ADVERTISEMENT

ಸಮ್ಮೇಳನವೂ...ರಾಯರ ದರುಶನವೂ...

ಶಶಿಧರ ಗರ್ಗಶ್ವೇರಿ
Published 4 ಡಿಸೆಂಬರ್ 2016, 19:40 IST
Last Updated 4 ಡಿಸೆಂಬರ್ 2016, 19:40 IST
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಗಳು ಮಂತ್ರಾಲಯಕ್ಕೆ ಭೇಟಿ ನೀಡಿರುವುದು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಗಳು ಮಂತ್ರಾಲಯಕ್ಕೆ ಭೇಟಿ ನೀಡಿರುವುದು   

ರಾಯಚೂರು: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ವಿವಿಧೆಡೆಯಿಂದ ಬಂದ  ಪ್ರತಿನಿಧಿಗಳು, ಕಲಾವಿದರು ಮಂತ್ರಾಲಯಕ್ಕೂ ಹೋಗಿ ಗುರುರಾಯರ ದರುಶನ ಮಾಡಿ ಬಂದರು. ಶುಕ್ರವಾರ ಮಧ್ಯಾಹ್ನದ ನಂತರ ಕೆಲ ವರು ಮಂತ್ರಾಲಯಕ್ಕೆ ಹೋಗಿಬಂದರೆ, ಶನಿವಾರ ಮತ್ತು ಭಾನುವಾರ ಮುಂಜಾ ನೆಯಿಂದಲೇ ಸಾವಿರಾರು ಮಂದಿ ಮಂತ್ರಾಲಯಕ್ಕೆ ಹೋಗಿಬಂದರು.

ಮಂತ್ರಾಲಯ ಮಾತ್ರವಲ್ಲದೆ ಸಮೀಪದ ಪಂಚಮುಖಿ ಆಂಜನೇಯ, ಅಪ್ಪಣ್ಣಾಚಾರ್ಯರಿಂದ ಪ್ರತಿಷ್ಠಾಪಿತ ಬಿಚ್ಚಾಲಿಯ ಏಕಶಿಲಾ ಬೃಂದಾವನ, ಕಲ್ಲೂರಿನ ಮಹಾಲಕ್ಷ್ಮಿ ದೇಗುಲಗಳಿಗೂ ಭೇಟಿ ನೀಡಿದ್ದರು. ಬಹುತೇಕರು ರಾಜ್ಯ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಹೋದರೆ, ಕೆಲವರು, ಕಾರು ಇನ್ನಿತರ  ವಾಹನ ಗಳನ್ನು ಬಾಡಿಗೆಗೆ ಪಡೆದು ಪ್ಯಾಕೇಜ್‌ ಟೂರ್‌ ಮಾಡಿಕೊಂಡು ಬಂದರು.

ಮಂತ್ರಾಲಯಕ್ಕೆ ಬಂದವರಲ್ಲಿ ಅನೇಕರು ತಲೆ ಗೂದಲ ಮುಡಿ ಹರಿಕೆ ತೀರಿಸಿದರೆ, ಶ್ರೀರಾಘವೇಂದ್ರ ಮಠದ ಪ್ರಾಕಾರದಲ್ಲಿ ಉರುಳು ಸೇವೆ, ಹೆಜ್ಜೆ ನಮಸ್ಕಾರಗಳನ್ನು ಹಾಕಿದರು. ನದಿಯಲ್ಲಿ ನೀರು ಕಡಿಮೆ ಇದ್ದರೂ ಅನೇಕರು ದಡದಿಂದ ಒಂದು ಕಿಲೊಮೀಟರ್‌ ವರೆಗೆ ನಡೆದುಕೊಂಡು ಹೋಗಿ ತುಂಗಭದ್ರಾ ನದಿಯ ಪುಣ್ಯ ಸ್ನಾನ ಮಾಡಿಕೊಂಡು ಬಂದರು.

‘ಪರಿಮಳ ಪ್ರಸಾದದ ಎರಡು ಕೌಂಟರ್‌ನಲ್ಲಿ ಶನಿವಾರ ಸುಮಾರು ₹ 1.50 ಲಕ್ಷದಷ್ಟು ವ್ಯಾಪಾರ ಆಗಿದೆ’ ಎಂದು ಮಠದ ಮೂಲಗಳು ತಿಳಿಸಿವೆ. ‘ಸಾಹಿತ್ಯ ಸಮ್ಮೇಳನಕ್ಕೆ ಎಂಟು ವರ್ಷಗಳಿಂದ ಹಾಜರಾಗುತ್ತಿದ್ದೇವೆ. ಸಮ್ಮೇಳನ ನಡೆದ ಸ್ಥಳದ ಸಮೀಪ ಇರುವ ಪ್ರವಾಸಿ ಸ್ಥಳ ಇಲ್ಲವೇ  ದೇವಾ ಲಯಗಳಿಗೆ ಕಡ್ಡಾಯವಾಗಿ ಹೋಗು ತ್ತೇವೆ ಎಂದು ಬೆಂಗಳೂರಿನ ಚಾಮರಾಜ ಪೇಟೆಯ ವ್ಯಾಪಾರಿ ರಮೇಶ ಗುಪ್ತಾ ಹೇಳಿದರು.

ಬ್ಯಾಡ್ಜ್‌ ನಿಂದ ಗುರುತು: ‘ಸಾಮಾನ್ಯ ದಿನಗಳಲ್ಲಿ 3ರಿಂದ 5 ಸಾವಿರ ಜನರು ಬರುತ್ತಾರೆ. ಗುರುವಾರ ಮತ್ತು ವಾರಾಂತ್ಯದಲ್ಲಿ 10 ಸಾವಿರದಷ್ಟು ಭಕ್ತರು ಇರುತ್ತಾರೆ. ಶನಿವಾರ ಮತ್ತು ಭಾನುವಾರ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ. ಭಕ್ತರು ಎಷ್ಟೇ ಸಂಖ್ಯೆಯಲ್ಲಿ ಬಂದರೂ ಪ್ರಸಾದ ವಿನಿಯೋಗಕ್ಕೆ ತೊಂದರೆ ಇಲ್ಲ’ ಎಂದು ಮಠದ ವ್ಯವಸ್ಥಾಪಕ ಎಸ್‌.ಕೆ.ಶ್ರೀನಿವಾಸ ರಾವ್‌ ಹೇಳಿದರು.

ಬಸ್‌ ಸಂಚಾರ ಹೆಚ್ಚಾಳ: ‘ರಾಯ ಚೂರಿನಿಂದ ಮಂತ್ರಾಲಯಕ್ಕೆ ದಿನಾ10 ಬಸ್‌ಗಳು 60 ಟ್ರಿಪ್‌ಗಳಲ್ಲಿ ಸಂಚರಿಸು ತ್ತವೆ. ಈಗ ಇನ್ನು ಐದು  ಬಸ್‌ಗಳನ್ನು ಮತ್ತು 20 ಟ್ರಿಪ್‌ಗಳನ್ನು ಹೆಚ್ಚಿಸಲಾಗಿದೆ’ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ನಿಯಂತ್ರಕ ಸಂತೋಷಕುಮಾರ್‌ ತಿಳಿಸಿದರು.

***
ಸಮ್ಮೇಳನ ಚೆನ್ನಾಗಿದೆ. ಗೋಷ್ಠಿಗಳು ಮಿಸ್‌ ಆಗಬಾರದೆಂದು ರಾಯಚೂರಿನಿಂದ ಮೊದಲ ಬಸ್‌ಗೆ ಬಂದಿದ್ದೇವೆ. 11 ಗಂಟೆಗೆ ವಾಪಸು ಹೋಗುತ್ತೇವೆ
-ಪುನೀತಾ ನಟರಾಜ, ಕಸಾಪ ಬೆಂಗಳೂರು ಗ್ರಾಮಾಂತರ ಮಹಿಳಾ ಘಟಕದ ಅಧ್ಯಕ್ಷೆ

***
ಚಿತ್ರದುರ್ಗದಿಂದ 60 ಜನರ ತಂಡ ಬಂದಿದ್ದೇವೆ. ಇವತ್ತು ಹಲವರು ಮಂತ್ರಾಲಯ, ಪಂಚಮುಖಿ ನೋಡಲು ಬಂದೆವು
-ಹನುಮಂತಪ್ಪ, ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT