ADVERTISEMENT

ಸಾಕ್ಷ್ಯಚಿತ್ರ ಪೂರ್ಣಗೊಳ್ಳುವುದು ಅನುಮಾನ

ವಿಧಾನಸೌಧ ವಜ್ರಮಹೋತ್ಸವ ಬಜೆಟ್‌ ಕಡಿತ: ನಿರ್ದೇಶಕರಿಗೆ ಇನ್ನೂ ಸಿಗದ ಮಾಹಿತಿ

ಪದ್ಮನಾಭ ಭಟ್ಟ‌
Published 20 ಅಕ್ಟೋಬರ್ 2017, 19:46 IST
Last Updated 20 ಅಕ್ಟೋಬರ್ 2017, 19:46 IST
ಗಿರೀಶ ಕಾಸರವಳ್ಳಿ, ಟಿ.ಎನ್‌. ಸೀತಾರಾಮ್‌, ಕೆ.ಬಿ. ಕೋಳಿವಾಡ
ಗಿರೀಶ ಕಾಸರವಳ್ಳಿ, ಟಿ.ಎನ್‌. ಸೀತಾರಾಮ್‌, ಕೆ.ಬಿ. ಕೋಳಿವಾಡ   

ಬೆಂಗಳೂರು: ವಿಧಾನಸೌಧ ಕಟ್ಟಡ ನಿರ್ಮಾಣದ ಕುರಿತಾಗಿ ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ರೂಪಿಸುತ್ತಿರುವ ಸಾಕ್ಷ್ಯಚಿತ್ರ, ಬಜೆಟ್‌ ಕಡಿತದ ಕಾರಣದಿಂದ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಸಾಕ್ಷ್ಯಚಿತ್ರ ಬಜೆಟ್‌ ಕಡಿತದ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ಒಂದೊಮ್ಮೆ ಬಜೆಟ್‌ ಕಡಿತದ ಸುದ್ದಿ ನಿಜವೇ ಆಗಿದ್ದರೆ ಈ ಸಾಕ್ಷ್ಯಚಿತ್ರದ ಕೆಲಸ ಪೂರ್ಣಗೊಳಿಸುವುದು ನನ್ನಿಂದ ಸಾಧ್ಯವಿಲ್ಲ. ಇಲ್ಲಿಯವರೆಗೆ ಮಾಡಿರುವ ದೃಶ್ಯ ತುಣುಕುಗಳನ್ನು ಒಪ್ಪಿಸಿ, ಹೇಗೆ ಬೇಕೋ ಹಾಗೆ ಸಂಕಲನ ಮಾಡಿಕೊಳ್ಳಿ ಎಂದು ಬಿಟ್ಟುಬಿಡುತ್ತೇನೆ’ ಎಂದು ಹೇಳಿದರು.

‘ನಾಲ್ಕೈದು ತಿಂಗಳಿನಿಂದ ಈ ಸಾಕ್ಷ್ಯಚಿತ್ರದ ತಯಾರಿಯಲ್ಲಿ ತೊಡಗಿಕೊಂಡಿದ್ದೇವೆ. ಕಳೆದ ಎರಡು ತಿಂಗಳಿನಿಂದ ಚಿತ್ರೀಕರಣ ನಡೆಸಿದ್ದೇವೆ. ನನ್ನ ಸಿನಿಮಾ ಆಗಿದ್ದರೆ ಸಾಮಾನ್ಯ ಕ್ಯಾಮೆರಾ ಬಳಸಿಕೊಳ್ಳುತ್ತಿದ್ದೆ. ಆದರೆ ಈ ಸಾಕ್ಷ್ಯಚಿತ್ರವನ್ನು ಸ್ವಲ್ಪ ಅದ್ದೂರಿಯಾಗಿಯೇ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ದುಬಾರಿ ಕ್ಯಾಮೆರಾಗಳನ್ನೇ ಬಳಸಿಕೊಡಿದ್ದೇವೆ. ಸರ್ಕಾರ ಮೊದಲು ನೀಡಿದ್ದ ಬಜೆಟ್‌ಗೆ ಅನುಗುಣವಾಗಿ ತಂತ್ರಜ್ಞರು, ಕೆಲಸಗಾರರಿಗೆ ಸಂಭಾವನೆ ಕೊಡುವುದಾಗಿ ಒಪ್ಪಿಕೊಂಡಿದ್ದೇನೆ. ಸಾಕಷ್ಟು ಆ್ಯನಿಮೇಷನ್‌ ಕೆಲಸಗಳೂ ಇವೆ. ಈಗ ಒಮ್ಮಿಂದೊಮ್ಮೆಲೇ ಬಜೆಟ್‌ ಕಡಿತಗೊಳಿಸಿದರೆ ಅವರಿಗೆಲ್ಲ ನಾನು ಉತ್ತರ ಕೊಡಬೇಕಾಗುತ್ತದೆ. ಸಣ್ಣಮಟ್ಟದ ಕಡಿತವಾದರೆ ಹೇಗೋ ಸಂಭಾಳಿಸಬಹುದು. ಆದರೆ ಶೇಕಡ 60ರಿಂದ 70ರಷ್ಟು ಕಡಿತಗೊಳಿಸಿಬಿಟ್ಟರೆ ಕೆಲಸ ಮುಂದುವರಿಸುವುದು ಕಷ್ಟವಾಗುತ್ತದೆ’ ಎಂದು ಎದುರಾಗಬಹುದಾದ ತೊಂದರೆಗಳನ್ನು ವಿವರಿಸಿದರು.

ADVERTISEMENT

ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧಾನಸೌಧದ ವಜ್ರಮಹೋತ್ಸವದ ವೆಚ್ಚವನ್ನು ₹10 ಕೋಟಿಗೆ ನಿಗದಿಗೊಳಿಸಲಾಗಿದೆ. ಅದರಂತೆಯೇ ಗಿರೀಶ ಕಾಸರವಳ್ಳಿ, ಟಿ.ಎನ್‌. ಸೀತಾರಾಮ್‌ ಮತ್ತು ಮಾಸ್ಟರ್‌ ಕಿಶನ್‌ ನಿರ್ದೇಶಿಸುತ್ತಿರುವ ವಿಧಾನಸೌಧದ ಕುರಿತಾದ ಸಾಕ್ಷ್ಯಚಿತ್ರಗಳ ಬಜೆಟ್‌ನಲ್ಲಿಯೂ ಕಡಿತ ಮಾಡಲಾಗಿದೆ.

ಗಿರೀಶ ಕಾಸರವಳ್ಳಿ ನಿರ್ಮಾಣ ಮಾಡಲಿರುವ ಆರು ಎಪಿಸೋಡುಗಳ, ಮೂರು ತಾಸು ಅವಧಿಯ ‘ವಿಧಾನಸೌಧ ಕಟ್ಟಡ ನಿರ್ಮಾಣ’ ಕುರಿತ ಸಾಕ್ಷ್ಯಚಿತ್ರಕ್ಕೆ ನೀಡಲಾಗಿದ್ದ ₹1.2 ಕೋಟಿ ಬಜೆಟ್‌ ಅನ್ನು ₹40 ಲಕ್ಷಕ್ಕೆ ಕಡಿತಗೊಳಿಸಲಾಗಿದೆ.

ಬಜೆಟ್‌ ಕಡಿತದ ಕುರಿತು ಸರ್ಕಾರದಿಂದ ನೇರವಾಗಿ ಸೂಚನೆ ಹೋಗಿಲ್ಲದಿರುವುದೂ ನಿರ್ದೇಶಕರ ಗೊಂದಲವನ್ನು ಹೆಚ್ಚಿಸಿದೆ. ಈ ಕುರಿತು ಮಾತನಾಡಿದ ಕಾಸರವಳ್ಳಿ, ‘ಸರ್ಕಾರದಿಂದ ಸೂಚನೆ ಬರದೇ ಇರುವ ಕಾರಣಕ್ಕೆ ಕೆಲಸ ನಿಲ್ಲಿಸಲೂ ಆಗುತ್ತಿಲ್ಲ. ನಿನ್ನೆಯೂ ಚಿತ್ರೀಕರಣ ಮಾಡಿದ್ದೆವು. ನಾಳೆಯೂ ಮಾಡುತ್ತೇವೆ. ಧ್ವನಿ, ಸಂಗೀತದ ಕೆಲಸಗಳೆಲ್ಲ ನಡೆಯುತ್ತಿವೆ. ಕೆಲಸವನ್ನು ಮುಂದುವರಿಸಬೇಕೋ ಬೇಡವೋ ತಿಳಿಯುತ್ತಿಲ್ಲ. ಕೆಲಸ ಮುಂದುವರಿಸಿದರೆ ಅನಗತ್ಯವಾಗಿ ಇನ್ನೊಂದಿಷ್ಟು ಖರ್ಚು ಜಾಸ್ತಿಯಾಗುತ್ತದೆ. ಸರ್ಕಾರದಿಂದ ಅಧಿಕೃತ ಸೂಚನೆ ಬರುವವರೆಗೆ ಕೆಲಸ ನಿಲ್ಲಿಸುವ ಹಾಗೆಯೂ ಇಲ್ಲ’  ಎಂದು ಬೇಸರ ವ್ಯಕ್ತಪಡಿಸಿದರು.

ನಿರ್ದೇಶಕ ಟಿ.ಎನ್‌. ಸೀತಾರಾಮ್‌ ನಿರ್ದೆಶಿಸುತ್ತಿರುವ ‘ಕರ್ನಾಟಕ ವಿಧಾನಮಂಡಳ ನಡೆದು ಬಂದ ಹಾದಿ’ ಎಂಬ ಸಾಕ್ಷ್ಯಚಿತ್ರದ ಬಜೆಟ್‌ ಅನ್ನು ₹1.58 ಕೋಟಿ ಬದಲಾಗಿ ₹50 ಲಕ್ಷಕ್ಕೆ ಇಳಿಸಲಾಗಿದೆ. ಬಜೆಟ್‌ ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ ಸೀತಾರಾಮ್ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ‘ನಾನು ಮಾಡುತ್ತಿರುವುದು ಒಂದು ಸಾಕ್ಷ್ಯಚಿತ್ರವಲ್ಲ, ಏಳು ಸಾಕ್ಷ್ಯಚಿತ್ರಗಳು. ಶಾಸನಸಭೆಯ 136 ವರ್ಷಗಳ ಇತಿಹಾಸವನ್ನು ಬಹುತೇಕ ಮರುಸೃಷ್ಟಿ ಮಾಡಬೇಕು. ಇದು ಸುಲಭದ ಕೆಲಸ ಅಲ್ಲವೇ ಅಲ್ಲ. ಆರು ಜನರ ತಂಡ ಐದು ತಿಂಗಳಿನಿಂದ ನನ್ನ ಬಳಿ ಕೆಲಸ ಮಾಡುತ್ತಿದೆ. ಮತ್ತು ನಾನು ಇದನ್ನು ಬಯಸಿ ಪಡೆದಿರುವುದಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.

ಬಜೆಟ್‌ ಕಡಿತದ ಕುರಿತು ‘ಪ್ರಜಾವಾಣಿ’ ಸೀತಾರಾಮ್‌ ಅವರನ್ನು ಸಂಪರ್ಕಿಸಿದಾಗ ಅವರು ‘ನಮಗೆ ಬಜೆಟ್‌ ಕಡಿತದ ಕುರಿತಾಗಿ ಇದುವರೆಗೆ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಸೂಚನೆ ಬರದೇ ಆ ಕುರಿತು ಪ್ರತಿಕ್ರಿಯಿಸುವುದು ನೈತಿಕವಾಗಿ ಸರಿಯಲ್ಲ. ಸರ್ಕಾರ ಸೂಚನೆ ನೀಡಿದ ಮೇಲೆ ಮುಂದೆ ಏನು ಮಾಡಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಮಾಸ್ಟರ್‌ ಕಿಶನ್‌ ನಿರ್ದೇಶಿಸುತ್ತಿರುವ ವಿಧಾನಸೌಧ 3ಡಿ ವರ್ಚುವಲ್ ರಿಯಾಲಿಟಿ ಪ್ರದರ್ಶನದ ಬಜೆಟ್‌ ಅನ್ನೂ ₹1.4 ಕೋಟಿ ಬದಲಾಗಿ ₹40 ಲಕ್ಷಕ್ಕೆ ಇಳಿಸಲಾಗಿದೆ. ಈ ನಡುವೆ ಕಾಸರವಳ್ಳಿ ಮತ್ತು ಸೀತಾರಾಮ್‌ ಅವರಂಥ ಹಿರಿಯ ನಿರ್ದೇಶಕರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆಯೂ ವಿರೋಧ ವ್ಯಕ್ತವಾಗುತ್ತಿದೆ.
*
‘ಪ್ರತಿಕ್ರಿಯೆ ಕೊಡೂದಿಲ್ಲ’
ಸಾಕ್ಷ್ಯಚಿತ್ರದ ಬಜೆಟ್‌ ಕಡಿತಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರನ್ನು ಸಂಪರ್ಕಿಸಿತು. ದೂರವಾಣಿ ಕರೆ ಸ್ವೀಕರಿಸಿದ ಕೋಳಿವಾಡ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ‘ನಾನು ಯಾವ ವಿಷಯಕ್ಕೂ ಪ್ರತಿಕ್ರಿಯೆ ಕೊಡೂದಿಲ್ಲ’ ಎಂದು ಹೇಳಿ ಕರೆ ಕತ್ತರಿಸಿದರು.
*
ಈ ವಿಚಾರದಲ್ಲಿ ಸರ್ಕಾರ ಹಾಸ್ಯಾಸ್ಪದವಾಗಿ ನಡೆದುಕೊಳ್ಳುತ್ತಿದೆ. ಕಾಸರವಳ್ಳಿ, ಸೀತಾರಾಮ್‌ ಅವರಂಥ ಹಿರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ.
ಶೇಷಾದ್ರಿ
ಹಿರಿಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.