ADVERTISEMENT

ಸುಬ್ಬಯ್ಯ ಶೆಟ್ಟಿಗೆ ಅರಸು ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಿ.ಸುಬ್ಬಯ್ಯ ಶೆಟ್ಟಿ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ. ಸಚಿವ ಎಚ್‌.ಆಂಜನೇಯ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜ್‌, ಸುಬ್ಬಯ್ಯ ಶೆಟ್ಟಿ ಅವರ ಪತ್ನಿ ಶಾಲಿನಿ ಹೆಗ್ಡೆ ಅವರನ್ನೂ ಕಾಣಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಿ.ಸುಬ್ಬಯ್ಯ ಶೆಟ್ಟಿ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ. ಸಚಿವ ಎಚ್‌.ಆಂಜನೇಯ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜ್‌, ಸುಬ್ಬಯ್ಯ ಶೆಟ್ಟಿ ಅವರ ಪತ್ನಿ ಶಾಲಿನಿ ಹೆಗ್ಡೆ ಅವರನ್ನೂ ಕಾಣಬಹುದು.   

ಬೆಂಗಳೂರು: ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ ವಿಧಾನಸೌಧ­ದಲ್ಲಿ ಬುಧವಾರ ‘ದೇವರಾಜ ಅರಸು’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 99ನೇ ಜನ್ಮ­ದಿನಾಚರಣೆ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಬ್ಬಯ್ಯ ಶೆಟ್ಟರು  ಮಾತನಾಡಿ, ‘ವಿನೋಭಾ ಭಾವೆ ಅವರ ಭೂದಾನ ಯಜ್ಞ, ಇಂದಿರಾಗಾಂಧಿ­ಯವರ ಗರೀಬಿ ಹಟಾವೋ ಮುಂತಾದ ಕಾರ್ಯಕ್ರಮ­ಗಳು ಅರಸು ಅವರಿಗೆ ಸ್ಫೂರ್ತಿಯಾಗಿದ್ದವು’ ಎಂದರು.

‘ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಕರ್ನಾಟಕದಲ್ಲಿ ಭೂಸುಧಾರಣೆಗೆ ಸಂಬಂಧಿಸಿದಂತೆ ಯಾವುದೇ ಹೋರಾಟ ಇಲ್ಲದಿದ್ದರೂ ಅರಸು ಅವರು ಭೂ-­ಸುಧಾ­ರಣಾ ಕಾಯ್ದೆಯನ್ನು ಜಾರಿಗೆ ತಂದರು. ಸಾಮಾಜಿಕ ನ್ಯಾಯದಲ್ಲಿ ಬದ್ಧತೆ ಇರುವವರು ಮಾತ್ರ ಇಂಥ ಕಾನೂನು ತರಲು ಸಾಧ್ಯ’ ಎಂದು ಅವರು ಹೇಳಿದರು.

ಅವರ ಸಂಪುಟದಲ್ಲಿ ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟರು ತಮ್ಮ ಜಮೀನನ್ನೇ ಬಡವರಿಗೆ ಕೊಟ್ಟು ಕಾಯ್ದೆಯನ್ನು ಸ್ವತಃ ಜಾರಿಗೊಳಿಸಿದ್ದರು. ಇಂಥ ಮೌಲ್ಯ­ಯುತ ರಾಜಕಾರಣಿಗೆ ಅರಸು ಹೆಸರಿನ ಪ್ರಶಸ್ತಿ ನೀಡುತ್ತಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದರು.

ಆಲೋಚಿಸಿ:  ಸಾಮಾಜಿಕ ನ್ಯಾಯದ ಪರ ಯಾರಿದ್ದಾರೆ, ವಿರೋಧವಾಗಿ ಯಾರಿ­ದ್ದಾರೆ ಎಂಬುದನ್ನು ಹಿಂದುಳಿದ ವರ್ಗದ ಜನರು ಮೊದಲು ಅರ್ಥ ಮಾಡಿ­ಕೊಳ್ಳಬೇಕು. ಆ ನಂತರ ಸರಿ­ಯಾದ ತೀರ್ಮಾನಗಳನ್ನೇ ಮಾಡಬೇಕು ಎಂದು ಅವರು ಸೂಚ್ಯವಾಗಿ ಹೇಳಿದರು.

ಶತಮಾನೋತ್ಸವಕ್ಕೆ ಸಿದ್ಧತೆ:  ಮುಂದಿನ ವರ್ಷ ನಡೆಯಲಿರುವ ಅರಸು ಜನ್ಮ ಶತ­ಮಾನೋತ್ಸವದ ಅದ್ದೂರಿ, ಅರ್ಥ­ಪೂರ್ಣ ಆಚರಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು.

ಪಾರದರ್ಶಕ ಆಯ್ಕೆ: ಆಂಜನೇಯ ಮಾತನಾಡಿ,  ಪ್ರಶಸ್ತಿಗೆ ಪಾರದರ್ಶಕ­ವಾಗಿ ಅರ್ಹರನ್ನು ಆಯ್ಕೆ ಮಾಡಬೇಕು ಎಂಬ ಉದ್ದೇಶದಿಂದ  ಕೆ.ಮರುಳಸಿದ್ದಪ್ಪ ಅಧ್ಯಕ್ಷತೆಯ ಸಮಿತಿಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಅರಸು ಸಂಶೋಧನಾ ಸಂಸ್ಥೆ ಹೊರತಂದ ಡಿವಿಡಿಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಕೊಟ್ಟು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.