ADVERTISEMENT

ಸಿಎಂಗೆ ಪ್ರಾಮಾಣಿಕರೇ ಸಿಗುತ್ತಿಲ್ಲ

ಶ್ಯಾಂ ಭಟ್‌ ಹೆಸರು ಶಿಫಾರಸಿಗೆ ಬಿಎಸ್‌ವೈ– ಶೆಟ್ಟರ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಸಿಎಂಗೆ ಪ್ರಾಮಾಣಿಕರೇ ಸಿಗುತ್ತಿಲ್ಲ
ಸಿಎಂಗೆ ಪ್ರಾಮಾಣಿಕರೇ ಸಿಗುತ್ತಿಲ್ಲ   

ವಿಜಯಪುರ/ ಹುಬ್ಬಳ್ಳಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಟಿ.ಶ್ಯಾಂ ಭಟ್‌ ಅವರನ್ನು ನೇಮಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಸಿದ್ದರಾಮಯ್ಯ ಅವರಿಗೆ ಪ್ರಾಮಾಣಿಕ ಅಧಿಕಾರಿಗಳೇ ಸಿಗುತ್ತಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

‘ಶ್ಯಾಂ ಭಟ್‌ ಅವರನ್ನು ನೇಮಿಸುವುದಕ್ಕೆ ಶೇ 80ರಷ್ಟು ಜನರ ವಿರೋಧ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಪರಿಗಣಿಸಿಲ್ಲ’ ಎಂದು ಯಡಿಯೂರಪ್ಪ ಅವರು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಲೋಕಾಯುಕ್ತ, ಕೆಪಿಎಸ್‌ಸಿ ಸೇರಿದಂತೆ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಿಸುವಾಗ ಯೋಗ್ಯ, ಪ್ರಾಮಾಣಿಕರನ್ನು ಗುರುತಿಸಬೇಕು. ಆದರೆ ಈ ವಿಚಾರದಲ್ಲಿ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ’ ಎಂದೂ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ ಶೆಟ್ಟರ್, ‘ ಶ್ಯಾಂ ಭಟ್‌, ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಶನ್ ವಿಚಾರದಲ್ಲಿ ರಿಯಲ್ ಎಸ್ಟೇಟ್ ಕಂಪೆನಿಗಳ ಪರ ಕೆಲಸ ಮಾಡಿದ್ದಾರೆ ಎನ್ನುವ ಆರೋಪವಿದೆ. ಅವರು ಇನ್ನೂ ಅದರಿಂದ ಮುಕ್ತರಾಗಿಲ್ಲ. ಹೀಗಿದ್ದಾಗ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸಿ, ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

‘ಭ್ರಷ್ಟಾಚಾರದ ಆರೋಪ ಹೊತ್ತಿರುವ ವ್ಯಕ್ತಿಗೆ ಸರ್ಕಾರವು ಪ್ರತಿಷ್ಠಿತ ಆಯೋಗದ ಅಧಿಕಾರದ ಚುಕ್ಕಾಣಿಯನ್ನು ನೀಡುತ್ತಿದೆ. ಇದರರ್ಥ, ಬಿಡಿಎನಲ್ಲಿ ಮಾಡಿದ್ದು ಸಾಕು; ಕೆಪಿಎಸ್‌ಸಿಯಲ್ಲಿ ಇನ್ನಷ್ಟು ಭ್ರಷ್ಟಾಚಾರ ಮಾಡು ಎನ್ನುವಂತಾಗಿದೆ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯನವರಿಗೆ ಪ್ರಾಮಾಣಿಕ ಅಧಿಕಾರಿಗಳೇ ಸಿಗುತ್ತಿಲ್ಲ. ಅವರು ನೇಮಕ ಮಾಡಲು ಹೊರಡುವ ಪ್ರತಿಯೊಂದು ಇಲಾಖೆ, ಸಂಸ್ಥೆಯ ಅಧಿಕಾರಿಗಳು ಒಂದಿಲ್ಲೊಂದು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುತ್ತಾರೆ. ಲೋಕಾಯುಕ್ತ ಸ್ಥಾನಕ್ಕೆ ಈವರೆಗೂ ಒಬ್ಬ ಪ್ರಾಮಾಣಿಕ ವ್ಯಕ್ತಿ ಸಿಕ್ಕಿಲ್ಲ. ಆ ಸಂಸ್ಥೆ ಇದ್ದು ಇಲ್ಲದಂತಾಗಿ, ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಶ್ಯಾಂ ಭಟ್‌ ನೇಮಕದ ಕುರಿತು ಸ್ವಯಂಸೇವಾ ಸಂಸ್ಥೆಯೊಂದು ರಾಜ್ಯಪಾಲರಿಗೆ ದೂರು ನೀಡಿದೆ. ರಾಜ್ಯಪಾಲರು ವಿಚಾರ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.