ADVERTISEMENT

ಸೆಪ್ಟೆಂಬರ್‌ 21ರಿಂದ ಮೈಸೂರು ದಸರಾ

30ರಂದು ಜಂಬೂ ಸವಾರಿ: ವಿಜೃಂಭಣೆಯ ಮೆರುಗು ನೀಡಲು ರಾಜ್ಯ ಸರ್ಕಾರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಸೆಪ್ಟೆಂಬರ್‌ 21ರಿಂದ ಮೈಸೂರು ದಸರಾ
ಸೆಪ್ಟೆಂಬರ್‌ 21ರಿಂದ ಮೈಸೂರು ದಸರಾ   

ಬೆಂಗಳೂರು: ಕಳೆದ ವರ್ಷಕ್ಕಿಂತ ₹  2 ಕೋಟಿ ಹೆಚ್ಚು ಹಣ ಬಿಡುಗಡೆ ಮಾಡುವ ಮೂಲಕ ಮೈಸೂರು ದಸರಾಕ್ಕೆ ವಿಜೃಂಭಣೆಯ ಮೆರಗು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ದಸರಾ ಉತ್ಸವ ಸೆಪ್ಟೆಂಬರ್‌ 21ರಿಂದ ಆರಂಭವಾಗಲಿದ್ದು, 30ರಂದು ಜಂಬೂ  ಸವಾರಿ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ  ವಿಧಾನಸೌಧದಲ್ಲಿ ಸೋಮವಾರ ನಡೆದ ದಸರಾ ಉತ್ಸವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ADVERTISEMENT

ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಕನ್ನಡ ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಹಾಗೂ ದೇಶ ವಿದೇಶದ ಜನರನ್ನು ಆಕರ್ಷಿಸುವ ರೀತಿಯಲ್ಲಿ ದಸರಾ ಆಚರಿಸಲು ನಿರ್ಧರಿಸಲಾಗಿದೆ’ ಎಂದರು.

‘ಕಳೆದ ವರ್ಷ ದಸರಾಕ್ಕೆ ₹13 ಕೋಟಿ ಖರ್ಚು ಮಾಡಲಾಗಿತ್ತು. ಈ ವರ್ಷ ₹15 ಕೋಟಿ ಅನುದಾನ ನೀಡಲಾಗುವುದು’ ಎಂದು ಅವರು ಪ್ರಕಟಿಸಿದರು.

ಕಳೆದ ವರ್ಷದ ಬಾಕಿ ₹6.45 ಕೋಟಿ: ‘ಕಳೆದ ವರ್ಷದ ದಸರಾ ಉತ್ಸವಕ್ಕೆ ಖರ್ಚು ಮಾಡಿದ್ದ ₹6.45 ಕೋಟಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು’ ಎಂದೂ ಅವರು  ತಿಳಿಸಿದರು.

‘ಕೆಲವು ಬಿಲ್‌ಗಳ ಬಗ್ಗೆ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಲಾಗಿತ್ತು. ಆ ಸಮಸ್ಯೆ ಇತ್ಯರ್ಥವಾಗಿದೆ. ಈ ವರ್ಷದ ಅನುದಾನದ ಜತೆಗೆ ಬಾಕಿಯನ್ನೂ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ’ ಎಂದರು.

‘ರಾಮಸ್ವಾಮಿ ವೃತ್ತದಿಂದ ಬನ್ನಿಮಂಟಪದವರೆಗೆ ಈಗಾಗಲೇ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ನಗರಪಾಲಿಕೆ, ಲೋಕೋಪಯೋಗಿ ಇಲಾಖೆಗಳು ಜತೆಗೂಡಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಿವೆ’ ಎಂದೂ ಸಿದ್ದರಾಮಯ್ಯ ಹೇಳಿದರು.

ಮೈಸೂರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ, ರಸ್ತೆ ಗುಂಡಿ ಮುಚ್ಚಲು ಹೆಚ್ಚುವರಿಯಾಗಿ ₹10 ಕೋಟಿ  ನೀಡಲು ಸಭೆ ತೀರ್ಮಾನಿಸಿದೆ.

ಪ್ರಮುಖ ನಿರ್ಣಯಗಳು:
* ದಸರಾ ಉದ್ಘಾಟನೆ ದಿನವೇ ವಸ್ತು  ಪ್ರದರ್ಶನದ ಎಲ್ಲ ಮಳಿಗೆಗಳೂ ಸುಸಜ್ಜಿತವಾಗಿ ತೆರೆದಿರುವಂತೆ ನೋಡಿಕೊಳ್ಳಬೇಕು.
* ಎಲ್ಲ ಜಿಲ್ಲಾ ಪಂಚಾಯತಿಗಳ ಮಳಿಗೆಗಳ ಬದಲು ಆಯ್ದ 20 ಇಲಾಖೆಗಳ ಸಾಧನೆ ಬಿಂಬಿಸುವ ಮಳಿಗೆಗಳಿಗೆ ಸೀಮಿತಗೊಳಿಸಬೇಕು.
* ಜಂಬೂ ಸವಾರಿಯ ವೈಭವ ಹೆಚ್ಚಿಸಲು ಹೊರ ರಾಜ್ಯಗಳ ವಿಶಿಷ್ಟ ಕಲಾ ತಂಡಗಳನ್ನು ಕರೆಸಲು ತೀರ್ಮಾನ.
* ಜಂಬೂ ಸವಾರಿ ಮತ್ತು ಬನ್ನಿ ಮಂಟಪದ ಪಂಜಿನ ಕವಾಯತು ವೀಕ್ಷಿಸಲು ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟ.
* ದಸರಾ ಪ್ರಚಾರದ ಉಸ್ತುವಾರಿ ಹೊಣೆ ಪ್ರವಾಸೋದ್ಯಮ ಇಲಾಖೆ ಹೆಗಲಿಗೆ.
* ಜನಪ್ರಿಯಗೊಳಿಸಲು ಲಂಡನ್‌, ಪ್ಯಾರಿಸ್‌, ಬ್ಯಾಂಕಾಕ್‌, ಸಿಂಗಪುರಗಳಲ್ಲಿ ರೋಡ್‌ ಶೋ.
* ದಸರಾ ಉತ್ಸವದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ವಿವಿಧ ಕಾರ್ಯಕ್ರಮ.
* ಸೆಪ್ಟೆಂಬರ್‌ 27 ರಂ ದು ನಡೆಯಲಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಮೈಸೂರಿನಲ್ಲಿ ನಡೆಸಲು ನಿರ್ಧಾರ.
* ದಸರಾ ವೀಕ್ಷಣೆಗೆ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರ ವಾಹನಗಳಿಗೆ ಪ್ರವೇಶ ತೆರಿಗೆ ವಿನಾಯಿತಿ.
* ಜಂಬೂ ಸವಾರಿ ಮತ್ತು ಪಂಜಿನ ಕವಾಯತು ಕಾರ್ಯಕ್ರಮದ ಪ್ರವೇಶ ದ್ವಾರ, ಅಗತ್ಯ ಎನಿಸುವ ಸ್ಥಳಗಳಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಲು ತೀರ್ಮಾನ.

***

ಉದ್ಘಾಟಕರ ಆಯ್ಕೆ ಮುಖ್ಯಮಂತ್ರಿ ವಿವೇಚನೆಗೆ
ದಸರಾ ಉದ್ಘಾಟಿಸಲು ಯಾರನ್ನು ಕರೆಯಬೇಕು ಎಂಬ ತೀರ್ಮಾನವನ್ನು ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗಿದೆ.

‘8 ರಿಂದ 10 ಹೆಸರುಗಳು ನನ್ನ ತಲೆಯಲ್ಲಿವೆ. ಯಾರನ್ನು ಕರೆಯಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ನನಗೆ ಬಿಟ್ಟಿದ್ದಾರೆ. ಇನ್ನೊಂದು ವಾರದಲ್ಲಿ ಯೋಚನೆ ಮಾಡಿ ಹೇಳುತ್ತೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದಕ್ಕೆ ಮುನ್ನ ನಡೆದ ಸಭೆಯಲ್ಲಿ, ಉದ್ಘಾಟಕರ ಹೆಸರು ಸೂಚಿಸಲು ಮೈಸೂರು ಮಹಾನಗರ ಪಾಲಿಕೆ ಮೇಯರ್‌ ರವಿ ಮುಂದಾದರು. ಆದರೆ, ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು  ತಡೆದರು. ಆಗ ಸಿದ್ದರಾಮಯ್ಯ, ‘ನೀನು ಯಾರ ಹೆಸರು ಹೇಳುತ್ತೀಯಾ ಎಂದು ಗೊತ್ತು.  ಈ ಬಗ್ಗೆ ಸಮಿತಿ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದ್ದಾಗಿ ತಿಳಿದುಬಂದಿದೆ.

***

ದಸರೆ; 15 ಆನೆಗಳಿಗೆ ಒಪ್ಪಿಗೆ
ಮೈಸೂರು:
ಈ ಬಾರಿಯ ದಸರಾ ಮಹೋತ್ಸವದಲ್ಲಿ 15 ಆನೆಗಳು ಭಾಗವಹಿಸುವುದಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಲ್ಲಿಸಿದ್ದ 16 ಆನೆಗಳ ಪ್ರಸ್ತಾವದಲ್ಲಿ ಸರಳಾ ಎಂಬ ಆನೆಗೆ ಒಪ್ಪಿಗೆ ದೊರೆತಿಲ್ಲ. ಕೇವಲ ಮೂರು ಹೆಣ್ಣಾನೆಗಳು ಸೇರಿದಂತೆ 15 ಆನೆಗಳ ತಂಡ ದಸರಾದಲ್ಲಿ ಪಾಲ್ಗೊಳ್ಳಲಿದೆ. 76 ವರ್ಷದ ಸರಳಾ ಚುರುಕಿನಿಂದ ಇದ್ದರೂ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅದನ್ನು ಮಹೋತ್ಸವದಿಂದ ಹೊರಗಿಡಲಾಗಿದೆ.

ಹೆಣ್ಣಾನೆಗಳ ಕೊರತೆ: ಈ ಬಾರಿಯ ದಸರಾ ಮಹೋತ್ಸವಕ್ಕೆ ಹೆಣ್ಣಾನೆಗಳ ಕೊರತೆ ಕಾಡುತ್ತಿದೆ. ಬಹಳಷ್ಟು ಹೆಣ್ಣಾನೆಗಳು ಗರ್ಭಿಣಿ ಇಲ್ಲವೆ ಬಾಣಂತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.