ADVERTISEMENT

ಸಮ್ಮಿಶ್ರ ಸರ್ಕಾರದ ಕೂಸು

ಮಠ ನಿಯಂತ್ರಣ ಮಸೂದೆ : ಸರ್ಕಾರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:45 IST
Last Updated 22 ಡಿಸೆಂಬರ್ 2014, 19:45 IST

ಬೆಂಗಳೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ವ್ಯಾಪ್ತಿಗೆ ಮಠಗಳನ್ನು ತರುವ ಪ್ರಕ್ರಿಯೆ ಬಿಜೆಪಿ– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಆರಂಭವಾಗಿತ್ತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ­ಗಳ ಸಚಿವ ಟಿ.ಬಿ. ಜಯಚಂದ್ರ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದರು.

ಮಠಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮಸೂದೆಗೆ ಮಠಾಧೀಶರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅವರು ಈ ವಿವರಣೆ ನೀಡಿದರು. ‘ಹಿಂದಿನ ಬಿಜೆಪಿ ಸರ್ಕಾರ ಕೂಡ ಇಂತಹ ಮಸೂದೆ ರೂಪಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಅದರ ಪ್ರಕಾರವೇ ಈಗ ತಿದ್ದುಪಡಿ ಮಸೂದೆ ಮಂಡಿಸಲಾಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಹಿನ್ನೆಲೆ: ‘ಹಿಂದೂ ಧಾರ್ಮಿಕ ಸಂಸ್ಥೆ­ಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ–1997ನ್ನು ಪ್ರಶ್ನಿಸಿ ಕೆಲ­ವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ವಿಭಾಗೀಯ ಪೀಠ 2006ರ ಸೆಪ್ಟೆಂಬರ್‌ನಲ್ಲಿ ಈ ಕಾಯ್ದೆ­ಯನ್ನು ರದ್ದುಗೊಳಿಸಿತ್ತು. ಇದರ ವಿರುದ್ಧ ಮುಜರಾಯಿ ಇಲಾಖೆ ಸುಪ್ರೀಂ­ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮಠಗಳೂ ಸೇರಿದಂತೆ ಎಲ್ಲ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿ­ಸಿದ ಮಸೂದೆ ರೂಪಿಸು­ವುದಾಗಿ ಆಗ ವಿಚಾರಣೆ ಸಂದರ್ಭ­ದಲ್ಲಿ ಮುಜರಾಯಿ ಇಲಾಖೆ ಪ್ರಮಾಣ­ಪತ್ರ ಸಲ್ಲಿಸಿತ್ತು’ ಎಂದು ವಿವರಿಸಿದರು.

‘ಹೈಕೋರ್ಟ್‌ ತೀರ್ಮಾನ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ­ಕೋರ್ಟ್‌, ಧಾರ್ಮಿಕ ಸಂಸ್ಥೆಗಳ ವ್ಯಾಪ್ತಿಗೆ ಮಠವನ್ನೂ ಸೇರಿಸುವಂತೆ ಸಲಹೆ ನೀಡಿತ್ತು. ಅದನ್ನು ಸರ್ಕಾರ ಒಪ್ಪಿಕೊಂಡಿತ್ತು. ಆದರೆ ಕಾಯ್ದೆಗೆ ತಿದ್ದುಪಡಿ ತಂದಿರಲಿಲ್ಲ. 2015ರ ಜನವರಿ 13ಕ್ಕೆ ಪ್ರಕರಣದ ಅಂತಿಮ ವಿಚಾರಣೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಭಿಪ್ರಾಯ ವ್ಯಕ್ತ ಆಗಬಾರದು. ಈ ಕಾರಣಕ್ಕಾಗಿ ತಿದ್ದುಪಡಿ ಮಸೂದೆ ಮಂಡಿಸಲಾಗಿದೆ’ ಎಂದರು.

ಸಮರ್ಥನೆ: ಮಠಗಳು ಕೂಡ ಸಾರ್ವಜನಿಕ ಹಣದಿಂದ ನಡೆಯುವ ಸಂಸ್ಥೆಗಳು. ಅವುಗಳಿಗೆ ಸಂಬಂಧಿಸಿ­ದಂತೆಯೂ ಒಂದು ಕಾನೂನು ಅಗತ್ಯ. ಕಾನೂನು ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಕೂಡದು. ಅಂತಹ ಪರಿಸ್ಥಿತಿ ಉದ್ಭವಿಸಿದರೆ ಸರ್ಕಾರವೇ ಜವಾಬ್ದಾರಿ ಆಗುತ್ತದೆ. ನ್ಯಾಯಾಲಯದ ಮುಂದೆಯೂ ಈ ರೀತಿಯ ಇಕ್ಕಟ್ಟು ಸೃಷ್ಟಿ ಆಗುವುದನ್ನು ತಪ್ಪಿಸುವ ಉದ್ದೇಶ ಸರ್ಕಾರದ್ದು ಎಂದು ಸಮರ್ಥಿಸಿಕೊಂಡರು. ಸೋಸಲೆ ವ್ಯಾಸರಾಜ ಮತ್ತು ಕೂಡಲಿ ಶೃಂಗೇರಿ ಮಠಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ನ್ಯಾಯಾಲಯ ಕೂಡ ಮಠಗಳನ್ನು ಕಾನೂನಿನ ವ್ಯಾಪ್ತಿಗೆ ತರದೇ ಇರುವ ಬಗ್ಗೆ ಪ್ರಶ್ನಿಸಿತ್ತು ಎಂದರು.

‘ದ್ವೇಷದ ನಿರ್ಧಾರವಲ್ಲ’: ‘ಯಾವುದೇ ಮಠ ಅಥವಾ ಹಿಂದೂ ಧಾರ್ಮಿಕ ಸಂಸ್ಥೆಗಳ ವಿರುದ್ಧ ದ್ವೇಷದಿಂದ ಈ ಮಸೂದೆ ಮಂಡಿಸಿಲ್ಲ. ಮಸೂದೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಚರ್ಚೆಗೆ ಅವಕಾಶವಿದೆ. ಯಾವುದೇ ಮಠ ಅಥವಾ ಧಾರ್ಮಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವ ದುರುದ್ದೇಶವೂ ಇಲ್ಲ’ ಎಂದು ಸಚಿವರು ಹೇಳಿದರು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಧಾರ್ಮಿಕ ಸಂಸ್ಥೆಗಳ ನಿಯಂತ್ರಣಕ್ಕೂ ಇದೇ ಮಾದರಿಯ ಮಸೂದೆ ರೂಪಿಸಲಾಗುವುದೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಲಾಗುವುದು’ ಎಂದರು.

ಬೇಕಾಬಿಟ್ಟಿ ಬಳಸೊಲ್ಲ: ಈ ಮಸೂದೆ ಕಾಯ್ದೆ­ಯಾದ ಬಳಿಕ ಅದನ್ನು ಬೇಕಾಬಿಟ್ಟಿಯಾಗಿ ಬಳಸಲು ಅವಕಾಶ ನೀಡುವುದಿಲ್ಲ. ಮಠಾಧೀಶರು ಈ ಮಸೂದೆಯ ವಿರುದ್ಧ ಬೀದಿಗಿಳಿಯುವ ಅಥವಾ ಹೋರಾಟ ನಡೆಸುವ ಅವಶ್ಯಕತೆ ಇಲ್ಲ. ಯಾವುದೇ ಮಠಾಧೀಶರು ಅಂತಹ ನಿರ್ಧಾರಕ್ಕೆ ಮುಂದಾಗಬಾರದು ಎಂದು ಸಚಿವ  ಜಯಚಂದ್ರ ಮನವಿ ಮಾಡಿದರು.

ಮಠಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಸುಪ್ರೀಂ­ಕೋರ್ಟ್‌ ಸೂಚನೆಯಂತೆ ಮಸೂದೆ ಮಂಡಿಸಲಾಗಿದೆ. ಮಸೂದೆ ಮಂಡಿಸಿದ ಮಾತ್ರಕ್ಕೆ ಮಠ­ಗಳನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತದೆ ಎಂದು ಭಾವಿಸಬಾರದು
– ಮುಖ್ಯಮಂತ್ರಿ ಸಿದ್ದರಾಮಯ್ಯ

ತಪ್ಪು ಕಲ್ಪನೆ ಬಿತ್ತಲಾಗುತ್ತಿದೆ: ಸಚಿವ ಜಯಚಂದ್ರ
ಈ ಮಸೂದೆ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದ ಕೂಸು. ಆಗ ಜನ್ಮತಳೆದ ಪ್ರಸ್ತಾವಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್  ಸರ್ಕಾರ ದುರುದ್ದೇಶದಿಂದ ಈ ಮಸೂದೆ ರೂಪಿಸಿದೆ ಎಂಬುದಾಗಿ ತಪ್ಪು ಕಲ್ಪನೆ ಬಿತ್ತಲಾಗುತ್ತಿದೆ.

