ADVERTISEMENT

ಸಿದ್ದರಾಮಯ್ಯ ತಪ್ಪು ಮಾಹಿತಿ: ಎಚ್‌ಡಿಕೆ

ಮೊಕದ್ದಮೆ ಮಾಹಿತಿ ಮುಚ್ಚಿಟ್ಟ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಂದಲೆ ಪ್ರಕರಣವೊಂದರಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಮೊಕದ್ದಮೆ ಮುಚ್ಚಿಟ್ಟು, 2008ರಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬುಧವಾರ  ಇಲ್ಲಿ  ಆರೋಪಿಸಿದರು.

‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 2007ರಲ್ಲಿ ನಡೆದ ದಾಂದಲೆ ಪ್ರಕರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿ. ಮೈಸೂರು ದಕ್ಷಿಣ ಹಾಗೂ ಜಯಪುರ ಠಾಣೆಯಲ್ಲಿ ಅವರು ಹಾಗೂ ಬೆಂಬಲಿಗ ಕೆ.ಮರೀಗೌಡ ವಿರುದ್ಧ ದೂರು ದಾಖಲಾಗಿದ್ದವು. ನಾಮಪತ್ರ ಸಲ್ಲಿಸುವಾಗ ಈ ಮಾಹಿತಿ ಮುಚ್ಚಿಟ್ಟಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ಸಂಬಂಧ ಕೆಲ ದಾಖಲೆ ಪ್ರದರ್ಶಿಸಿದ ಅವರು, ಕಾನೂನು ಹೋರಾಟಕ್ಕೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಸಮಗ್ರವಾಗಿ ಮಾಹಿತಿ ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.

ಅಷ್ಟೇ ಅಲ್ಲ; 2008–09ರಲ್ಲಿಯೇ ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಎಲ್ಲಾ ಪ್ರಕರಣಗಳು ಖುಲಾಸೆಗೊಂಡಿವೆ ಎಂದು ತನಿಖಾ ವರದಿಯಲ್ಲಿ ನಮೂದಾಗಿಲ್ಲ. ಒಂದು ಪ್ರಕರಣದಲ್ಲಿ ಸಿಐಡಿ ‘ಸಿ’ ವರದಿ ಸಲ್ಲಿಸಿದೆ. ‘ಸಿ’ ವರದಿಯನ್ನು ಯಾವುದೇ ಸಂದರ್ಭದಲ್ಲಿ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು. ದಾವೂದ್‌ ಇಬ್ರಾಹಿಂ ವಿಚಾರದಲ್ಲೂ ಪೊಲೀಸರು ‘ಸಿ’ ವರದಿ ಸಲ್ಲಿಸಿದ್ದರು ಎಂದು ವಿವರಿಸಿದರು.

‘ನನ್ನನ್ನು ಸುಳ್ಳುಗಾರ ಎಂದು ಕರೆಯುವ ಸಿದ್ದರಾಮಯ್ಯ ಈ ಬಗ್ಗೆ ಏನು ಹೇಳುತ್ತಾರೆ? ವಕೀಲರಾಗಿ ಅನುಭವ ಇರುವ ಹಾಗೂ ಹಿರಿಯ ರಾಜಕಾರಣಿ ಆಗಿರುವ ಅವರಿಗೆ ಈ ಬಗ್ಗೆ ಏನೂ ಗೊತ್ತಿಲ್ಲವೇ? ಅವರೀಗ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದವರ ನೈತಿಕತೆ ಪ್ರಶ್ನಿಸುತ್ತಾರೆ. ಆದರೆ ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಖುಲಾಸೆಯಾಗಿರುವುದಕ್ಕೆ ದಾಖಲೆ ಮುಂದಿಡಲಿ’ ಎಂದು ಸವಾಲು ಹಾಕಿದರು.

‘ನನ್ನ ಮೇಲೂ ಲೋಕಾಯುಕ್ತ ಹಾಗೂ ಹೈಕೋರ್ಟ್‌ನಲ್ಲಿ ಪ್ರಕರಣಗಳಿವೆ. ಒಮ್ಮೆ ನನ್ನನ್ನು ಜೈಲಿಗೆ ಕಳಿಸಲು ಸಿದ್ದರಾಮಯ್ಯ ಹುನ್ನಾರ ನಡೆಸಿದ್ದರು. ಆದರೆ, ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವಾಗ ಪ್ರಮಾಣಪತ್ರದಲ್ಲಿ ಪ್ರಕರಣಗಳ ಮಾಹಿತಿ ನೀಡಿದ್ದೇನೆ. ನನ್ನ ನೈತಿಕತೆ ಪ್ರಶ್ನಿಸುವ ಮುಖ್ಯಮಂತ್ರಿಯೇ ಕೊಂಚವೂ ನೈತಿಕತೆ ಉಳಿಸಿಕೊಂಡಿಲ್ಲ’ ಎಂದರು.

‘ಎಲ್ಲದ್ದಕ್ಕೂ ಉಡಾಫೆ ಉತ್ತರ ನೀಡುವ ಇಂಥ ಅಹಂಕಾರಿ ಮುಖ್ಯಮಂತ್ರಿಯನ್ನು ಹಿಂದೆಂದೂ ನಾನು ಕಂಡಿಲ್ಲ. ಅವರಿಗೆ ಸಂಸ್ಕೃತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ರೀತಿ ಉಡಾಫೆ ವರ್ತನೆಯಿಂದಲೇ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿರುವುದು ನಿಜ’ ಎಂದು ಲೇವಡಿ ಮಾಡಿದರು.

ಮರೀಗೌಡ ರಕ್ಷಣೆ: ಆರೋಪ
ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಕೆ.ಮರೀಗೌಡ ಅವರನ್ನು 24 ಗಂಟೆಗಳಲ್ಲಿ ಬಂಧಿಸಬಹುದು. ಆದರೆ, ಅವರು ತಮ್ಮ ಪಟಾಲಮ್ಮಿಗೆ ಸಹಾಯ ಮಾಡಲು ಸರ್ಕಾರ ನಡೆಸುತ್ತಿದ್ದಾರೆ. ಜನರಿಗಾಗಿ ಅಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಜಿಲ್ಲಾಧಿಕಾರಿ ಸಿ.ಶಿಖಾ ಅವರು ದಲಿತ ಮಹಿಳೆ. ಅವರನ್ನು ನಿಂದಿಸಿದ್ದಕ್ಕೆ ಮರೀಗೌಡ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಿತ್ತು. ಮನುಷ್ಯತ್ವ ಎಂಬುದು ಇದ್ದಿದ್ದರೆ ಒಬ್ಬ ಮಹಿಳೆಯನ್ನು ಅವರು ಈ ರೀತಿ ನಿಂದಿಸುತ್ತಿರಲಿಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT