ADVERTISEMENT

‘ಸಮ್ಮರ್‌ ಹಾಲಿಡೇಸ್‌’ ಸಿನಿಮಾಗೆ ಬಣ್ಣ ಹಚ್ಚಲಿರುವ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
‘ಸಮ್ಮರ್‌ ಹಾಲಿಡೇಸ್‌’ ಸಿನಿಮಾಗೆ ಬಣ್ಣ ಹಚ್ಚಲಿರುವ ಸಿದ್ದರಾಮಯ್ಯ
‘ಸಮ್ಮರ್‌ ಹಾಲಿಡೇಸ್‌’ ಸಿನಿಮಾಗೆ ಬಣ್ಣ ಹಚ್ಚಲಿರುವ ಸಿದ್ದರಾಮಯ್ಯ   

ಬೆಂಗಳೂರು: ಬಿಡುವಿಲ್ಲದ ರಾಜಕೀಯ  ಚಟುವಟಿಕೆಗಳ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಸಮ್ಮರ್‌ ಹಾಲಿಡೇಸ್‌’ ಸಿನಿಮಾಕ್ಕಾಗಿ ಬಣ್ಣ ಹಚ್ಚಲಿದ್ದಾರೆ.

ಕವಿತಾ ಲಂಕೇಶ್ ನಿರ್ದೇಶನದ ಈ ಚಿತ್ರ ಅಕ್ಟೋಬರ್ ವೇಳೆಗೆ ತೆರೆ ಕಾಣಲಿದೆ. ‘ಸಿದ್ದರಾಮಯ್ಯನವರು 10 ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುರುವಾರ ಅಥವಾ ಶುಕ್ರವಾರ ಚಿತ್ರೀಕರಣ ನಡೆಯಲಿದೆ’ ಎಂದು ಕವಿತಾ, ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳಿಗೆ ಬೋಧನೆ ಮಾಡುವ, ಕಷ್ಟಗಳನ್ನೇ ಬಿಂಬಿಸುವ  ಚಿತ್ರದ ಬದಲಿಗೆ ಅಪ್ಪಟ ಮನರಂಜನೆಯ ಮೂಲಕ ಪರೋಕ್ಷ ಸಂದೇಶ ನೀಡುವ ಚಿತ್ರ ಇದಾಗಿದೆ. ದಿಡ್ಡಳ್ಳಿ ಮಾದರಿಯ ಗಿರಿಜನ ಹೋರಾಟದಲ್ಲಿ ಭಾಗಿಯಾಗುವ ಮಕ್ಕಳು ನೆರವು ಕೋರಿ ಮುಖ್ಯಮಂತ್ರಿಗೆ ಮನವಿ ಮಾಡುತ್ತಾರೆ. ಮಕ್ಕಳಿಗೆ ಸಹಾಯ ನೀಡುವ ಪಾತ್ರವನ್ನು ಸಿದ್ದರಾಮಯ್ಯ ನಿರ್ವಹಿಸಲಿದ್ದಾರೆ’ ಎಂದೂ ಅವರು ತಿಳಿಸಿದರು.

ADVERTISEMENT

13ರಿಂದ 16ರ ವಯೋಮಾನದ ಮಕ್ಕಳ ಮನಸ್ಥಿತಿ, ಅಭಿರುಚಿ, ಆಕಾಂಕ್ಷೆ, ಸಾಹಸ ಮನೋಭಾವವನ್ನು ಆಧರಿಸಿ ಚಿತ್ರಕತೆ ಸಿದ್ಧಪಡಿಸಲಾಗಿದೆ. ಮಕ್ಕಳನ್ನು ಹೀರೊಗಳಂತೆ ಬಿಂಬಿಸುವ ಬದಲು ಸಹಜ ಪಾತ್ರಗಳಲ್ಲಿ ತೋರಿಸಲು, ಮಕ್ಕಳ ಸಂಭಾಷಣೆ ಹೇಗಿರುತ್ತದೆ ಎಂದು ಅರ್ಥ ಮಾಡಿಕೊಂಡು ಅದೇ ಭಾಷಾ ಶೈಲಿ ಬಳಸಲು  ವಿಶೇಷ ಕಾರ್ಯಾಗಾರ ನಡೆಸಲಾಗಿತ್ತು ಎಂದೂ ಅವರು ವಿವರಿಸಿದರು.

‘ವೀಕೆಂಡ್ ವಿತ್‌ ರಮೇಶ್‌’ ಕಾರ್ಯಕ್ರಮದಲ್ಲಿ  ಸಿ.ಎಂ
ನಟ ರಮೇಶ್‌ ಅರವಿಂದ್ ಖಾಸಗಿ ವಾಹಿನಿಯಲ್ಲಿ ನಡೆಸಿಕೊಡುವ ‘ವೀಕೆಂಡ್ ವಿತ್ ರಮೇಶ್‌’ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಾಣಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದ ಚಿತ್ರೀಕರಣ ಗುರುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.