ADVERTISEMENT

ಸರ್ಕಾರಿ ಉದ್ದೇಶಕ್ಕೆ ಭೂಮಿ ನೇರ ಖರೀದಿ

ರಾಜ್ಯ ಸಚಿವ ಸಂಪುಟ ಸಭೆಯ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 23 ಮೇ 2016, 19:30 IST
Last Updated 23 ಮೇ 2016, 19:30 IST
ಸರ್ಕಾರಿ ಉದ್ದೇಶಕ್ಕೆ ಭೂಮಿ ನೇರ ಖರೀದಿ
ಸರ್ಕಾರಿ ಉದ್ದೇಶಕ್ಕೆ ಭೂಮಿ ನೇರ ಖರೀದಿ   

ಬೆಂಗಳೂರು: ಸರ್ಕಾರಿ ಉದ್ದೇಶದ ಕಾರ್ಯಗಳಿಗೆ ಸಾರ್ವಜನಿಕರಿಂದ ಗರಿಷ್ಠ 100 ಎಕರೆ ಭೂಮಿಯನ್ನು ನೇರವಾಗಿ ಖರೀದಿಸುವುದಕ್ಕೆ ಸಚಿವ ಸಂಪುಟ ಸಭೆ ಸೋಮವಾರ ಒಪ್ಪಿಗೆ ನೀಡಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ  ಬಂದ ಭೂಸ್ವಾಧೀನ ಕಾಯ್ದೆಯಿಂದಾಗಿ ಕೆಲವು ಸರ್ಕಾರಿ ಯೋಜನೆಗಳಿಗೆ ಭೂಮಿ ಪಡೆಯುವುದು   ದುಸ್ತರವಾಗಿತ್ತು. ಕಾಯ್ದೆ ಪ್ರಕಾರ ಸಂತ್ರಸ್ತರಿಗೆ ಪರಿಹಾರ ನೀಡುವುದು ಹಾಗೂ ಪುನರ್ವಸತಿ ಕಲ್ಪಿಸುವ ಬದ್ಧತೆಗಳನ್ನು ತಪ್ಪಿಸಿಕೊಳ್ಳಲು ಸರ್ಕಾರ ನೇರ ಖರೀದಿಯ ಮೊರೆ ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ಬಗ್ಗೆ ಕಾನೂನು ಸಚಿವ ಟಿ.ಬಿ.ಜಯಚಂದ್ರ  ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

‘ವಸತಿ ಯೋಜನೆ, ಆಶ್ರಯ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ, ಸ್ಮಶಾನ, ರೈಲ್ವೆ ಕಾಮಗಾರಿಗಳು, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ, ಒಳಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿ, ಬಂದರು ಅಭಿವೃದ್ಧಿ, ವಿದ್ಯುತ್‌ ಸರಬರಾಜು ಕೇಂದ್ರ ಸ್ಥಾಪನೆ ಮುಂತಾದ ಉದ್ದೇಶಗಳಿಗೆ ತುರ್ತು ಅಗತ್ಯವಿರುವ ಕಡೆ ಗರಿಷ್ಠ 100 ಎಕರೆಗಳಷ್ಟು ಭೂಮಿಯನ್ನು ಸಾರ್ವಜನಿಕರಿಂದ ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಭೂಮಿ ನೇರ ಖರೀದಿ ಕುರಿತು ನಿರ್ಣಯ ಕೈಗೊಳ್ಳುತ್ತದೆ. ಜಿಲ್ಲಾಧಿಕಾರಿಗಳು ಬೆಲೆ ಸಲಹಾ ಸಮಿತಿಯನ್ನು ರಚಿಸಿಕೊಂಡು, ಅದರ ಶಿಫಾರಸಿನ ಮೇಲೆ ಭೂಮಿ ಖರೀದಿ ನಡೆಸಲು ಅವಕಾಶ ಕಲ್ಪಸಲಾಗುವುದು’ ಎಂದು ಸಚಿವರು ವಿವರಿಸಿದರು.

ಒಪ್ಪಿಗೆ ಇದ್ದರೆ ಖರೀದಿ: ಈ ನಿರ್ಧಾರ ಯುಪಿಎ ಅವಧಿಯಲ್ಲಿ ರಚಿಸಿದ ಭೂಸ್ವಾಧೀನ ಕಾಯ್ದೆಯ ಆಶಯಗಳಿಗೆ ವಿರುದ್ಧವಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಭೂಮಾಲೀಕರ ಒಪ್ಪಿಗೆ ಇದ್ದರೆ ಮಾತ್ರ ಭೂಮಿಯನ್ನು ಖರೀದಿಸಲಾಗುತ್ತದೆ. ಅವರ ಒಪ್ಪಿಗೆ ಪಡೆದು ಭೂಮಿ ಖರೀದಿಸುವುದಕ್ಕೆ ಕಾಯ್ದೆಯಲ್ಲೂ ಅವಕಾಶ ಇದೆ’ ಎಂದು ಸಮರ್ಥಿಸಿಕೊಂಡರು.

