ADVERTISEMENT

ಸರ್ಕಾರ – ನರ್ಸಿಂಗ್ ಕೌನ್ಸಿಲ್‌ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

ಬೆಂಗಳೂರು: ನರ್ಸಿಂಗ್‌ ಕಾಲೇಜುಗಳಿಗೆ ಮಾನ್ಯತೆ ನೀಡುವ ಸಂಬಂಧ ರಾಜ್ಯ ಸರ್ಕಾರ ಮತ್ತು ಭಾರತೀಯ ನರ್ಸಿಂಗ್ ಕೌನ್ಸಿಲ್‌ (ಐಎನ್‌ಸಿ) ಮಧ್ಯೆ ನಡೆಯುತ್ತಿರುವ ಜಟಾಪಟಿಯಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ರಾಜ್ಯದ ಎಲ್ಲ ನರ್ಸಿಂಗ್ ಕಾಲೇಜು ಪಟ್ಟಿಯನ್ನು ಭಾರತೀಯ ನರ್ಸಿಂಗ್‌ ಕೌನ್ಸಿಲ್‌ ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಅಲ್ಲದೆ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹೆಸರನ್ನೂ ಕೈಬಿಟ್ಟಿದೆ.

ಇದನ್ನು ವಿರೋಧಿಸಿ ಅನೇಕ ಕಾಲೇಜುಗಳು, ತರಬೇತಿ ಪಡೆದ ಭಾರತೀಯ ಶುಶ್ರೂಷಕರ ಸಂಘಟನೆಗಳು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದು, ಪ್ರಕರಣ ನಡೆಯುತ್ತಿದೆ.

ADVERTISEMENT

ಏನಿದು ವಿವಾದ?: ‘ರಾಜ್ಯದಲ್ಲಿನ ನರ್ಸಿಂಗ್‌ ಕಾಲೇಜುಗಳು ನರ್ಸಿಂಗ್‌ ಕೋರ್ಸ್‌ಗಳನ್ನು ನಡೆಸುವುದಕ್ಕೆ ಐಎನ್‌ಸಿ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ 2016ರ ಡಿಸೆಂಬರ್‌ನಲ್ಲಿ ಆದೇಶ ಮಾಡಿತ್ತು.

ಇದಕ್ಕೆ ಪ್ರತಿಯಾಗಿ, ‘ದೇಶದ ಪ್ರತಿ ನರ್ಸಿಂಗ್‌ ಕಾಲೇಜು ಐಎನ್‌ಸಿ ಮಾನ್ಯತೆ ಪಡೆಯಲೇಬೇಕು. ಒಂದು ವೇಳೆ ಮಾನ್ಯತೆ ಇಲ್ಲದೆ ಕೋರ್ಸ್‌ ನಡೆಸಿದರೆ ಅದು ಅಧಿಕೃತ ಅಲ್ಲ’ ಎಂದು ಪರಿಷತ್ತು ಕಳೆದ ಮಾರ್ಚ್‌ 17ರಂದು ರಾಜ್ಯದ ಎಲ್ಲ ನರ್ಸಿಂಗ್‌ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿತ್ತು.

‘ಐಎನ್‌ಸಿ ಮಾನ್ಯತೆ ಇಲ್ಲದ ಕಾಲೇಜುಗಳಲ್ಲಿ ನರ್ಸಿಂಗ್‌ ಪದವಿ ಪಡೆಯುವ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಇತರೆ ರಾಜ್ಯಗಳ ನರ್ಸಿಂಗ್‌ ಕೌನ್ಸಿಲ್‌ ಅಥವಾ ಹೊರ ದೇಶಗಳಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹರಲ್ಲ. ಪದವಿ ಪಡೆದ ರಾಜ್ಯದಲ್ಲಿ ಮಾತ್ರ ಉದ್ಯೋಗ ಪಡೆದುಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರ ಮತ್ತು ಕೆಎಂಜೆ ನರ್ಸಿಂಗ್‌ ಕಾಲೇಜು ಮಧ್ಯದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಈ ಆದೇಶ ನೀಡಿದೆ’ ಎಂದು ಕಾಲೇಜುಗಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.

‘ರಾಜ್ಯದಲ್ಲಿ ಬಿ.ಎಸ್ಸಿ ನರ್ಸಿಂಗ್, ಎಂ.ಎಸ್ಸಿ ನರ್ಸಿಂಗ್, ಪಿ.ಎಚ್‌ಡಿ–ನರ್ಸಿಂಗ್‌ ಮಾಡುವ ಶೇ 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೇರಳ, ತಮಿಳುನಾಡು, ಮಣಿಪುರ, ಗುಜರಾತ್, ರಾಜಸ್ಥಾನ, ಗೋವಾ, ಮಹಾರಾಷ್ಟ್ರದಿಂದ ಬಂದಿರುತ್ತಾರೆ. ಇಲ್ಲಿ ಓದಿದವರಿಗೆ ಹೊರ ರಾಜ್ಯ ಅಥವಾ ದೇಶಗಳಲ್ಲಿ ಮಾನ್ಯತೆ ಇಲ್ಲದಿದ್ದರೆ ತೊಂದರೆ ಆಗುತ್ತದೆ’ ಎಂದು ಅನೇಕ ಕಾಲೇಜುಗಳು ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಅಳಲು ತೋಡಿಕೊಂಡಿವೆ.

ಮಾನ್ಯತೆ ನೀಡುವುದು ಐಎನ್‌ಸಿ ಕೆಲಸವಲ್ಲ: ವಿ. ಮಂಜುಳಾ
‘ನರ್ಸಿಂಗ್‌ ಕೋರ್ಸ್‌ಗಳ ಪಠ್ಯ, ಗುಣಮಟ್ಟದ ಶಿಕ್ಷಣ, ಹೊಸ ಕೋರ್ಸ್‌ಗಳ ರಚನೆಯಷ್ಟೇ ಭಾರತೀಯ ನರ್ಸಿಂಗ್‌ ಕೌನ್ಸಿಲ್‌ ಕೆಲಸ. ಕಾಲೇಜುಗಳಿಗೆ ಮಾನ್ಯತೆ ನೀಡುವುದು ಅದರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನರ್ಸಿಂಗ್‌ ಕಾಲೇಜುಗಳು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮತ್ತು ನರ್ಸಿಂಗ್‌ ಶಾಲೆಗಳು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಿಂದ ಅನುಮತಿ ಪಡೆದು ನಡೆಯುತ್ತವೆ. ಸದ್ಯ ಪ್ರಕರಣ ಹೈಕೋರ್ಟ್‌ನಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಮಾನ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಭಾರತೀಯ ನರ್ಸಿಂಗ್ ಕೌನ್ಸಿಲ್‌ ತನ್ನ ವೆಬ್‌ಸೈಟ್‌ನಲ್ಲಿ ರಾಜ್ಯದ ನರ್ಸಿಂಗ್‌ ಕಾಲೇಜುಗಳು ಮತ್ತು ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಹೆಸರನ್ನು ಕೈಬಿಟ್ಟಿರುವ ಕ್ರಮ ಸರಿಯಲ್ಲ ಎಂದು ಪರಿಷತ್ತಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದೂ ಮಂಜುಳಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.