ADVERTISEMENT

ಹಂಪಿ ವಿ.ವಿಗೆ ₹200 ಕೋಟಿ ನೆರವು ನೀಡಲು ಸಿ.ಎಂ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 20:17 IST
Last Updated 3 ಮಾರ್ಚ್ 2017, 20:17 IST

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹಣಕಾಸು ಮತ್ತು ಅಗತ್ಯ ಸಿಬ್ಬಂದಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಸಂಬಂಧ ಕರೆದಿದ್ದ ಸಾಹಿತಿಗಳ ಸಭೆಯಲ್ಲಿ ಸಿದ್ದರಾಮಯ್ಯ ಈ ಭರವಸೆ ನೀಡಿದರು. ಹಂಪಿ ವಿಶ್ವವಿದ್ಯಾಲಯ ಉದ್ದೇಶ ಸಫಲವಾಗುವ ದಾರಿಯಲ್ಲಿ ಇಲ್ಲ ಎಂಬ ಅಭಿಪ್ರಾಯ ಸಾಹಿತಿಗಳಿಂದ ವ್ಯಕ್ತವಾಗಿದೆ. ವಿ.ವಿಗೆ ಹೊಸ ಸ್ವರೂಪ ನೀಡುವುದರ ಜೊತೆಗೆ ಅಗತ್ಯ ಅನುದಾನ ಒದಗಿಸಿ ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು. ವಿಶ್ವವಿದ್ಯಾಲಯಕ್ಕೆ ಇರುವ ವಿಶೇಷ ಸ್ಥಾನಮಾನ ಉಳಿಸಲು ಸರ್ಕಾರ ಗಮನ ಹರಿಸಲಿದೆ. ವಿ.ವಿಯ ಬೆಳ್ಳಿ ಹಬ್ಬ ಆಚರಣೆಗೆ ₹ 200 ಕೋಟಿ ಅನುದಾನ ಒದಗಿಸಬೇಕೆಂಬ ಬೇಡಿಕೆ ಈಡೇರಿಸುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ವಿ.ವಿಯಲ್ಲಿ 333 ಬೋಧಕ ಮತ್ತು 200 ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಮುಂದಾಗಬೇಕು ಎಂದು ತಿಳಿಸಿದರು. ವಿ.ವಿ ಕುಲಪತಿ ಪ್ರೊ.ಮಲ್ಲಿಕಾ ಘಂಟಿ, ಸಾಹಿತಿಗಳಾದ ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ಡಾ.ಕೆ. ಮರುಳ ಸಿದ್ದಪ್ಪ, ಪ್ರೊ. ಸಿದ್ದರಾಮಯ್ಯ, ‘ಮುಖ್ಯಮಂತ್ರಿ’ಚಂದ್ರು, ಹಂ.ಪ ನಾಗರಾಜಯ್ಯ, ಕಮಲಾ ಹಂಪನಾ, ಸಿದ್ದಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.