ADVERTISEMENT

ಹಿರಿಯೂರು ತಾಲ್ಲೂಕು ಬಳಗಟ್ಟ: ಕಾಡಾನೆ ದಾಳಿಗೆ ಗರ್ಭಿಣಿ ಸಾವು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 7:43 IST
Last Updated 28 ಆಗಸ್ಟ್ 2016, 7:43 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಕಾಡಾನೆ ದಾಳಿಯಿಂದಾಗಿ ಏಳು ತಿಂಗಳ ಗರ್ಭಿಣಿ ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆ ಗಾಯಗೊಂಡ ಘಟನೆ ಹಿರಿಯೂರು ತಾಲ್ಲೂಕಿನ ಬಳಗಟ್ಟ ಗ್ರಾಮದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ಮೃತ ಮಹಿಳೆಯನ್ನು ತಿಮ್ಮಕ್ಕ (30) ಎಂದು ಗುರುತಿಸಲಾಗಿದೆ. ಭರಮಗಿರಿ ಗ್ರಾಮದ ನೀಲಮ್ಮ ಎಂಬ ಹಿಳೆ ಗಾಯಗೊಂಡಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂಟಿ ಸಲಗ ತಿಮ್ಮಕ್ಕನ ಹೊಟ್ಟೆ ಮೇಲೆ ಕಾಲಿಟ್ಟಿದ್ದು, ಮಗು ಹೊರಗೆ ಬರುವಂತೆ ತುಳಿದಿದೆ.

ತಿಮ್ಮಕ್ಕ ಕರಿಯಪ್ಪ ಎಂಬುವರ ಪತ್ನಿ. ಈ ಕುಟುಂಬ ಬಳಗಟ್ಟದ ಹೊಲದಲ್ಲಿ ವಾಸವಿದ್ದರು. ಬೆಳಗಿನ ಜಾವ 6ಕ್ಕೆ ಆನೆ ದಾಳಿ ಮಾಡಿದೆ. ಮುಂದೆ ಭರಮಗಿರಿಯ್ತ ಹೊರಟ ಸಲಗ, ಬಹಿರ್ದೆಸೆಗೆಂದು ಬಯಲಿಗೆ ಹೊರಟಿದ್ದ ಮಹಿಳೆಯನ್ನು ಗಾಯಗೊಳಿಸಿದೆ.

ಶನಿವಾರ ಸಂಜೆ ಹಿರಿಯೂರು ಸುತ್ತಲಿನ ಗ್ರಾಮದಲ್ಲಿ ಕಾಡಾನೆ ಕಾಣಿಸಿಕೊಂಡಿತ್ತು. ನಂತರ ಆ ಆನೆ ಮಾರಿಕಣಿವೆ ಅರಣ್ಯದ ಕಡೆ ಸಾಗಿತು. ಭಾನುವಾರ ಬೆಳಿಗ್ಗೆ ಮಹಿಳೆಯರ ಮೇಲೆ ದಾಳಿ ಮಾಡಿದ ನಂತರ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರಿನಲ್ಲಿ ಈಜಾಡುತ್ತಿದ್ದವು. ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ತುಮಕೂರು ಜಿಲ್ಲೆ ಬುಕ್ಕಾಪಟ್ಟಣ, ದಸೂಡಿ ಅರಣ್ಯದಿಂದ ಆನೆ ಬಂದಿರಬಹುದು ಎಂದು ಆರ್‌ಎಫ್‌ಓ ನಾಗೇಂದ್ರನಾಯಕ್ ಅಂದಾಜಿಸಿದ್ದಾರೆ. ಆ ಆನೆ ಶನಿವಾರ ರಾತ್ರಿ ನಗರಕ್ಕೆ ಹೊಂದಿಕೊಂಡ ಲಕ್ಷಮ್ಮಜ್ಜಿ ಬಡಾವಣೆಗೆ ಮೂಲಕ ದೊಡ್ಡಘಟ್ಟ, ಬಳಘಟ್ಟ, ಭರಮಗಿರಿ ಮೂಲಕ ವಿವಿಧ ಸಾಗರ ಹಿನ್ನೀರು ಪ್ರದೇಶ ತಲುಪಿದೆ. ಮುಂದೆ ಹೊಸದುರ್ಗದ ಲಕ್ಕಿಹಳ್ಳಿ ಅರಣ್ಯದತ್ತ ಓಡಿಸುವ ಪ್ರಯತ್ನ ನಡೆದಿದೆ.

ಆರೇಳು ತಿಂಗಳ ಹಿಂದೆ ಇದೇ ದಾರಿಯಲ್ಲಿ ಆನೆ ಕಾಣಿಸಿಕೊಂಡಿತ್ತು. ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಭಾಗದಲ್ಲಿ ಆನೆ ಕಾಣಿಸಿತ್ತು ಎಂದು ಮಾಹಿತಿ ಲಭ್ಯವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.