ADVERTISEMENT

ಸಹಾಯಕ ನಿರ್ದೇಶಕಿ ಸೇರಿ ಇಬ್ಬರ ವಿಚಾರಣೆ

ಕಲಬುರ್ಗಿ ಹತ್ಯೆ ಪ್ರಕರಣ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 19:41 IST
Last Updated 4 ಸೆಪ್ಟೆಂಬರ್ 2015, 19:41 IST

ಬೆಳಗಾವಿ: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಮಹಿಳಾ ಅಧಿಕಾರಿಯೊಬ್ಬರು ಸೇರಿದಂತೆ ಇಬ್ಬರನ್ನು ಶುಕ್ರವಾರ ನಗರದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರನ್ನು ಮಧ್ಯಾಹ್ನ ಜಿಲ್ಲೆಯ ಕಿತ್ತೂರಿನಲ್ಲಿ ಅರ್ಧ ಗಂಟೆ ವಿಚಾರಣೆಗೆ ಒಳಪಡಿಸಲಾಗಿದೆ.

‘ಮಧ್ಯಾಹ್ನ 1 ಗಂಟೆಯ ವೇಳೆಗೆ ದೂರವಾಣಿ ಕರೆ ಮಾಡಿ ನನ್ನನ್ನು ಕರೆಸಿಕೊಂಡ ಸಿಐಡಿ ಅಧಿಕಾರಿಗಳು, ಕಿತ್ತೂರು ಬಳಿ ಕರೆದೊಯ್ದು ಅರ್ಧ ಗಂಟೆ ವಿಚಾರಣೆ ನಡೆಸಿದರು’ ಎಂದು ವಿದ್ಯಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಾ.ಬಸವರಾಜ ಕಟ್ಟೀಮನಿ ಹಾಗೂ ಡಾ.ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನಗಳ ಕಾರ್ಯ ಚಟುವಟಿಕೆ ಹಾಗೂ ಡಾ. ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಡಾ.ಎಂ.ಎಂ. ಕಲಬುರ್ಗಿ ಅವರೊಂದಿಗೆ ನಿಮ್ಮ ಒಡನಾಟ ಹೇಗಿತ್ತು? ಎಂದು ಸಿಐಡಿ ಅಧಿಕಾರಿಗಳು ಪ್ರಶ್ನಿಸಿ ಮಾಹಿತಿ ಪಡೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಆಗಿದ್ದ ನಾನು ಎರಡೂ ಪ್ರತಿಷ್ಠಾನಗಳ ಸದಸ್ಯ ಕಾರ್ಯದರ್ಶಿಯೂ ಆಗಿದ್ದೆ. ಪ್ರತಿಷ್ಠಾನಗಳ ಕಾರ್ಯ ಚಟುವಟಿಕೆ, ಸಭೆ, ಸಮಾರಂಭ ಮತ್ತು ಪ್ರತಿಯೊಂದು ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ನಾನು ಹಾಜರಿರುತ್ತಿದ್ದೆ. ಡಾ.ಕಲಬುರ್ಗಿ ಅವರು ನನ್ನೊಂದಿಗೆ ಆಪ್ತವಾಗಿದ್ದರು. ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದರು’ ಎಂದರು.

‘ಡಾ. ಕಲಬುರ್ಗಿ ಅವರು ನನ್ನ ತಂದೆಯ ಸಮಾನರಾಗಿದ್ದರು. ಅವರ ಹತ್ಯೆ ನಡೆದಿರುವುದು ನನಗೂ ಸಾಕಷ್ಟು ದುಃಖ ತಂದಿದೆ. ಅವರ ಕೊಲೆ ಪ್ರಕರಣದಲ್ಲಿ ನನ್ನನ್ನೇಕೆ ವಿಚಾರಣೆ ನಡೆಸಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಅವರು ಹೇಳಿದರು.

ಇನ್ನೊಬ್ಬ ವಶಕ್ಕೆ: ಕನ್ನಡಪರ ಸಂಘಟನೆಯೊಂದರ ಸದಸ್ಯ, ರಾಯಬಾಗ ಮೂಲದ ಅನಂತ ಬ್ಯಾಕೋಡ ಎಂಬುವವರನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾವತಿ ಭಜಂತ್ರಿ ಅವರು ಅನಂತ ಅವರ ವಾಹನವನ್ನು ಇಲಾಖೆ ವತಿಯಿಂದ ಬಾಡಿಗೆಗೆ ಪಡೆದಿದ್ದರು. ಅನೇಕ ಬಾರಿ ಅವರು ಪ್ರವಾಸ ಹೋಗುವಾಗ ಅನಂತ್‌ ಅವರೇ ವಾಹನ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಇವರಿಬ್ಬರ ವಿಚಾರಣೆ ನಡೆಸಿರುವ ಕುರಿತು ಸಿಐಡಿ ಅಧಿಕಾರಿಗಳು  ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
*
ವಾಟ್ಸ್‌ ಆ್ಯಪ್‌ನಲ್ಲಿ ಮಾತುಕತೆ
ಪ್ರತಿಷ್ಠಾನದ ಕಚೇರಿಯನ್ನು ತೆರವುಗೊಳಿಸಿದ್ದರ ಕುರಿತು ಡಾ.ಕಲಬುರ್ಗಿ ಅವರು ಪತ್ರಕರ್ತರೊಬ್ಬರೊಂದಿಗೆ ದೂರವಾಣಿಯಲ್ಲಿ ನಡೆಸಿದ ಮಾತುಕತೆಯ ವಿವರವಾದ ಧ್ವನಿ ಸುರುಳಿ ಶುಕ್ರವಾರ ಬೆಳಿಗ್ಗೆಯಿಂದ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದೆ.
‘ವಿದ್ಯಾವತಿ ಭಜಂತ್ರಿ ಅವರು ಡಾ.ಕಟ್ಟೀಮನಿ ಪ್ರತಿಷ್ಠಾನ ಹಾಗೂ ಡಾ.ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನಗಳ ಸದಸ್ಯ ಕಾರ್ಯದರ್ಶಿಯಾಗಿದ್ದರು. ಆದರೆ, ಪ್ರತಿಷ್ಠಾನಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬರು ಅನೇಕ ಬಾರಿ ಪ್ರತಿಷ್ಠಾನದ ಕಚೇರಿಯ ಬಾಗಿಲನ್ನು ತೆರೆದು ಒಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಹಲವಾರು ಬಾರಿ ಅವರೊಂದಿಗೆ ವಿದ್ಯಾವತಿ ಅವರೂ ಇದ್ದರು ಎಂಬುದು ಗೊತ್ತಾಗಿತ್ತು. ಒಮ್ಮೆ ನನ್ನ ಕಣ್ಣೆದುರೇ ಅವರು ಆಪ್ತರೊಂದಿಗೆ ಇದ್ದದ್ದು ಕಂಡುಬಂದಿದ್ದರಿಂದ ಇಬ್ಬರಿಗೂ ಬುದ್ಧಿಮಾತು ಹೇಳಿದ್ದೆ. ಅದೇ ಕಾರಣದಿಂದ ನಮ್ಮ ಕಚೇರಿಯನ್ನು ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿತ್ತು’ ಎಂದು ಕಲಬುರ್ಗಿ ಅವರು ನೋವು ತೋಡಿಕೊಂಡಿರುವುದು ಈ ಟೇಪ್‌ನಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.