ಮಸೂದೆ ವಿರುದ್ಧ ಹೋರಾಟ: ಬಿಜೆಪಿ
ಬೆಂಗಳೂರು: ರಾಜ್ಯ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿರುವ ಮಠಗಳನ್ನು ನಿಯಂತ್ರಿಸುವ ಮಸೂದೆಯನ್ನು ವಾಪಸ್‌ ಪಡೆಯಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ಮಠಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಈ ಮಸೂದೆಯ ವಿರುದ್ಧ ಹೋರಾಡಲು ಎಲ್ಲ ಮಠಾಧೀಶರು ಒಂದಾಗಬೇಕು. ಮಸೂದೆಯ ವಿರುದ್ಧ ಬಿಜೆಪಿ ಸದನದ ಒಳಗೂ, ಹೊರಗೂ ಹೋರಾಟ ನಡೆಸಲಿದೆ. ಮಠಾಧೀಶರ ಹೋರಾಟಕ್ಕೆ ಬೆಂಬಲ ನೀಡಲಿದೆ’ ಎಂದು ಅವರು ಹೇಳಿದರು.

ರಾಮಾ ಜೋಯಿಸ್‌ ಶಿಫಾರಸು
‘ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಂತ್ರಣಕ್ಕೆ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಅಧ್ಯಯನ ನಡೆಸಲು ಬಿಜೆಪಿ ಸರ್ಕಾರವು ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್‌ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ರಾಜ್ಯ ಧಾರ್ಮಿಕ ಪರಿಷತ್ತನ್ನು ಅಸ್ತಿತ್ವಕ್ಕೆ ತಂದು ಮಠಗಳನ್ನು ನಿಯಂತ್ರಿಸಲು ಈ ಸಮಿತಿ ಶಿಫಾರಸು ಮಾಡಿತ್ತು’ ಎಂದು ಸಚಿವ ಜಯಚಂದ್ರ ಹೇಳಿದರು. ಮಠಗಳ ಉತ್ತರಾಧಿಕಾರಿಗಳ ನೇಮಕಕ್ಕೆ ಧಾರ್ಮಿಕ ಪರಿಷತ್‌ ಅನು­ಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲು ಮತ್ತು ಮಠಗಳ ಆಸ್ತಿ, ಹಣ­ಕಾಸು ನಿರ್ವಹಣೆ ಮೇಲೆ ನಿಗಾ ಇಡಲು ಕೂಡ ಸಮಿತಿ ಸೂಚಿಸಿತ್ತು ಎಂದರು.

ಅಡ್ಡಗಾಲು ಹಾಕುವುದು ಸರಿಯಲ್ಲ
‘ಅನವಶ್ಯಕವಾಗಿ ಧಾರ್ಮಿಕ ಭಾವನೆ­ಗಳನ್ನು ಕೆರಳಿಸುವ ವಿಧೇಯಕ ಮಂಡಿ­ಸುವ ಚಾಳಿಯನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಸರ್ಕಾರವು ಸಮಾಜದ ಒಂದು ವರ್ಗದ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಇದುವರೆಗೆ ಯಾವ ಸರ್ಕಾರವೂ ಮಾಡದಷ್ಟು ಶೈಕ್ಷಣಿಕ ಹಾಗೂ ಸಾಮಾಜಿಕ ಕೆಲಸಗಳನ್ನು ಧಾರ್ಮಿಕ ದತ್ತಿ ಸಂಸ್ಥೆಗಳು ಮಾಡಿವೆ. ಅನ್ನದಾಸೋಹ, ಜ್ಞಾನ ದಾಸೋಹದಲ್ಲಿ ನಿರತವಾಗಿವೆ. ಅವುಗಳ ಸೇವೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ.
–ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.