ADVERTISEMENT

ಸಾಹಿತಿಗಳಿಗೆ ಕಾವಲು: ಕಳವಳ

ಮಂಜುನಾಥ್ ಹೆಬ್ಬಾರ್‌
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಹಿರಿಯ ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ ಮಾತನಾಡಿದರು.
ಹಿರಿಯ ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ ಮಾತನಾಡಿದರು.   

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ‘ಸಾಹಿತಿಗಳು ಮುಕ್ತವಾಗಿ ಮಾತನಾಡುವಂತಿಲ್ಲ. ಒಂದು ವೇಳೆ ಮಾತನಾಡಿದರೆ ಹಲ್ಲೆಗಳು ನಡೆಯುತ್ತವೆ. ನಾವು ಇಂದು ಪೊಲೀಸ್ ಕಾವಲಿನಲ್ಲೇ ಬದುಕಬೇಕಿದೆ’ ಎಂದು ಹಿರಿಯ ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ ಕಳವಳ ವ್ಯಕ್ತಪಡಿಸಿದರು.

82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನವಾದ ಶನಿವಾರ ಪಂಡಿತ್ ತಾರಾನಾಥ ಮಹಾಮಂಟಪದಲ್ಲಿ  ‘ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಎಂ.ಎಂ. ಕಲಬುರ್ಗಿ ಅವರ ಕೊಲೆಯಾದ ನಂತರ ನಾವೆಲ್ಲ ಪ್ರತಿಭಟನಾ ಸಭೆ ನಡೆಸಿದೆವು. ಹಂತಕರ ಪತ್ತಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದೆವು. ಕೆಲವು ವ್ಯಕ್ತಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದೆವು. ಅದಕ್ಕೆ ಸಹಿ ಹಾಕಿದವರಲ್ಲಿ ನನ್ನ ಹಾಗೂ ಕಣವಿಯವರ ಹೆಸರು ಮುಂಚೂಣಿಯಲ್ಲಿತ್ತು. ಇದನ್ನು ನೋಡಿದ ರಾಯಚೂರಿನ ಮಹಾನುಭಾವರೊಬ್ಬರು ನಮ್ಮ ಮನೆ ಧ್ವಂಸ ಮಾಡುವುದಾಗಿ ಹೇಳಿಕೆ ನೀಡಿದರು. ನಾವು ಬೇಡವೆಂದು ಹೇಳಿದರೂ ನಮ್ಮ ಮನೆಗೆ ಪೊಲೀಸ್‌ ರಕ್ಷಣೆ ನೀಡಲಾಯಿತು. ಈಗಲೂ ಭದ್ರತೆ ನೀಡುತ್ತಿದ್ದಾರೆ’ ಎಂದರು.

ADVERTISEMENT

‘ಕೆ.ಎಸ್‌. ಭಗವಾನ್‌ ಅವರ ಸ್ಥಿತಿಯೂ ಇದೇ ರೀತಿ ಆಗಿದೆ. ಅವರ ಸಿದ್ಧಾಂತವನ್ನು, ಅವರು ಆಡುವ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಬೆದರಿಕೆ ಹಾಕುವುದನ್ನೂ ಒಪ್ಪಲು ಸಾಧ್ಯವಿಲ್ಲ. ಅವರಿಗೂ ಪೊಲೀಸ್‌ ಭದ್ರತೆ ನೀಡಲಾಗಿದೆ. ‌ ಕಾರ್ನಾಡ, ಚಂದ್ರಶೇಖರ ಪಾಟೀಲ ಸೇರಿ ಹಲವರ ಕಥೆಯೂ ಹೀಗೆಯೇ ಆಗಿದೆ. ಇದು ಅತ್ಯಂತ ಕೆಟ್ಟ ಪರಿಸ್ಥಿತಿ’ ಎಂದು ಕಟುವಾಗಿ ಹೇಳಿದರು.

‘ಎಂ.ಎಂ.ಕಲಬುರ್ಗಿ ಅವರು 1986ರಲ್ಲಿ ಶಿವಶರಣರ ಬಗ್ಗೆ ಲೇಖನ ಬರೆದರು. ಅದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಕೆಲವರು ಅವಮಾನಕರವಾಗಿ ನಡೆದುಕೊಂಡರು. ಈ ಪ್ರಕರಣದಿಂದಾಗಿ ನಾನು ಬೌದ್ಧಿಕ­ವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂಬುದಾಗಿ ಕಲಬುರ್ಗಿ ಅವರೇ ಹೇಳಿಕೊಂಡರು. ಸತ್ಯ ಹೇಳಬೇಕು ಎಂಬ ಅಪೇಕ್ಷೆ ಜನರಿಗೆ ಯಾವಾಗಲೂ ಇರುವುದಿಲ್ಲ. ಒಂದು ವೇಳೆ ಸತ್ಯ ನುಡಿದರೆ ಈ ರೀತಿ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದರು.

ಟಿವಿ  ಮಾಧ್ಯಮಗಳ ವಿರುದ್ಧ ಆಕ್ರೋಶ
ಸುದ್ದಿವಾಹಿನಿಗಳು ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಒಂದೇ ವಿಷಯವನ್ನು ಇಡೀ ದಿನ ತೋರಿಸುತ್ತವೆ, ಆಕ್ರಮಣಶೀಲ ವರ್ತನೆ ವ್ಯಕ್ತಪಡಿಸುತ್ತಿವೆ, ತಮ್ಮ ಮನಸ್ಸಿನಲ್ಲಿ ಇರುವುದನ್ನು ವ್ಯಕ್ತಿಯ ಬಾಯಲಿ ಹೇಳಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಂ.ಎಂ. ಕಲಬುರ್ಗಿ ಅವರ ಸಾವಿಗೆ ಸುದ್ದಿವಾಹಿನಿಗಳು ಮಾಡಿರುವ ಅಧ್ವಾನವೇ ಕಾರಣ. ಕಾರ್ಯಕ್ರಮವೊಂದರಲ್ಲಿ ಕಲಬುರ್ಗಿಯವರು ಯಾರದ್ದೋ ಮಾತನ್ನು ಉಲ್ಲೇಖಿಸಿದರು, ಇದನ್ನು ಕಲಬುರ್ಗಿಯವರೇ ಹೇಳಿದ್ದಾರೆ ಎಂಬಂತೆ ಬಿಂಬಿಸಿದವು.  ಜನರ ಭಾವನೆಯನ್ನು ಕೆರಳಿಸಿದರು. ಇದು ಬಹಳ ಅಪಾಯಕಾರಿ ಬೆಳವಣಿಗೆ’ ಎಂದೂ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.