‘ಭೂಸ್ವಾಧೀನ ಕಾಯ್ದೆ ಪ್ರಕಾರ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ನೀಡಿದರೆ, ಕೆಲವು ಯೋಜನೆಗಳು 10 ವರ್ಷಗಳಾದರೂ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಭೂಮಾಲೀಕರ ಜತೆ ಮಾತುಕತೆ ನಡೆಸಿ, ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಭೂಮಿ ನೀಡುವಂತೆ ಯಾರ ಮೇಲೂ ಒತ್ತಡ ಹೇರುವುದಿಲ್ಲ.   ತುರ್ತು ಅಗತ್ಯದ  ಕಾಮಗಾರಿಗಳನ್ನು ಪೂರ್ಣಗೊಳಿಸಲು ಇಂತಹ ಕ್ರಮ ಅನಿವಾರ್ಯ. ಸರ್ಕಾರ  ಖರೀದಿಸುವ ಭೂಮಿಗೆ ಮಾರುಕಟ್ಟೆ ಬೆಲೆಯನ್ನು ನೀಡಲಿದೆ’ ಎಂದರು.

‘ಇದಕ್ಕಾಗಿ  ಕಾಯ್ದೆ ತಿದ್ದುಪಡಿ ಅಗತ್ಯ ಇಲ್ಲ. ಸರ್ಕಾರಿ ಆದೇಶ ಹೊರಡಿಸುವ ಮೂಲಕ ಈ ನಿರ್ಧಾರವನ್ನು ಜಾರಿಗೊಳಿಸಲಾಗುವುದು’ ಎಂದರು.
ಇದು ಸರ್ಕಾರಿ ಉದ್ದೇಶಗಳಿಗೆ ಮಾತ್ರ. ಕೈಗಾರಿಕೆಗಳಿಗೆ ಸರ್ಕಾರ ಜಮೀನು ಖರೀದಿಸಿ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

‘ಗಣಿ ಹರಾಜು– ಮುದ್ರಾಂಕ, ನೋಂದಣಿ ಶುಲ್ಕ ರಿಯಾಯಿತಿ’
‘ಸಿ–ಪ್ರವರ್ಗದ 15 ಗಣಿಗಳನ್ನು 32 ವಾರಗಳ ಒಳಗೆ ಹರಾಜು ಹಾಕುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.  ಹರಾಜಿನಲ್ಲಿ ಭಾಗವಹಿಸಬೇಕಾದರೆ ಗುತ್ತಿಗೆದಾರರು ₹ 2,800 ಕೋಟಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನು ಕಂದಾಯ ಇಲಾಖೆಗೆ ಪಾವತಿಸಬೇಕು. ಹೀಗಾಗಿ ಟೆಂಡರ್‌ ಕರೆದರೂ ಯಾರೂ ಹರಾಜಿನಲ್ಲಿ  ಪಾಲ್ಗೊಳ್ಳುತ್ತಿಲ್ಲ. ಹಾಗಾಗಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನು ಕಡಿತಗೊಳಿಸುವ ಮೂಲಕ ರಿಯಾಯಿತಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ’ ಎಂದು  ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

‘ಈ ರಿಯಾಯಿತಿ ನೀಡದಿದ್ದರೆ ಗಣಿಗಳ ಹರಾಜು ನಡೆಯದು. ಸಿ–ಪ್ರವರ್ಗದ 15 ಗಣಿಗಳ ಹರಾಜಿನಿಂದ ₹ 18 ಸಾವಿರ ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ಇದನ್ನು ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ. ರಾಜ್ಯದಲ್ಲಿರುವ ಕೆಲವು ಕೈಗಾರಿಕೆಗಳೂ ಅದಿರಿನ ಕೊರತೆ ಎದುರಿಸುತ್ತಿವೆ’ ಎಂದರು. ‘ಶುಲ್ಕದಲ್ಲಿ ಎಷ್ಟು ರಿಯಾಯಿತಿ ನೀಡಬೇಕು ಎಂಬುದನ್ನು ನಿರ್ಧರಿಸಿಲ್ಲ. ಶುಲ್ಕದಲ್ಲಿ ರಿಯಾಯಿತಿ ನೀಡಲು ಮುದ್ರಾಂಕ ಮತ್ತು ನೋಂದಣಿ ಶುಲ್ಕ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ’ ಎಂದರು.

‘ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ (ಎಂಎಂಡಿಆರ್‌) ಕಾಯ್ದೆ ತಿದ್ದುಪಡಿ ಬಳಿಕ ವರ್ಷಕ್ಕೆ 30 ಲಕ್ಷ ಟನ್‌ನಷ್ಟು ಅದಿರನ್ನು ತೆಗೆಯುವುದಕ್ಕೆ ಮಾತ್ರ ಅವಕಾಶವಿದೆ.  ರಾಜ್ಯದಲ್ಲಿರುವ ಸಿ ಪ್ರವರ್ಗದ 15 ಗಣಿಗಳನ್ನು 30 ವರ್ಷಗಳ ಅವಧಿಗೆ ಹರಾಜು ಹಾಕಿದರೆ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ಮೊತ್ತ  ₹ 21 ಕೋಟಿ  ಮಾತ್ರ ಆಗುತ್ತದೆ. ಆದರೆ, ಎಂಎಂಡಿಆರ್‌ ಕಾಯ್ದೆ ತಿದ್ದುಪಡಿ ಬಳಿಕ ಗಣಿಗಳ ಗುತ್ತಿಗೆ ಅವಧಿಯನ್ನು 50 ವರ್ಷ ಅವಧಿಗೆ ವಿಸ್ತರಿಸಲಾಗಿದೆ. ಹಾಗಾಗಿ ಶುಲ್ಕದ ಮೊತ್ತ ₹ 2,800 ಕೋಟಿ ಆಗುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT