ADVERTISEMENT

ಸಿದ್ಧಾಂತಗಳು ಅಪ್ರಯೋಜಕ

ಪ್ರಜಾವಾಣಿ ಕಚೇರಿಯಲ್ಲಿ ಭೈರಪ್ಪ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2014, 19:30 IST
Last Updated 4 ಆಗಸ್ಟ್ 2014, 19:30 IST

ಬೆಂಗಳೂರು: ‘ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಎಡ­ಪಂಥೀಯ ಸಿದ್ಧಾಂತದಿಂದ ಪ್ರಣೀತ­ವಾದ ಆರ್ಥಿಕ ನೀತಿಗಳೇ ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆದು ಅಭಿ­ವೃದ್ಧಿ ಕುಂಠಿತವಾಗಲು ಕಾರಣ­ವಾಗಿವೆ’ ಎಂದು ಹಿರಿಯ ಕಾದಂಬರಿ­ಕಾರ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯ­ಪಟ್ಟರು.

ಮೊಟ್ಟಮೊದಲ ಬಾರಿಗೆ ಸೋಮ­ವಾರ ‘ಪ್ರಜಾವಾಣಿ’ ಕಚೇರಿಗೆ ಭೇಟಿ ಕೊಟ್ಟ ಅವರು, ಸಂಪಾದಕೀಯ ಸಿಬ್ಬಂದಿ ಜತೆಗಿನ ಸಂವಾದದಲ್ಲಿ ಪಾಲ್ಗೊಂಡರು.

‘ರಷ್ಯಾದ ಎಡಪಂಥೀಯ ಸಿದ್ಧಾಂತ­ದಿಂದ ಪ್ರಭಾ­ವಿತ­­ರಾದ­ವರು ನೆಹರೂ. ಎಲ್ಲ­ವನ್ನೂ ಸರ್ಕಾ­ರವೇ ಮಾಡ­ಬೇಕು ಎನ್ನು­ತ್ತದೆ ಎಡ­ಪಂಥೀಯ ಸಿದ್ಧಾಂತ. ಆದರೆ, ಪ್ರಾಯೋಗಿಕವಾಗಿ ಅದು ಅಸಾಧ್ಯ. ನೆಹರೂ ಪರಂ­ಪರೆ­ಯನ್ನೇ ಮುಂದು­ವರಿಸಿದ ಇಂದಿರಾ ಗಾಂಧಿ, ದೊಡ್ಡ ಕೈಗಾರಿಕೆಗಳ ಮೇಲೆ ಶೇ 97.2­ರಷ್ಟು ತೆರಿಗೆ ವಿಧಿಸಿದರು. ಇಷ್ಟೊಂದು ತೆರಿಗೆ ಕೊಟ್ಟು ಕೈಗಾ­ರಿಕೆಗಳು ಹೇಗೆ ಬೆಳೆ­ಯಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಉದ್ಯಮಿಗಳು ಎರಡು ಲೆಕ್ಕ ಬರೆ­ಯಲು ಶುರು ಮಾಡಿದ್ದೇ ಆಗ. ಇಂದಿರಾ ಅವರಿಗೆ ಅದು ಗೊತ್ತಾಗಿ ಅದ­ರಲ್ಲೂ ಪಾಲು ಕೇಳಲು ಆರಂಭಿಸಿ­ದರು. ಕಳ್ಳ ಲೆಕ್ಕ ಮತ್ತು ಕಪ್ಪು ಹಣದ ಹಾವಳಿ ಎಲ್ಲವೂ ಆಗಿನ ಅಪ್ರಾಮಾ­ಣಿ­ಕತೆ­ಯಿಂದ ಸಿಕ್ಕ ಬಳುವಳಿ. ಆಗಿನ ಕೆಟ್ಟ ಚಾಳಿ ಇದು­ವರೆಗೆ ಹೋಗಿಲ್ಲ’ ಎಂದು ವಿಶ್ಲೇಷಿಸಿದರು.

‘ಸಿದ್ಧಾಂತಕ್ಕೆ ಕಟ್ಟುಬಿದ್ದರೆ ಯಾವು­ದನ್ನೂ ಸರಿಯಾಗಿ ಅರ್ಥ­ಮಾಡಿ­ಕೊಳ್ಳಲು ಆಗಲ್ಲ. ನಮಗೆ ಬೇಕಿರು­ವುದು ಎಡ ಇಲ್ಲವೆ ಬಲಪಂಥೀಯ ಸಿದ್ಧಾಂತವಲ್ಲ; ಬದಲಾಗಿ ನೈತಿಕವಾಗಿ ಭಯ ಹುಟ್ಟಿಸಬಲ್ಲ ಲಾಲ್‌ ಬಹ­ದ್ದೂರ್‌ ಶಾಸ್ತ್ರಿ ಅವರ ಮೌಲ್ಯ’ ಎಂದು ಪ್ರತಿಪಾದಿಸಿದರು.

‘ಸಂಪತ್ತು ಬೆಳೆಸಲು, ಉದ್ಯೋಗ ಸೃಷ್ಟಿಸಲು ಬಂಡವಾಳ­ಶಾಹಿಗಳು ಬೇಕೇಬೇಕು. ಅವರಿಗೆ ಉತ್ತೇಜನವನ್ನು ಕೊಡುವ ಜತೆಗೆ ಅವರ ಗಳಿಕೆ ಮೇಲೆ ಸೂಕ್ತ ತೆರಿಗೆಯನ್ನೂ ವಿಧಿಸ­ಬೇಕು. ಆದ್ದರಿಂದಲೇ ವಾಸ್ತವಿಕ ಹಾಗೂ ಅನುಷ್ಠಾನ ಯೋಗ್ಯ­ವಾದ ಅರ್ಥವ್ಯವಸ್ಥೆ ಇಂದಿನ ಅಗತ್ಯವಾಗಿದೆ’ ಎಂದರು.

‘ಪಿ.ವಿ. ನರಸಿಂಹರಾವ್‌ ಅವರು ಪ್ರಧಾನಿಯಾಗಿದ್ದಾಗ ಆರ್ಥಿಕ ಸುಧಾರಣೆಯನ್ನೇನೋ ತಂದರು. ಕ್ರಮೇಣ ದುಡ್ಡು ಸಹ ಹರಿದುಬಂತು. ತೆರಿಗೆಯೂ ದೊಡ್ಡದಾಗಿ ಸಂಗ್ರಹವಾ­ಯಿತು. ಆದರೆ, ಆ ದುಡ್ಡು ಮೂಲ ಸೌಕರ್ಯ ವೃದ್ಧಿಗೆ ಬಳಕೆಯಾಗುವ ಬದಲು ಭ್ರಷ್ಟರ ಪಾಲಾಯಿತು. ಹೀಗೆ ಅಪ್ರಾಮಾಣಿಕತೆಯೇ ಎಲ್ಲ ಸಮಸ್ಯೆಗಳಿಗೆ ಮೂಲವಾಯಿತು’ ಎಂದು ಭೈರಪ್ಪ ಅಭಿಪ್ರಾಯಪಟ್ಟರು.

‘ರೈಲ್ವೆಯನ್ನು ಖಾಸಗೀಕರಣ ಮಾಡಲು ಹೇಗೆ ಅಸಾಧ್ಯವೋ ಹಾಗೆಯೇ ಎಲ್ಲ ಕೈಗಾರಿಕೆಗಳನ್ನು ಸರ್ಕಾರವೇ ನಡೆಸುವುದು ಸಹ ಆಗದ ಕೆಲಸ. ಇಂದಿರಾ ಅವರ ಕಾಲಕ್ಕೆ ‘ಹೇಟ್‌ ದಿ ರಿಚ್‌’ (ಶ್ರೀಮಂತರನ್ನು ದ್ವೇಷಿಸಿ) ಎಂಬ ಭಾವ ಬೆಳೆದಿತ್ತು. ಬಂಡವಾಳಶಾಹಿಗಳು ನರಕಕ್ಕೆ ಹೋಗಬೇಕು ಎನ್ನುವಂತಹ ಸನ್ನಿವೇಶ ಅದು. ಬಂಡವಾಳಶಾಹಿಗಳು ಇಲ್ಲದೆ ದೇಶದ ಬೆಳವಣಿಗೆ ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

ಜಾತಿ ಸಮಸ್ಯೆ: ‘ಹೆಚ್ಚು, ಹೆಚ್ಚು ಉದ್ಯೋಗ ಸೃಷ್ಟಿಯಾಗಿ ಎಲ್ಲರಿಗೂ ಕೆಲಸ ಸಿಕ್ಕರೆ ಮೀಸಲಾತಿ ಪ್ರಶ್ನೆ ತಾನೇತಾನಾಗಿ ಹೋಗುತ್ತದೆ. ಆಗ ಜಾತಿ ವ್ಯವಸ್ಥೆ ಸಹ ಅಳಿಯುತ್ತದೆ’ ಎಂದು ಅವರು ಪ್ರತಿಪಾದಿಸಿದರು.

‘ಶೇ 15ರಷ್ಟು ಪ್ರಮಾಣದಲ್ಲಿ ‘ಯಶಸ್ವಿ’ ಅಂತರ್ಜಾತಿ ವಿವಾಹಗಳು ನಡೆದರೆ ಜಾತಿ ಬಿಗುವು ಕಡಿಮೆ ಆಗುತ್ತದೆ. ಹಂತ, ಹಂತವಾಗಿ ಅಂತರ್ಜಾತಿ ವಿವಾಹದ ಪ್ರಮಾಣ ಹೆಚ್ಚಾ­ಗಬೇಕು. ಒಂದೇ ಕಚೇರಿಯಲ್ಲಿ ಕೆಲಸ ಮಾಡುವ ಹುಡುಗ–ಹುಡುಗಿಯರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳ­ಬಲ್ಲರು. ಅಂತರ್ಜಾತಿ ವಿವಾಹ ಅಲ್ಲಿಯೇ ಹೆಚ್ಚಬೇಕು. ಸಾವಿ­ರಾರು ವರ್ಷಗಳಿಂದ ಬೆಳೆದುಬಂದ ಸಮಸ್ಯೆ ಇದು. ಸಂಪೂ­ರ್ಣ­ವಾಗಿ ತೊಲಗಲು ಕಾಲಾವಕಾಶ ಅಗತ್ಯ’ ಎಂದು ವಿವರಿಸಿದರು.

‘ವಿದ್ಯಾವಂತರಲ್ಲೀಗ ಜಾತಿ ಗಡಿ ಅಳಿಸಿಹೋಗಿದೆ. ಬೇರೆ ಜಾತಿಗಳ ಗೆಳೆಯರ ಮನೆಗೂ ಊಟಕ್ಕೆ ಹೋಗುತ್ತಾರೆ. ಉಪಜಾತಿಗಳ ಮಧ್ಯೆ ಮದುವೆ ಸಂಬಂಧಗಳು ಏರ್ಪ­ಡುತ್ತಿವೆ. ಬ್ರಾಹ್ಮಣ, ಲಿಂಗಾಯತ ಸೇರಿದಂತೆ ಎಲ್ಲ ಜಾತಿಗಳ ಮಠಾಧೀಶರು ಮದುವೆ ಸಂಬಂಧಕ್ಕೆ ಉಪಜಾತಿ ನೋಡ­ದಂತೆ ಉಪದೇಶ ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯರು ಕೂಡ ತಮ್ಮ ಮಗಳಿಗೆ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಸರಿಯೇ, ಭಾರತದ ವರ ಸಿಕ್ಕರೆ ಸಾಕು ಎಂಬ ಹಂಬಲದಲ್ಲಿದ್ದಾರೆ’ ಎಂದು ಅವರು ಹೇಳಿದರು.

ಸಾಂಸ್ಕೃತಿಕ ಭಿನ್ನತೆ ಕುರಿತ ಪ್ರಶ್ನೆಯನ್ನು ಎತ್ತಿದ ಅವರು, ‘ಅಮೆರಿಕದ ಸಿದ್ಧ ಆಹಾರ, ಬಹುಮಹಡಿ ಕಟ್ಟಡಗಳ ಪರಂಪರೆ ನಮ್ಮ ದೇಶದ ಮೇಲೆ ದಾಳಿ ಮಾಡಿದಂತೆ, ಅಲ್ಲಿನ ಬಹುಸಂಸ್ಕೃತಿ ಸಹ ನಮ್ಮನ್ನು ಆಕ್ರಮಿಸಲಿದೆ. ನಮ್ಮದನ್ನು ಉಳಿಸಿಕೊಂಡೇ ಬೇರೆ ಸಂಸ್ಕೃತಿಯನ್ನು ಹೇಗೆ ಸ್ವೀಕರಿಸಬೇಕು ಎಂಬುದು ಅತ್ಯಂತ ಸೂಕ್ಷ್ಮ ಪ್ರಶ್ನೆಯಾಗಿದೆ’ ಎಂದು ಪ್ರತಿಪಾದಿಸಿದರು.

ಮನೆಯ ಊಟ:ಪ್ರಜಾವಾಣಿ’ ಕ್ಯಾಂಟೀನ್‌ ನೋಡಿ ಬಹಳ ಸಂತೋಷವಾಯ್ತು. ಮನೆಯ ಊಟವನ್ನೇ ಇಲ್ಲಿ ಕೊಡಲಾಗುತ್ತದೆ.  ಎರಡೂ ಹೊತ್ತು ಇಂತಹ ಊಟ ಸಿಕ್ಕರೆ ಯಾವ ಗಂಡಸೂ ಮದುವೆ ಆಗಬೇಕಿಲ್ಲ. ‘ಪ್ರಜಾವಾಣಿ’­ಯನ್ನು ನಾನು ಆರಂಭದ ದಿನಗಳಿಂದಲೂ ಓದುತ್ತಾ ಬಂದಿದ್ದೇನೆ. ಖಚಿತವಾದ ಹಾಗೂ ತಪ್ಪಿಲ್ಲದ ಬರವಣಿಗೆ ಈ ಪತ್ರಿಕೆಯದ್ದಾಗಿದೆ’ ಎಂದರು.

ರಸಪ್ರಧಾನ ಗುಣವೇ ಜನಪ್ರಿಯತೆಗೆ ಕಾರಣ

*ನಿಮ್ಮ ಸಾಹಿತ್ಯ ಅಷ್ಟೊಂದು ಜನಪ್ರಿಯವಾಗಲು ಏನು ಕಾರಣ?
ನನ್ನ ಬರವಣಿಗೆಯಲ್ಲಿ ಯಾವ ಪುನರಾವರ್ತನೆಯೂ ಇರು­ವುದಿಲ್ಲ. ನನಗೆ ಹಳ್ಳಿಯ ಅನುಭವ ಗಾಢವಾಗಿದೆ. ‘ಗೃಹಭಂಗ’, ‘ಮತದಾನ’, ‘ದಾಟು’, ‘ತಬ್ಬಲಿ ನೀನಾದೆ ಮಗನೇ’ ಕಾದಂಬರಿಗಳಲ್ಲಿ ನನ್ನ ಆ ಅನುಭವವನ್ನು ಬಳಸಿ­ಕೊಂಡಿದ್ದೇನೆ. ಹುಬ್ಬಳ್ಳಿಯಲ್ಲಿ ಉದ್ಯೋಗದಲ್ಲಿದ್ದ ನಾನು ಬಳಿಕ ಗುಜರಾತ್‌ಗೆ ಹೋದೆ. ಅಲ್ಲಿಂದ ದೆಹಲಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಕೆಲಸದ ಮೇಲೆ ಯಾವ ರಾಜ್ಯಕ್ಕೆ ಹೋದರೂ ಅಲ್ಲಿನ ಹಳ್ಳಿಯೊಂದರಲ್ಲಿ 2–3 ದಿನ ಕಳೆಯುತ್ತಿದ್ದೆ. ಊರ ಮುಂದಿನ ಮರದ ಕೆಳಗೆ ಕುಳಿತರೆ ಸಾಕು, ಜನ ಯಾವ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ಮಾತನಾಡುತ್ತಿದ್ದರು. ಹಾದರ, ರಾಜಕೀಯ ಎಲ್ಲವೂ ಖುಲ್ಲಂಖುಲ್ಲಾ ಚರ್ಚೆ ಆಗುತ್ತಿತ್ತು. ಅಲ್ಲಿನ ಅಡುಗೆ, ಊಟ, ನಡೆ, ನುಡಿ ಅರ್ಥ ಮಾಡಿಕೊಳ್ಳಲು ಇದರಿಂದ ಸಾಧ್ಯವಾಯಿತು.

ಹಿಮಾಲಯದ ಎಲ್ಲ ಭಾಗದಲ್ಲೂ ಸುತ್ತಿದ್ದೇನೆ. ‘ಪರ್ವ’ ಉತ್ತರ ಭಾರತದ ಕೃತಿಯೂ ಎನಿಸಲು ನನ್ನ ಅಲ್ಲಿನ ಅನುಭವಗಳೇ ಕಾರಣ. ಮುಂಬೈ, ಜೈಪುರ, ಬರೋಡಾ­ದಲ್ಲಿ ಕೇಳಿದ ಸಂಗೀತವು ‘ಸಾರ್ಥ’, ‘ಮಂದ್ರ’ ಕಾದಂಬರಿಗಳ ರಚನೆಗೆ ನೆರವಾಗಿದೆ. ಬೇರೆ ಯಾವ ಉದ್ದೇಶಕ್ಕೂ ಸಮಯ ವ್ಯರ್ಥ ಮಾಡಲಿಲ್ಲ. ಬರೆದರೆ ಕಾದಂಬರಿಯನ್ನೇ ಬರೆಯಬೇಕು ಎನ್ನುವ ಸ್ಪಷ್ಟ ಗುರಿ ಇಟ್ಟುಕೊಂಡೆ. ಬರೆದ ಕಾದಂಬರಿ ಓದುಗರ ಹೃದಯ ತಟ್ಟಬೇಕು, ಅವರನ್ನು ಹೊಸ ಅನುಭವಕ್ಕೆ ಒಯ್ಯಬೇಕು ಮತ್ತು ಪಾತ್ರ ರಸಪೂರ್ಣವಾಗಿರಬೇಕು ಎಂಬ ತುಡಿತ ನನ್ನದು. ಆದ್ದರಿಂದಲೇ ಪಾತ್ರಗಳ ಅಂತರಂಗ ಹೊಕ್ಕು ಬರೀ­ತೀನಿ. ಕಾಳಿದಾಸ ಮತ್ತು ಷೇಕ್ಸ್‌ಪಿಯರ್‌ ಸಹ ರಸಪ್ರಧಾ­ನ­ವಾಗಿಯೇ ಬರೆದವರು. ಆಗ ಜನ ಇಂತಹ ಕೃತಿಗಳಿಗೆ ಹುಡುಕಿಕೊಂಡು ಬರುತ್ತಾರೆ. ಕೇವಲ ಮಾಹಿತಿ ತುರು­ಕಿದರೆ ಅಂತಹ ಕಾದಂಬರಿಯನ್ನು ಯಾಕೆ ಓದಬೇಕು?

*ಸಾಹಿತ್ಯದಿಂದ ಸಮಾಜ ಸುಧಾರಣೆ ಅಸಾಧ್ಯ ಎಂದಿದ್ದೀರಿ...
ಹೌದು, ಸಾಹಿತ್ಯದಿಂದ ಸಮಾಜ ಸುಧಾರಣೆ ಮಾಡ­ಬಹುದು ಎಂಬ ಸಿದ್ಧಾಂತಕ್ಕೆ ನಾನೆಂದೂ ಕಟ್ಟುಬಿದ್ದವನಲ್ಲ. ಎಲ್ಲ ಕಲೆಗಳಲ್ಲಿ ಸಂಗೀತ ಅತ್ಯಂತ ಪರಿಪಕ್ವವಾದ ಕಲೆಯಾ­ಗಿದೆ. ಅದರಲ್ಲಿ ಭಾವದ ತೀವ್ರತೆ ಇರುತ್ತದೆ. ಸಾಹಿತ್ಯವು ಸಂಗೀತ ಹದವನ್ನು ಮುಟ್ಟಬೇಕು ಎನ್ನುವುದು ನನ್ನ ಬರಹದ ಅಪೇಕ್ಷೆ. ಸಾಹಿತ್ಯದಿಂದ ನೇರವಾಗಿ ಸಮಾಜ ಸುಧಾರಣೆ ಆಗುವುದಿಲ್ಲ. ಆದರೆ, ಸೂಕ್ಷ್ಮ ಸಂವೇದನೆ ಬೆಳೆಸುತ್ತದೆ.

*ಸಾಹಿತ್ಯ ಲೋಕದ ಕುರಿತು ಒಂದಿಷ್ಟು ಹೇಳಿ...
ಲೋಕದ ಕುರಿತು ಮಾತನಾಡಿದರೆ ಇಲ್ಲದ ವಿವಾದ ಸೃಷ್ಟಿಯಾಗುತ್ತದೆ. ನನ್ನ ಸಾಹಿತ್ಯದ ಬಗೆಗೆ ಕೇಳಿದರೆ ಮಾತನಾಡುತ್ತೇನೆ.

*ನಿಮ್ಮ ಕಾದಂಬರಿಗಳಲ್ಲಿ ಕಾಮದ ವಿಜೃಂಭಣೆ ಇರುತ್ತದೆ...
ನನ್ನ ಕಾದಂಬರಿಗಳಲ್ಲಿ ಹೋಲ್‌ಸೇಲ್‌ (ಸಾರಾ­ಸಗಟು) ಕಾಮ ಇದೆ ಎನ್ನಲು ಆಗುವುದಿಲ್ಲ. ಯಾವುದೇ ರಸವಾಗಲಿ ಅದರ ಹದ ಮುಟ್ಟಬೇಕು. ಹೀಗಾಗಿ ವಿವರವಾಗಿ ಬರೆಯುತ್ತೇನೆ. ಗಂಡು–ಹೆಣ್ಣಿನ ಸಂಬಂಧ ತಿಳಿಸದಿದ್ದರೆ ತೀವ್ರತೆ ಬರಲ್ಲ. ಇಷ್ಟಕ್ಕೂ ಕಾಳಿದಾಸನ ಕಾವ್ಯದಲ್ಲಿ ಬರುವ ಶೃಂಗಾರದ 20ರಲ್ಲಿ ಒಂದು ಭಾಗವೂ ನನ್ನ ಕಾದಂಬರಿಯಲ್ಲಿಲ್ಲ. ಇಂತಹ ಟೀಕೆಗಳಿಗಿಂತ ಕಾದಂಬರಿ ಒಟ್ಟು ಧ್ವನಿಯನ್ನು ಅರ್ಥಮಾಡಿಕೊಳ್ಳಬೇಕು.

*ಕೃಷ್ಣನ ಸಂಸ್ಕೃತಿ ಹೆಚ್ಚಿದೆಯೇ?
ಇಲ್ಲ. ಕೃಷ್ಣನ ಸಂಸ್ಕೃತಿಯನ್ನು ಬಿಟ್ಟೇ ನಾವು ಹಾಳಾಗಿದ್ದು. ರಾಮನದು ನೈತಿಕ ವ್ಯಕ್ತಿತ್ವ. ಕೃಷ್ಣನದು ಕಲಾತ್ಮಕ ವ್ಯಕ್ತಿತ್ವ. ರಾಮನಂತೆ ಬದುಕಲು ಯಾರಿಗೂ ಆಗಲ್ಲ. ಅಹಿಂಸೆಯನ್ನು ಪ್ರತಿಪಾದಿಸುತ್ತಲೇ ಆತ್ಮ­ರಕ್ಷಣೆಗಾಗಿ ಹಿಂಸೆಗೂ ಸಿದ್ಧವಾಗಬೇಕು ಎನ್ನುತ್ತಾನೆ ಕೃಷ್ಣ. ನೆಹರೂ ಈ ನೀತಿಯನ್ನು ಮರೆತಿದ್ದರಿಂದಲೇ ಕಾಶ್ಮೀರ ವಿವಾದ, ಚೀನಾ ಆಕ್ರಮಣ ಎಲ್ಲದಕ್ಕೂ ಕಾರಣವಾಯಿತು. ಗೋಪಿಕಾ ಸ್ತ್ರೀಯರ ಆಟದ ಬಗೆಗೆ ‘ಹರಿಕಥೆ’ ಹೇಳುತ್ತಾರೆ.

ವಾಸ್ತವವಾಗಿ ನರಕಾಸುರನಿಂದ ಅಪಹರಣಕ್ಕೆ ಒಳಗಾದ ಮಹಿಳೆಯರಿಗೆ ಆತ ಹೊಸ ಬಾಳನ್ನು ಕೊಟ್ಟಿದ್ದ. ಕೆಲವರಿಗೆ ಕೃಷ್ಣನಿಂದ ಮಕ್ಕಳು ಆಗಿರುವುದು ನಿಜ ಕೂಡ.

*ನಿಮಗೆ ಜ್ಞಾನಪೀಠ ಪ್ರಶಸ್ತಿಯನ್ನು ತಪ್ಪಿಸಲಾಯಿತೆ?
ಉತ್ತರ ಹೇಳಲು ಲಾಯಕ್ಕಿಲ್ಲದ ಪ್ರಶ್ನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.