ADVERTISEMENT

ಸಹಕಾರ ಸಂಘಗಳಲ್ಲಿ ಭಾರಿ ಪ್ರಮಾಣದ ‘ಕ್ಯಾಷ್‌ ಜಾಮ್‌’

ಎಸ್.ರವಿಪ್ರಕಾಶ್
Published 29 ನವೆಂಬರ್ 2016, 19:30 IST
Last Updated 29 ನವೆಂಬರ್ 2016, 19:30 IST
ಸಹಕಾರ ಸಂಘಗಳಲ್ಲಿ ಭಾರಿ ಪ್ರಮಾಣದ ‘ಕ್ಯಾಷ್‌ ಜಾಮ್‌’
ಸಹಕಾರ ಸಂಘಗಳಲ್ಲಿ ಭಾರಿ ಪ್ರಮಾಣದ ‘ಕ್ಯಾಷ್‌ ಜಾಮ್‌’   

ಬೆಂಗಳೂರು: ರಾಜ್ಯದ ವಿವಿಧ ಸಹಕಾರಿ ಸಂಘಗಳಲ್ಲಿ ಅಪಾರ ಪ್ರಮಾಣದಲ್ಲಿ ಹಣವನ್ನು ಇಟ್ಟು ಇಕ್ಕಟ್ಟಿಗೆ ಸಿಲುಕಿರುವ ಪ್ರಭಾವಿಗಳು ಮತ್ತು  ರಾಜಕಾರಣಿಗಳು ಹಣ ವಿನಿಮಯಕ್ಕೆ ಅವಕಾಶ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.

ಸಹಕಾರ ಸಂಘಗಳು ಅದರಲ್ಲೂ ಸೌಹಾರ್ದ ಸಹಕಾರ ಸಂಘಗಳ ಜತೆ ನೇರ ಸಂಬಂಧ ಹೊಂದಿರುವ ಎಲ್ಲ ಪಕ್ಷಗಳ ರಾಜಕಾರಣಿಗಳು  ಹಣ ವನ್ನು ವಿನಿಮಯಕ್ಕೆ ಅವಕಾಶ ಕೊಡ ಬೇಕು, ಇದಕ್ಕಾಗಿ ಕೇಂದ್ರದ ಮೇಲೆ  ಒತ್ತಡ ಹೇರುವಂತೆ ಮುಖ್ಯಮಂತ್ರಿ ಯವರಿಗೆ ದುಂಬಾಲು ಬಿದ್ದಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇದರಿಂದಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ.

ಕೇರಳದಂತೆ ಕರ್ನಾಟಕದಲ್ಲೂ ಸಹಕಾರ ಸಂಘಗಳಲ್ಲಿ ಧನಿಕರ ಸಾವಿರಾರು ಕೋಟಿ ಹಣ ಜಮೆಯಾಗಿದ್ದು, ಆರ್‌ಬಿಐ ನಿರ್ದೇಶನದಿಂದಾಗಿ ‘ಕ್ಯಾಷ್‌ ಜಾಮ್‌’ ಆಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು ಮತ್ತು ಕೃಷಿ ಪತ್ತಿನ ಸಂಘಗಳು ಬ್ಯಾಂಕುಗಳಂತೆ ಅಲ್ಲ. ಇವುಗಳ  ಮೇಲೆ ಸರ್ಕಾರದ್ದಾಗಲಿ ಅಥವಾ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿಯಂತ್ರಣವಿಲ್ಲ. ಅಂತಹದ್ದೊಂದು ‘ಸ್ವಾತಂತ್ರ್ಯ’ ಸಹಕಾರ ಸಂಘಗಳಿಗೆ ಲಭಿಸಿದೆ.  ಸಾಕಷ್ಟು ಸಹಕಾರ ಸಂಘಗಳು ಆದರ್ಶಕ್ಕೆ ಅನುಗುಣವಾಗಿ ನಡೆಯುತ್ತಿದ್ದರೂ ಉಳಿದವು ರಾಜಕಾರಣಿಗಳು ಮತ್ತು ಪ್ರಭಾವಿಗಳ ಹಿಡಿತದಲ್ಲಿವೆ ಎನ್ನುತ್ತವೆ ಮೂಲಗಳು.

ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದ ಹಣದ ವಹಿವಾಟು ನಡೆಸುವಾಗ  ಪ್ಯಾನ್‌ ಕಾರ್ಡ್‌ ಕಡ್ಡಾಯ. ಆದರೆ ಸಹಕಾರ ಸಂಘಗಳಲ್ಲಿ ಅದರ ಕಡ್ಡಾಯವಿಲ್ಲ. ಲಕ್ಷ ಅಥವಾ ಕೋಟಿಗಟ್ಟಲೆ ಠೇವಣಿ ಇಟ್ಟರೂ ಆದಾಯ ತೆರಿಗೆ ಇಲಾಖೆ ಪ್ರಶ್ನಿಸುವಂತಿಲ್ಲ. ಹಣದ ವ್ಯವಹಾರಕ್ಕೆ ಪ್ಯಾನ್‌ ಪಡೆಯುವುದು ಕಡ್ಡಾಯ ಮಾಡಲು ಹೊರಟಾಗ ಸಹಕಾರ ವಲಯದ ಪ್ರಭಾವಿಗಳು ಅದನ್ನು ವಿರೋಧಿಸಿದ್ದರು ಎಂದು ಹೆಸರು ಹೇಳಲು ಬಯಸದ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ನ. 8 ರಂದು ₹ 500 ಮತ್ತು ₹ 1000 ಹಳೆ ನೋಟುಗಳ ರದ್ದು ಮಾಡಲಾಯಿತು. ಒಂದೆರಡು ದಿನಗಳ ಅಂತರದಲ್ಲಿ ಸಹಕಾರ ಸಂಘಗಳಲ್ಲಿ ಹಣ  ವಿನಿಮಯಕ್ಕೆ ನಿರ್ಬಂಧ ವಿಧಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಆದೇಶ ಹೊರಡಿಸಿತು. ಆ ಆದೇಶದಿಂದಾಗಿ ಸಹಕಾರ ಸಂಘಗಳು ಅಡ್ಡ ಕತ್ತರಿಯಲ್ಲಿ ಸಿಕ್ಕಿದಂತಾಗಿವೆ ಎನ್ನುತ್ತವೆ ಮೂಲಗಳು.

ಸಮಸ್ಯೆ ಹೇಗೆ ?: ಸಹಕಾರ ತತ್ವದಡಿ ಸಹಕಾರ ಸಂಘಗಳು ಜನ ಸಾಮಾನ್ಯರ ಅನುಕೂಲಕ್ಕಾಗಿ ಎಂಬ ಧ್ಯೇಯ ಹೊಂದಿದ್ದರೂ, ಸಾಕಷ್ಟು ಸಹಕಾರ ಸಂಘಗಳ ಮೇಲೆ ಪ್ರಬಲ ಹಿಡಿತ ಹೊಂದಿರುವವರು ಸ್ಥಳೀಯ ರಾಜಕಾರಣಿಗಳು, ಅವರ ಕುಟುಂಬದವರು ಮತ್ತು  ಪ್ರಭಾವಿಗಳು. ಪ್ರಧಾನಿಯವರು ನೋಟು ಬದಲಾವಣೆಯ ಘೋಷಣೆ ಮಾಡುತ್ತಿದ್ದಂತೆ  ಸಾಕಷ್ಟು  ಜನ ತಮ್ಮಲ್ಲಿದ್ದ ಹಳೆ ನೋಟುಗಳನ್ನು ಸಹಕಾರ ಸಂಘಗಳಲ್ಲಿ ತರಾತುರಿಯಲ್ಲಿ ಜಮೆ ಮಾಡಿದ್ದು ಒಂದು ಭಾಗವಾದರೆ, ಇದಕ್ಕೂ ಮೊದಲೇ ಸಾಕಷ್ಟು ಹಣ ಠೇವಣಿ ರೂಪದಲ್ಲಿ ಇಟ್ಟಿದ್ದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಸಹಕಾರ ಸಂಘಗಳಲ್ಲಿ ಹಣ  ವಿನಿಮಯಕ್ಕೆ ಅನುಮತಿ ನಿರಾಕರಿಸಿದ ಪರಿಣಾಮ ಸಾವಿರಾರು ಕೋಟಿ ರೂಪಾಯಿ ಸಹಕಾರಿ ಬ್ಯಾಂಕ್‌ಗಳಲ್ಲಿ ಉಳಿದುಕೊಂಡಿದೆ. ಅದನ್ನು ಬದಲಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತವೆ ಮೂಲಗಳು.

ವಿಶೇಷವಾಗಿ ಸೌಹಾರ್ದ ಸಹಕಾರ ಸಂಘಗಳಲ್ಲಿ ಹಣ ಇಟ್ಟಿರುವ  ಪ್ರಭಾವಿಗಳ ಸಂಕಷ್ಟ ಈಗ ಹೇಳ ತೀರದು. ಆರಂಭದಲ್ಲಿ ಒಂದಷ್ಟು ಹಣ ಬದಲಿಸಿಕೊಂಡ ಇವರು, ಬಳಿಕ  ಬದಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಸಹಕಾರ ಸಂಘಗಳಲ್ಲಿ ಮತ್ತು  ಸೌಹಾರ್ದ ಸಹಕಾರ ಸಂಘಗಳಲ್ಲಿ ಆದಾಯ ತೆರಿಗೆ ಇಲಾಖೆ ದೃಷ್ಟಿ ಹಾಯಿಸುವುದಿಲ್ಲ ಮತ್ತು  ತೆರಿಗೆ ಕಟ್ಟಬೇಕಾಗಿಲ್ಲ ಎಂಬ ಕಾರಣಕ್ಕೆ ಹಿಂದಿನಿಂದಲೂ ಭಾರಿ ಮೊತ್ತದ ಹಣ ಠೇವಣಿ ಇರಿಸುತ್ತಿದ್ದರು. ಇಂತಹ ಸಂಘಗಳಲ್ಲಿ  ಪಿಗ್ಮಿ ಸಂಗ್ರಹಕ್ಕೆ ಮತ್ತು ಠೇವಣಿ ಇಡುವುದಕ್ಕೆ ಕಾನೂನಿನಡಿ ಅವಕಾಶ ಇಲ್ಲ. ಆದರೂ ಇವೆಲ್ಲ ನಡೆಯುತ್ತವೆ ಎನ್ನುತ್ತವೆ ಮೂಲಗಳು. 

‘ಸೌಹಾರ್ದ ಸಹಕಾರ ಕಾಯ್ದೆ 1997 ರ ಅನ್ವಯ ಸೌಹಾರ್ದ ಸಹಕಾರ ಸಂಘಗಳ ಮೇಲೆ ಸರ್ಕಾರ ಅಥವಾ ಆರ್‌ಬಿಐನ ಯಾವುದೇ ನಿಯಂತ್ರಣವಿಲ್ಲ. ಒಂದು ರೀತಿ ಪ್ರೈವೆಟ್‌ ಲಿಮಿಟೆಡ್‌ನಂತೆ. ಸಂಘದ ಆಡಳಿತ ಮಂಡಳಿ ಮೇಲೆ ಯಾವುದೇ ದೂರು ಬಂದರೂ, ಸರ್ಕಾರದಿಂದ  ತನಿಖೆ ನಡೆಸಲು ಸಾಧ್ಯವಿಲ್ಲ. ಹಾಗೆ ಆಗಬೇಕಾಗಿದ್ದಲ್ಲಿ 10 ಜನ ಆಡಳಿತ ಮಂಡಳಿ ಸದಸ್ಯರಲ್ಲಿ ಒಂಭತ್ತು ಮಂದಿ ದೂರು ನೀಡಿದರೆ ಮಾತ್ರ ತನಿಖೆ ನಡೆಸಬಹುದು. ಇಂತಹದ್ದೊಂದು ಕಾಯ್ದೆಯ ರಕ್ಷಣೆ ಸಹಕಾರ ಸಂಘಗಳಿಗಿದೆ ಎನ್ನುತ್ತವೆ ಮೂಲಗಳು.

ಸಹಕಾರ ಇಲಾಖೆಯ ಮೂಲಗಳ ಪ್ರಕಾರ,  ‘ನ. 8 ರಂದು  ಪ್ರಧಾನಿಯವರು ₹ 500 ಮತ್ತು ₹ 1000 ದ ನೋಟುಗಳ ರದ್ದತಿ  ಪ್ರಕಟಿಸುತ್ತಿದ್ದಂತೆ, ಬಹಳಷ್ಟು ಸಹಕಾರ ಸಂಘಗಳಲ್ಲಿ  ಭಾರಿ ಪ್ರಮಾಣದಲ್ಲಿ ಹಳೇ ನೋಟುಗಳು  ಜಮೆ ಆಗಿವೆ. ಜನಸಾಮಾನ್ಯರಿಗೆ ತೊಂದರೆ ಆಗದಿರಲಿ ಎಂದು  ಸಹಕಾರ ಸಂಘಗಳಿಗೆ  ಬ್ಯಾಂಕುಗಳಿಂದ  ಹೊಸ ನೋಟುಗಳ ಬಿಡುಗಡೆ  ಆಯಿತು.  ಆದರೆ, ಹೀಗೆ ಬಿಡುಗಡೆ ಆದ ಹಣ ಬಡವರಿಗಿಂತ ಶ್ರೀಮಂತರು ಅಥವಾ ಆಡಳಿತ ಮಂಡಳಿಯವರು ಬದಲಿಸಿಕೊಂಡಿದ್ದೇ ಹೆಚ್ಚು.

ಸಹಕಾರ ಸಂಘಗಳಲ್ಲಿ ದೊಡ್ಡ ಮೊತ್ತದ ಹಣ ಇಡುವವರಿಗೆ ಇರುವ ಸಮಾಧಾನ ಎಂದರೆ, ಇಟ್ಟ ಹಣಕ್ಕೆ ಆದಾಯ ತೆರಿಗೆ ಇಲಾಖೆಗೆ ಟಿಡಿಎಸ್‌ ಪಾವತಿಸುವುದು ಕಡ್ಡಾಯ ಅಲ್ಲ. ಪ್ಯಾನ್‌ ಸಂಖ್ಯೆ ಕೊಡುವುದೂ ಕಡ್ಡಾಯವಿಲ್ಲ. ಇದರಿಂದಾಗಿ ಯಾರು ಎಷ್ಟು ಮೊತ್ತ ಇಡುತ್ತಾರೆ ಮತ್ತು ತೆಗೆಯುತ್ತಾರೆ ಎಂಬ ವಹಿವಾಟಿನ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಸಿಗುವುದಿಲ್ಲ. ಆದರೆ, ಸಹಕಾರಿ ಬ್ಯಾಂಕುಗಳಲ್ಲಿ  ಪ್ಯಾನ್‌ ನೀಡುವುದು ಕಡ್ಡಾಯ.  ಸಹಕಾರ ಸಂಘ ಮತ್ತು ಸೌಹಾರ್ದ ಸಹಕಾರ ಸಂಘಗಳಲ್ಲಿ ಈ ಕಾನೂನಿನ ದುರುಪಯೋಗ ಮಾಡಿಕೊಂಡು, ಕೋಟ್ಯಂತರ ರೂಪಾಯಿಗಳನ್ನು ವಹಿವಾಟು ನಡೆಸುತ್ತಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಸಹಕಾರ ಕ್ಷೇತ್ರದಲ್ಲೂ ಕಪ್ಪು ಹಣ ಚಲಾವಣೆ ಆಗುತ್ತಿರಬಹುದು ಎಂಬ ಕಾರಣಕ್ಕೆ ರಿಸರ್ವ್‌ ಬ್ಯಾಂಕ್‌ ಸಹಕಾರ ವಲಯದಲ್ಲಿ ಹಣದ ವಹಿವಾಟಿನ ಮೇಲೆ ನಿರ್ಬಂಧ ಹಾಕಿರಬಹುದು. ಆದರೆ, ಪ್ರಾಮಾಣಿಕವಾಗಿ ನಡೆಯುತ್ತಿರುವ ಸಹಕಾರ ಸಂಘಗಳಲ್ಲಿ ಜನ ಸಾಮಾನ್ಯರಿಗೆ ತೊಂದರೆ ಆಗಿದೆ ಎಂದು ತಿಳಿಸಿದರು.

‘ರೈತರು ಕಂತು ಕಟ್ಟುವ ಸಮಯ. ಕಂತು ಪಾವತಿ ಮಾಡಿಲ್ಲ ಎಂದರೆ ಇನ್‌ಪುಟ್‌ ಸಬ್ಸಿಡಿ ಸಿಗುವುದು ಕಷ್ಟ. ಹಳೆ ನೋಟುಗಳ ರದ್ದತಿಗೆ ನಮ್ಮ ವಿರೋಧವಿಲ್ಲ. ತಕ್ಷಣವೇ ಹಣದ ಹರಿವು ಹೆಚ್ಚಿಸಬೇಕು. ಇಲ್ಲದಿದ್ದಲ್ಲಿ  ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳು ಆಪತ್ತಿಗೆ ಸಿಲುಕುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.