ADVERTISEMENT

ಹವ್ಯಕ ಸಮಾಜ ಈಗ ಒಡೆದ ಮನೆ

ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣ: ಪರ–ವಿರೋಧ ಚರ್ಚೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2015, 19:46 IST
Last Updated 29 ಅಕ್ಟೋಬರ್ 2015, 19:46 IST

ಬೆಂಗಳೂರು: ‘ನೀವು ಮಠದ ವಿರುದ್ಧವೋ, ಪರವೋ?’
ಹವ್ಯಕ ಬ್ರಾಹ್ಮಣರಲ್ಲಿ ವಧೂ–ವರರ ಜಾತಕ ವಿನಿಮಯದ ಸಂದರ್ಭದಲ್ಲಿ ಇಂತಹದ್ದೊಂದು ಪ್ರಶ್ನೆ ಈಗ ಕಡ್ಡಾಯವಾಗಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳು ಹವ್ಯಕ ಸಮಾಜದಲ್ಲಿ ಬಿರುಕುಂಟು ಮಾಡಿದೆ.

ಮಠದ ಪರ ಇರುವವರು, ವಿರುದ್ಧ ಗುಂಪಿನ ಜೊತೆಗೆ ವೈವಾಹಿಕ ಸಂಬಂಧ ಮಾಡಿಕೊಳ್ಳಲು ಮುಂದಾಗುತ್ತಿಲ್ಲ.
ಅಷ್ಟೇ ಅಲ್ಲ; ಇದು ವೈವಾಹಿಕ ಸಂಬಂಧಕ್ಕೆ ಮಾತ್ರ ಸೀಮಿತವಾಗಿಲ್ಲ. ಮನೆಯಲ್ಲಿ ನಡೆಯುವ ಶುಭ–ಅಶುಭ ಕಾರ್ಯಕ್ಕೆ ಪುರೋಹಿತರನ್ನು ಕರೆಯುವ ವಿಚಾರದಲ್ಲಿಯೂ ಈ ಅಘೋಷಿತ ಬಹಿಷ್ಕಾರ ಮುಂದುವರಿದಿದೆ. ಮಠದ ಪರವಾಗಿರುವವರು ಮಠದ ವಿರುದ್ಧ ಇರುವ ಪುರೋಹಿತರನ್ನು  ತಮ್ಮ ಮನೆಗೆ ಕರೆಯುತ್ತಿಲ್ಲ. ಮಠದ ವಿರುದ್ಧ ಇರುವ  ವರ ಮನೆಗಳಿಗೆ ಪರ ಇರುವ  ಪುರೋಹಿತರು ಹೋಗುತ್ತಿಲ್ಲ.

ವಧು ಮತ್ತು ವರನಿಗೆ ಪರಸ್ಪರ ಒಪ್ಪಿಗೆಯಾದ ನಂತರ, ಶ್ರೀಗಳ ಪರ ವಿರೋಧದ ಕಾರಣಕ್ಕೆ ಸಂಬಂಧ ಮುರಿದು ಬಿದ್ದ ಘಟನೆ ವಾರದ ಹಿಂದೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಪೋಷಕರೊಬ್ಬರು ಮಗಳ ಜಾತಕ ಕೊಡುವ ಸಂಬಂಧ ಮಾತನಾಡುವ ಸಂದರ್ಭದಲ್ಲಿ ವರನ ಕಡೆಯವರು ಶ್ರೀಗಳ ಪರವಾಗಿದ್ದಾರೋ ಇಲ್ಲವೋ ಎಂಬ ಬಗ್ಗೆ ವಿಚಾರಿಸಿರುವುದನ್ನು ವರನ ತಾಯಿ ‘ಪ್ರಜಾವಾಣಿ’ಗೆ ಖಚಿತ ಪಡಿಸಿದ್ದಾರೆ.

ತೆರಳದಿರಲು ಸೂಚನೆ:  ಸಮಾನ ಮನಸ್ಕರೊಂದಿಗೆ ಗುರುತಿಸಿಕೊಂಡಿರುವ ಕಾಸರಗೋಡು ಭಾಗದಲ್ಲಿ ನೆಲೆಸಿರುವ ಹವ್ಯಕ ಮುಖಂಡರೊಬ್ಬರ ಪುತ್ರನ ಮದುವೆ ಸಮಾರಂಭದಲ್ಲಿ ಸಮಾಜದವರು ಭಾಗವಹಿಸಬಾರದು ಎಂದು  ಶ್ರೀಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಮುಖಂಡರು ಮೌಖಿಕವಾಗಿ ತಿಳಿಸಿದ್ದರು ಎಂಬ ಆರೋಪ ಇದೆ. ಆದರೆ, ಮಠದ ಬೆಂಬಲಿಗರು ಇದನ್ನು ಅಲ್ಲಗಳೆದಿದ್ದಾರೆ. 

‘ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ನಿರ್ಧರಿಸುತ್ತದೆ. ಈ ಕಾರಣಕ್ಕೆ ಸಮಾಜದ ಒಗ್ಗಟ್ಟು ಹಾಳಾಗಬಾರದು’ ಎಂದು ಮಠದ ಶಿಷ್ಯ ಬೆಂಗಳೂರು ನಿವಾಸಿ ಕೆ. ಕುಮಾರಸ್ವಾಮಿ ಆಶಿಸಿದರು.

ಈ ವಿಚಾರವಾಗಿ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಎಸ್‌.ಜಿ. ಹೆಗಡೆ ಅವರನ್ನು ಸಂಪರ್ಕಿಸಿದಾಗ, ‘ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ಏನೂ ಮಾತನಾಡುವುದಿಲ್ಲ’ ಎಂದರು. ಮಠದ ಅಡಿಯಲ್ಲಿ ಬರುವ ಸಂಘಟನೆಯಾದ ಹವ್ಯಕ ಮಹಾ ಮಂಡಲದ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿ ಸಲು ಯತ್ನಿಸಲಾಯಿತಾದರೂ, ಸಂಪರ್ಕ ಸಾಧ್ಯವಾಗಲಿಲ್ಲ.

ಇದರಲ್ಲಿ ಸತ್ಯ ಇಲ್ಲ
‘ಸಮಾಜ ಒಡೆದಿದೆ ಎನ್ನುವುದು ಸುಳ್ಳು. ಮಠದ ಸಂಘಟನೆಗಳಲ್ಲಿ ಇರುವವರು ಯಾರೂ ಹೊರ ಹೋಗಿಲ್ಲ. ಈಗ ವಿರೋಧ ವ್ಯಕ್ತಪಡಿಸುತ್ತಿರುವವರು ಹಿಂದೆಯೂ ಶ್ರೀಗಳನ್ನು ಬೆಂಬಲಿಸಿಲ್ಲ. ವಿರೋಧ ಮಾಡುವಂತೆ ಅಥವಾ ಬಹಿಷ್ಕಾರ ಹಾಕುವಂತೆ ಮಠ ಆದೇಶಿಸಿಲ್ಲ. ಶ್ರೀಗಳ ಪರವಾಗಿರುವವರು ಯಾರಾನ್ನಾದರೂ ವಿರೋಧಿಸುತ್ತಿದ್ದಾರೆ ಎಂದರೆ ಅದು ಅವರ ವೈಯಕ್ತಿಕ ನಿರ್ಧಾರ’ ಎಂದು ಮಠದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT