ನತ ಶಿಕ್ಷಣ ಸಚಿವ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ADVERTISEMENT

‘ಸದನ ಸಮಿತಿ ರಚಿಸಿ. ಸತ್ಯ ಗೊತ್ತಾಗುತ್ತದೆ. ಅಧಿಕಾರಿ ತಪ್ಪು ಹೇಳಿಕೆ ನೀಡಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಿ’ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

‘ಕಳೆದ ವರ್ಷ ಖರೀದಿಸಿದ ಲ್ಯಾಪ್‌ಟಾಪ್‌ಗಳು ಟೆಂಡರ್‌ನಲ್ಲಿ ನಮೂದಿಸಿದಂತೆ ಇಲ್ಲ ಎಂಬ ಕಾರಣಕ್ಕೆ ₹12 ಕೋಟಿ ಬಿಲ್‌ ಪಾವತಿ ತಡೆ ಹಿಡಿಯಲಾಗಿದೆ. ಆದ್ದರಿಂದ ಸಮಿತಿ ರಚಿಸಬೇಕು’ ಎಂದು ಜೆಡಿಎಸ್‌ ಸದಸ್ಯ ರಮೇಶ್‌ಬಾಬು ಒತ್ತಾಯಿಸಿದರು.

‘ಸದನ ಸಮಿತಿ ರಚಿಸುವ ಅವಶ್ಯಕತೆ ಇಲ್ಲ’ ಎಂದು ಸಭಾನಾಯಕ ಎಂ.ಆರ್‌. ಸೀತಾರಾಂ ಹೇಳಿದರು. ಇದಕ್ಕೆ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಡಿ.ಎಸ್‌. ವೀರಯ್ಯ, ಅರುಣ ಶಹಾಪುರ ವಿರೋಧ ವ್ಯಕ್ತಪಡಿಸಿದರು.

‘ಸದನ ಸಮಿತಿ ರಚನೆಗೆ ಸಚಿವರು ಅಭ್ಯಂತರವಿಲ್ಲ ಎನ್ನುತ್ತಿದ್ದಾರೆ. ಹಾಗಾಗಿ ಸಮಿತಿ ರಚಿಸಬಹುದು’ ಎಂದು ಸೀತಾರಾಂ ಹೇಳಿದರು.

ಆಗ ಸದನ ಸಮಿತಿ ರಚಿಸುವುದಕ್ಕೆ ಕಾಂಗ್ರೆಸ್ಸಿನ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಚಿವರೇ ಒಪ್ಪಿರುವಾಗ ನಿಮ್ಮದೇನು ಎಂದು ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಕೂಗತೊಡಗಿದಾಗ ಸದನದಲ್ಲಿ ಗದ್ದಲ ಉಂಟಾಯಿತು.

‘ಸದನ ಸಮಿತಿ ವರದಿ ಸಲ್ಲಿಸುವುದು ವಿಳಂಬವಾದರೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ವಿಳಂಬವಾಗುತ್ತದೆ. ಸಮಯ ನಿಗದಿ ಮಾಡಬೇಕು’ ಎಂದು ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ, ವಿ.ಎಸ್‌. ಉಗ್ರಪ್ಪ, ಬಿಜೆಪಿಯ ಕೆ.ಎಸ್‌. ಈಶ್ವರಪ್ಪ ಮನವಿ ಮಾಡಿದರು.

‘ಸದನ ಸಮಿತಿಯನ್ನು ನಿಯಮಾವಳಿಗಳ ಪ್ರಕಾರ ರಚಿಸಲಾಗುವುದು. 15 ದಿನದಲ್ಲಿ ಸಮಿತಿ ವರದಿ ನೀಡಬೇಕು’ ಎಂದು ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.