ADVERTISEMENT

ಸಮ್ಮೇಳನದಲ್ಲೂ ಡಿಜಿಟಲ್ ಹಣ!

ವಿಜಯ್ ಜೋಷಿ
Published 2 ಡಿಸೆಂಬರ್ 2016, 19:30 IST
Last Updated 2 ಡಿಸೆಂಬರ್ 2016, 19:30 IST
ಸಮ್ಮೇಳನದಲ್ಲೂ ಡಿಜಿಟಲ್ ಹಣ!
ಸಮ್ಮೇಳನದಲ್ಲೂ ಡಿಜಿಟಲ್ ಹಣ!   

ರಾಯಚೂರು: ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ನಂತರ ಪ್ಲಾಸ್ಟಿಕ್ ಹಣ ಹಾಗೂ ಮೊಬೈಲ್ ವಾಲೆಟ್ ಬಳಕೆ ಹೆಚ್ಚಿರುವುದು ಐ.ಟಿ. ನಗರ ಬೆಂಗಳೂರಿನಲ್ಲಿ ಮಾತ್ರ ಅಲ್ಲ. 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲೂ ಕ್ರೆಡಿಟ್/ಡೆಬಿಟ್ ಕಾರ್ಡ್ ಹಾಗೂ ಮೊಬೈಲ್ ವಾಲೆಟ್ ಬಳಕೆ ಜೋರಾಗಿಯೇ ನಡೆದಿದೆ.

ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಪಕ್ಕದಲ್ಲಿರುವ ಪುಸ್ತಕ ಮಳಿಗೆಗಳಿಗೆ ಒಮ್ಮೆ ಭೇಟಿ ನೀಡಿದರೆ ಇದು ಅರಿವಿಗೆ ಬರುತ್ತದೆ. ಇಲ್ಲಿ ಮಳಿಗೆ ತೆರೆದಿರುವ ರಾಜ್ಯದ ಪ್ರಮುಖ ಪುಸ್ತಕ ಪ್ರಕಾಶಕರು ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಕೆಲವು ಪ್ರಕಾಶಕರು ಪೇಟಿಎಂ ಮೂಲಕವೂ ಹಣ ಸ್ವೀಕರಿಸುತ್ತಿದ್ದಾರೆ.

'ಬೆಂಗಳೂರು ಸೇರಿದಂತೆ ಎಲ್ಲ ಕಡೆ ನಗದು ಹಣದ ಕೊರತೆ ಇದೆ. ಹಾಗಾಗಿ ನಾವು ಇಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಡೆಯುವ ಯಂತ್ರ ತರುವುದನ್ನು ಮರೆಯಲಿಲ್ಲ' ಎಂದು ಸಪ್ನ ಬುಕ್ ಹೌಸ್‍ನ ದೊಡ್ಡೇಗೌಡ ತಿಳಿಸಿದರು. ಇವರ ಪುಸ್ತಕ ಮಳಿಗೆಯಲ್ಲಿ 'ನಾವು ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಡೆಯುತ್ತೇವೆ' ಎಂಬ ಫಲಕ ಅಂಟಿಸಿದ್ದಾರೆ. ಪ್ಲಾಸ್ಟಿಕ್ ಕಾರ್ಡ್ ಬಳಸಿ ಹಣ ಪಾವತಿಸುವವರ ಸಂಖ್ಯೆ ದೊಡ್ಡದಾಗಿಯೇ ಇದೆ ಎಂದು ಸಪ್ನ ಪ್ರತಿನಿಧಿಯೊಬ್ಬರು ಹೇಳಿದರು.

ADVERTISEMENT

ಆದರೆ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಹಣ ಪಡೆಯುವ ವ್ಯವಸ್ಥೆ ಮಾಡಿಕೊಳ್ಳದೆ ಸಾಹಿತ್ಯ ಸಮ್ಮೇಳನಕ್ಕೆ ಬಂದಿರುವ ಕೆಲವು ಪ್ರಕಾಶಕರು ಈಗ ಬೇಸರ ಮಾಡಿಕೊಳ್ಳುತ್ತಿರುವುದೂ ಇದೆ. 'ನಗದು ಹಣದ ಅಭಾವ ಇದೆ ಎಂಬುದು ನಿಜ. ಪುಸ್ತಕ ಖರೀದಿಸುವವರಿಂದ ಹಣ ಪಡೆಯಲು ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು ಅಂತ ಈಗ ಅನಿಸುತ್ತಿದೆ. ಆದರೂ, ನಗದು ಹಣ ನೀಡಿ ಪುಸ್ತಕ ಖರೀದಿಸುವವರ ಸಂಖ್ಯೆ ಕಡಿಮೆಯೇನೂ ಅಲ್ಲ' ಎಂದು ಪುಸ್ತಕ ಪ್ರಕಾಶಕರೊಬ್ಬರು ಹೆಸರು ಬಹಿರಂಗಪಡಿಸಬೇಡಿ ಎಂಬ ಷರತ್ತಿನೊಂದಿಗೆ 'ಪ್ರಜಾವಾಣಿ' ಬಳಿ ಹೇಳಿಕೊಂಡರು.

