ADVERTISEMENT

ಸಿದ್ದರಾಮಯ್ಯ ಸೋಲಿಸುವುದೇ ಗುರಿ

ಮೀರಠ್‌ ಸಂಸದ ರಾಜೇಂದ್ರ ಅಗರ್‌ವಾಲ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST

ಮೈಸೂರು: ‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ಬಿಜೆಪಿ ಗುರಿ’ ಎಂದು ಉತ್ತರಪ್ರದೇಶದ ಮೀರಠ್‌ ಸಂಸದ ರಾಜೇಂದ್ರ ಅಗರ್‌ವಾಲ್‌ ತಿಳಿಸಿದರು.

ನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯೂ ಆಗಿರುವ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್‌ ಜೊತೆ ಕೈಜೋಡಿಸುವುದಿಲ್ಲ. ಕಾರ್ಯಕರ್ತರ ಪಕ್ಷವಾಗಿರುವ ಬಿಜೆಪಿಗೆ ರಾಜ್ಯದಲ್ಲಿ ಅಂತಹ ಅನಿವಾರ್ಯತೆ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್‌ ಅಂತಿಮಗೊಳಿಸಲಿದೆ’ ಎಂದರು.

ADVERTISEMENT

‘ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಆಳುವ ಪಕ್ಷವನ್ನು ಮತದಾರರು ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯ ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ಕುಖ್ಯಾತಿ ಪಡೆದಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಭೀತಿಯ ವಾತಾವರಣ ಸೃಷ್ಟಿಯಾಗಿದೆ. ತ್ರಿಪುರಾ ಚುನಾವಣೆಯ ಫಲಿತಾಂಶ ಇಲ್ಲಿಯೂ ಮರುಕಳಿಸಲಿದೆ. ಕರ್ನಾಟಕ ಕಾಂಗ್ರೆಸ್‌ ಮುಕ್ತವಾಗಲಿದೆ’ ಎಂದರು.

‘ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸವೇ ಬಿಜೆಪಿಗೆ ಮುಳುವಾಗಿದೆ. ಇದು ದೇಶದ ರಾಜಕಾರಣದ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ತ್ರಿಪುರಾ ಸೇರಿ ದೇಶದ ವಿವಿಧೆಡೆ ಪ್ರತಿಮೆಗಳು ಧ್ವಂಸಗೊಂಡಿದ್ದು ದುರದೃಷ್ಟಕರ. ಸ್ಥಳೀಯ ಸರ್ಕಾರ ಈ ಸಂಬಂಧ ಕ್ರಮ ಕೈಗೊಂಡಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.