ADVERTISEMENT

ಸೆಪ್ಟೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ– ಘೋರ್ಪಡೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಳಗಾವಿ: ಡಾ.ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸು ಆಧರಿಸಿ ಹಿಂದುಳಿದ 114 ತಾಲ್ಲೂಕುಗಳಲ್ಲಿ ಆಗಿರುವ ಪ್ರಗತಿ ಕುರಿತ ವರದಿಯನ್ನು ಸೆಪ್ಟೆಂಬರ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ವೆಂಕಟರಾವ್‌ ವೈ. ಘೋರ್ಪಡೆ ಬುಧವಾರ ಇಲ್ಲಿ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
‘ನಂಜುಂಡಪ್ಪ ವರದಿ ಆಧರಿಸಿ 2007–08ರಿಂದ 2014–15ರ ವರೆಗೆ ವಿಶೇಷ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ₹ 11,272 ಕೋಟಿ ಬಿಡುಗಡೆಯಾಗಿದ್ದು, ₹ 10,338 ಕೋಟಿ ಖರ್ಚಾಗಿದೆ. ಯೋಜನೆಯನ್ನು ಮತ್ತೆ ಐದು ವರ್ಷ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಪ್ರತಿ ವರ್ಷ ₹ 3,000 ಕೋಟಿ ಅನುದಾನ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ಹಣ ಹೇಗೆ ಬಳಸಲಾಗುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಿದ್ದೇನೆ’ ಎಂದರು.

‘ಈಗಾಗಲೇ ಎಲ್ಲ ವಿಭಾಗದಲ್ಲೂ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ವಿವಿಧ 50 ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಗುಣಮಟ್ಟದ ಕಾಮಗಾರಿಗಳು ನಡೆದಿವೆ. ಪರಿಷ್ಕೃತ ನಮೂನೆಯಲ್ಲಿ ಮಾಹಿತಿ ಪಡೆಯುತ್ತಿದ್ದೇನೆ. ಇದನ್ನು ಅಂತರ್ಜಾಲದಲ್ಲೂ ಅಪ್‌ಲೋಡ್‌ ಮಾಡಲಾಗುವುದು’ ಎಂದು ತಿಳಿಸಿದರು.

‘ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಠಾನದ ಕುರಿತು ಮೌಲ್ಯಮಾಪನ ಮಾಡಿಸುವ ಸಂಬಂಧ ಧಾರವಾಡದ ಸಿ.ಎಂ.ಡಿ.ಆರ್‌ (ಬಹುಶಿಸ್ತೀಯ ಅಭಿವೃದ್ಧಿ ಅಧ್ಯಯನ ಕೇಂದ್ರ) ವರದಿ ಸಿದ್ಧಪಡಿಸಿದೆ. ಅದರ ಪ್ರಕಾರ 25 ತಾಲ್ಲೂಕುಗಳು ಅಭಿವೃದ್ಧಿ ಹೊಂದಿವೆ. 46 ತಾಲ್ಲೂಕುಗಳು ಸುಧಾರಣೆ ಕಂಡಿವೆ. ಆದರೆ ಈ ವರದಿಯನ್ನು ಸರ್ಕಾರ ಸ್ವೀಕರಿಸಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.