ADVERTISEMENT

ಸೈಕೊ ಜೊತೆ ಅರ್ಧ ತಾಸು ಮಾತು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ಬೆಂಗಳೂರು: `ರಾಜ್ಯ ಪೊಲೀಸರ ನಿದ್ದೆಗೆಡಿಸಿದ್ದ ಸೈಕೊ ಕಿಲ್ಲರ್, ಈ ಗುಡಿಸಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ ಎಂಬ ಊಹೆ ಕೂಡ ಇರಲಿಲ್ಲ. ಆತನ ಕಾಲುಗಳು ಊದಿಕೊಂಡಿದ್ದವು. ನಡೆದಾಡಲೂ ಸಂಕಟಪಡುತ್ತಿದ್ದ. ತಾನು ತಮಿಳುನಾಡು ಮೂಲದ ಬಸ್ ಚಾಲಕನೆಂದು ಹೇಳಿಕೊಂಡ. ಊಟ ಕೊಡಿಸಿ ಉಪಚರಿಸಿದ ಬಳಿಕ ಸ್ನೇಹಿತನೊಬ್ಬನಿಗೆ ಕರೆ ಮಾಡಲು ನಾನೇ ಮೊಬೈಲ್‌ಕೊಟ್ಟಿದ್ದೆ' ಎಂದು ಕೂಡ್ಲು ಗ್ರಾಮದ ಟ್ಯಾಂಕರ್ ಚಾಲಕ ವಿಜಯ್‌ಕುಮಾರ್ ತಿಳಿಸಿದರು.

ಪೊಲೀಸರು ಸೈಕೊ ಶಂಕರ್‌ನನ್ನು ಬಂಧಿಸುವ ಮುನ್ನ ಆತ ವಿಜಯ್‌ಕುಮಾರ್ ಅವರ ಜತೆ ಸುಮಾರು ಅರ್ಧ ತಾಸು ಮಾತಾಡಿದ್ದ. ಈ ಬಗ್ಗೆ `ಪ್ರಜಾವಾಣಿ'ಗೆ ವಿವರಿಸಿದ ಅವರು, `ಕೂಡ್ಲು ಗ್ರಾಮದ ಸದ್ಗುರು ಶಾಲೆ ಪಕ್ಕದಲ್ಲಿ ನರೇಂದ್ರ ರೆಡ್ಡಿ ಜಲ ಶುದ್ಧೀಕರಣ ಘಟಕವಿದೆ. ಈ ಘಟಕದಿಂದ ಪ್ರತಿದಿನ ಟ್ಯಾಂಕರ್‌ನಲ್ಲಿ ನೀರು ಸಂಗ್ರಹಿಸಿ ಪೂರೈಕೆ ಮಾಡುತ್ತೇನೆ. ಸಮೀಪದ ಕೆರೆಯಲ್ಲಿ ಮೀನು ಹಿಡಿಯುವವರು ವಿಶ್ರಾಂತಿ ಪಡೆಯುವ ಸಲುವಾಗಿ ಇಲ್ಲಿ ತಾತ್ಕಾಲಿಕ ಗುಡಿಸಲು ಹಾಕಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ಟ್ಯಾಂಕರ್‌ಗೆ ನೀರು ತುಂಬಲು ಅಲ್ಲಿಗೆ ಬಂದಾಗ ಅಪರಿಚಿತ ವ್ಯಕ್ತಿಯೊಬ್ಬ ಗುಡಿಸಲಿನಲ್ಲಿ ಅರೆನಗ್ನನಾಗಿ ಮಲಗಿದ್ದ' ಎಂದರು.

`ಆತನನ್ನು ವಿಚಾರಿಸಿದಾಗ, ತಾನು ತಮಿಳುನಾಡಿನಲ್ಲಿ ಬಸ್ ಚಾಲಕ. ನಗರಕ್ಕೆ ಪ್ರಯಾಣಿಕರನ್ನು ಕರೆತರುವಾಗ ಹೊಸೂರು ರಸ್ತೆಯಲ್ಲಿ ಅಪಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟರು. ಈ ಪ್ರಕರಣ ಸಂಬಂಧ ಪೊಲೀಸರು ಬೆನ್ನು ಬಿದ್ದಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿ ಎಂದು ವಿನಂತಿಸಿದ. ನಂತರ ನನ್ನ ಮೊಬೈಲ್‌ನಿಂದಲೇ ಪರಿಚಿತರೊಬ್ಬರಿಗೆ ಕರೆ ಮಾಡಿ ಮನೆಗೆ ಬರುತ್ತಿದ್ದೇನೆ. ಬೈಕ್ ಕೊಡು ಎಂದು ಹೇಳಿದ' ಎಂದು ವಿವರಿಸಿದರು.

`ಆತ ಕರೆ ಸ್ಥಗಿತಗೊಳಿಸಿ ಮೊಬೈಲ್ ಹಿಂದಿರುಗಿಸಿದ ಕೆಲವೇ ನಿಮಿಷಗಳಲ್ಲಿ, ಅದೇ ಮೊಬೈಲ್ ಸಂಖ್ಯೆಯಿಂದ ವಾಪಸ್ ಕರೆ ಬಂತು. ನಾನು ಬಸ್ ಚಾಲಕ ಶಂಕರನ ಸ್ನೇಹಿತ; ಆತನನ್ನು ಮನೆಗೆ ಕರೆದುಕೊಂಡು ಹೋಗಬೇಕು ಎಂದು ಕರೆ ಮಾಡಿದ ವ್ಯಕ್ತಿ ಹೇಳಿದರು. ಹೀಗಾಗಿ, ಕೂಡ್ಲು ಸಮೀಪದ ನೀರು ಶುದ್ಧೀಕರಣ ಘಟಕದ ಬಳಿ ಬರುವಂತೆ ಅವರಿಗೆ ಸೂಚಿಸಿದೆ. ಆದರೆ, ಕೆಲವೇ ಕ್ಷಣಗಳಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಗುಡಿಸಲನ್ನು ಸುತ್ತುವರಿದಾಗ ಬೆರಗಾಯಿತು'.

ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ಯುವಾಗ ಈತ `ಸೈಕೊ ಶಂಕರ್' ಎಂದರು. ಅವರ ಮಾತನ್ನು ಕೇಳಿ ಒಂದು ಕ್ಷಣ ಗಾಬರಿಯಾಯಿತು. ಇಷ್ಟು ದಿನ ಮಾಧ್ಯಮಗಳಲ್ಲಿ ಪ್ರಸಾರವಾದ ಶಂಕರ್ ಭಾವಚಿತ್ರಕ್ಕೂ, ಈತನಿರುವ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.