'ನಗದು ಹಣದ ಕೊರತೆ ತೀವ್ರವಾಗಿರುವ ಕಾರಣ ನಾವು ಬದಲಿ ವ್ಯವಸ್ಥೆ ಕಲ್ಪಿಸಿಕೊಂಡಿದ್ದೇವೆ. ನಮ್ಮ ಮಳಿಗೆಯಲ್ಲಿ ಈ ಬಾರಿ ನಗದು ಹಣ ಕೊಟ್ಟು ಪುಸ್ತಕ ಖರೀದಿಸುವವರಿಗಿಂತ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರೇ ಹೆಚ್ಚಿದ್ದಾರೆ' ಎಂದು ಮೈಸೂರಿನ ಧಾತ್ರಿ ಪ್ರಕಾಶನದ ಎಸ್. ಅಶೋಕ್ ವಿವರಿಸಿದರು.

ಬೆಂಗಳೂರಿನಿಂದ ಬಂದಿರುವ ವಸಂತ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಕಾರ್ಡ್ ಬಳಕೆ ಸೌಲಭ್ಯ ಇಲ್ಲ. ಆದರೆ ಇಲ್ಲಿ ಪೇಟಿಎಂ ಬಳಸಿ ಹಣ ಪಾವತಿಸಬಹುದು. 'ಇಂದು (ಶುಕ್ರವಾರ) ಕೆಲವರು ಪೇಟಿಎಂ ಬಳಸಿಯೇ ಹಣ ಪಾವತಿಸಿದ್ದಾರೆ' ಎಂದು ಪ್ರಕಾಶನದ ಪ್ರತಿನಿಧಿ ಹೇಳಿದರು.

ಕನ್ನಡದ ಪ್ರಮುಖ ಪ್ರಕಾಶಕರಲ್ಲಿ ಒಬ್ಬರಾದ ನವಕರ್ನಾಟಕ ಪ್ರಕಾಶನದವರ ಪುಸ್ತಕ ಮಳಿಗೆಯಲ್ಲಿ ಕೂಡ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದೆಯಂತೆ. 'ಹೆಚ್ಚಿನ ಬೆಲೆಯ ಪುಸ್ತಕಗಳನ್ನು ಖರೀದಿಸುವವರು ಕಾರ್ಡ್ ಮೂಲಕ ಹಣ ಪಾವತಿ ಮಾಡುತ್ತಿದ್ದಾರೆ. ನಗದು ಕೊರತೆಯೂ ಇದಕ್ಕೆ ಕಾರಣ ಇರಬಹುದು' ಎಂದು 'ನವಕರ್ನಾಟಕ'ದ ಪ್ರತಿನಿಧಿ ಜನಾರ್ದನ್ ಹೇಳಿದರು.

ಪುಸ್ತಕ ಪ್ರಕಾಶಕರು ಹಾಗೂ ವ್ಯಾಪಾರಿಗಳು ನಗದು ರಹಿತ ವಹಿವಾಟು ನಡೆಸಲು ಸನ್ನದ್ಧರಾಗಿ ಬಂದಿದ್ದರೂ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಕೆಲವು ಬಾರಿ ಸ್ವೈಪಿಂಗ್ ಯಂತ್ರ (ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿ ಹಣ ಸ್ವೀಕರಿಸುವ ಯಂತ್ರ) ಕೈಕೊಡುತ್ತಿದೆ. ಅಲ್ಲದೆ, ಸಮ್ಮೇಳನ ನಡೆಯುತ್ತಿರುವ ಸ್ಥಳದಲ್ಲಿ ಮೊಬೈಲ್ ಇಂಟರ್‍ನೆಟ್ ಮತ್ತೆ ಮತ್ತೆ ಕೈಕೊಡುತ್ತಿದೆ. ಇದರಿಂದಾಗಿ ಮೊಬೈಲ್ ವಾಲೆಟ್‍ಗಳ ಮೂಲಕ ಹಣ ಪಾವತಿ/ಸ್ವೀಕಾರ ಒಮ್ಮೊಮ್ಮೆ ಕಷ್ಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.